ADVERTISEMENT

ಮರಳು ಸಮಸ್ಯೆಗೆ ಪರಿಹಾರ: ಮಂಜುನಾಥ ಗೌಡ

ಹೊಸನಗರ: ಜೆಡಿಎಸ್‌ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 12:52 IST
Last Updated 11 ಏಪ್ರಿಲ್ 2018, 12:52 IST

ಹೊಸನಗರ: ‘ಜೆಡಿಎಸ್‌ ಅಧಿಕಾರಕ್ಕೆ ಬಂದಲ್ಲಿ 6 ತಿಂಗಳಲ್ಲಿ ಮರಳು ಸಮಸ್ಯೆ ಪರಿಹರಿಸಲಾಗುವುದು’ ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್.ಎಂ.ಮಂಜುನಾಥ ಗೌಡ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಮ್ಯಾಮ್‌ಕೋಸ್ ರಸ್ತೆಯಲ್ಲಿ ಜೆಡಿಎಸ್  ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

‘ಶಾಸಕರ ಬೆಂಬಲಿಗರು ತೀರ್ಥಹಳ್ಳಿ ಕ್ಷೇತ್ರದ ಮರಳನ್ನು ಬೆಂಗಳೂರಿಗೆ ಕಳ್ಳಸಾಗಣೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಸ್ಥಳೀಯವಾಗಿ ಮರಳು ದೊರಕುವಂತೆ ಹಾಗೂ ಅದರ ರಾಜಧನ ಸ್ಥಳೀಯ ಸಂಸ್ಥೆಗೆ ಲಭ್ಯವಾಗುವಂತೆ ಮಾಡುವ ಉದ್ದೇಶ ಇದೆ’ ಎಂದರು.

ADVERTISEMENT

’ಚುನಾವಣೆ ಮುಗಿದ ಮೇಲೆ ಅಡಿಕೆಯನ್ನು ಜೀವಕ್ಕೆ ಹಾನಿಕಾರಕ ವಸ್ತು ಎಂಬ ಆದೇಶ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತರಲಿದೆ. ಇದರಿಂದ ಅಡಿಕೆ ಮರ ಕಡಿಯುವ ಪರಿಸ್ಥಿತಿ ಬರಲಿದೆ’ ಎಂದು ಎಚ್ಚರಿಸಿದರು.

’ಕರ್ನಾಟಕ ಹೊರತು ಪಡಿಸಿ ದಕ್ಷಿಣ ಭಾರತದಲ್ಲಿ ಎಲ್ಲಾ ಕಡೆ ಪ್ರಾದೇಶಿಕ ಪಕ್ಷ ಇದೆ. ಈ ಬಾರಿ ಕರ್ನಾಟಕದಲ್ಲಿಯೂ ಸಹ ಪ್ರಾದೇಶಿಕ ಪಕ್ಷ ಆಡಳಿತಕ್ಕೆ ಬರುವ ಎಲ್ಲಾ ಸೂಚನೆ ಕಂಡುಬರುತ್ತಿದೆ’ ಎಂದು ಭವಿಷ್ಯ ನುಡಿದರು.

‘ಶಾಸಕ ಕಿಮ್ಮನೆ  ನನ್ನ ವಿರುದ್ಧ ಕುಹಕದ ಮಾತು ಆಡುವುದನ್ನು ಬಿಡಲಿ. ಸೈಕಲ್‌ ಹಗರಣ, ಪ್ರಶ್ನೆ ಪತ್ರಿಕೆ ಬಯಲು ಹಗರಣಗಳ ಸರಮಾಲೆ ಹೊತ್ತಿರುವ ಶಾಸಕರು ಸಭ್ಯ, ಪ್ರಾಮಾಣಿಕ, ಸಜ್ಜನ ಎಂದು ತಮ್ಮನ್ನು ತಾವೇ ಹೊಗಳಿಕೊಳ್ಳುವ ಪರಿಪಾಠ ಬಿಡಲಿ’ ಎಂದು ಸಲಹೆ ನೀಡಿದರು.

‘ರಾಮಕೃಷ್ಣ ಹೆಗಡೆ ಕಾಲದಲ್ಲಿ ತಾಲ್ಲೂಕು ವಿದ್ಯಾರ್ಥಿ ಜನತಾದಳ, ಯುವಜನತಾದಳ ಹಾಗೂ ಜನತಾದಳದಲ್ಲಿ ಪ್ರಾಮಾಣಿಕ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ’ ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಂ.ವಿ.ಜಯರಾಮ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಜೆಡಿಎಸ್ ಪ್ರಮುಖರಾದ ಅಮೀರ ಹಂಜ, ವಾಟಗೋಡು ಸುರೇಶ, ಚಾಬುಸಾಬ್, ಲೇಖನ ಮೂರ್ತಿ, ಹರತಾಳು ನಾಗರಾಜ, ಸಂಪೆಮನೆ ಕೃಷ್ಣಮೂರ್ತಿ ರಾವ್, ವಿದ್ಯಾಧರ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಶ್ರೀಪತಿರಾವ್, ಸುಮಾ ಸುಬ್ರಹ್ಮಣ್ಯ ಮತ್ತಿತರರು ಹಾಜರಿದ್ದರು. ಎಚ್.ಆರ್. ಪ್ರಕಾಶ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.