ADVERTISEMENT

ಮರುಟೆಂಡರ್‌ಗೆ ಸಚಿವ ಸುರೇಶ್‌ಕುಮಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 6:05 IST
Last Updated 4 ಏಪ್ರಿಲ್ 2012, 6:05 IST

ಶಿವಮೊಗ್ಗ: ಮೂರು ವರ್ಷಗಳ ಹಿಂದೆ ರೂ 80 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ನಗರ ಒಳಚರಂಡಿ ಕಾಮಗಾರಿಯನ್ನು ಜಿವಿಪಿಆರ್ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದು, ನಿಗದಿತ ಅವಧಿ ಮುಗಿದು ಮೂರು ವರ್ಷ ಕಳೆದರೂ ಕೇವಲ ಶೇ. 35ರಷ್ಟು ಕಾಮಗಾರಿ ಮಾತ್ರ ಅನುಷ್ಠಾನ ಮಾಡಿರುವುದರಿಂದ ಈ ಕಂಪೆನಿಗೆ ನೀಡಿರುವ ಗುತ್ತಿಗೆ ರದ್ದುಪಡಿಸಿ, ಮರುಟೆಂಡರ್ ಕರೆದು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಕಾನೂನು ಮತ್ತು ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದರು.

ನಗರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಒಳಚರಂಡಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದರು.

2009ರ ಮಾರ್ಚ್ ತಿಂಗಳಿನಲ್ಲಿ ಶಿವಮೊಗ್ಗ ನಗರದಲ್ಲಿ ಒಳಚರಂಡಿ ಆರಂಭಿಸಲಾಗಿತ್ತು. 24 ತಿಂಗಳಲ್ಲಿ ಕಾಲಮಿತಿಯನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು. ಆದರೆ, ಕಾಲಮಿತಿಯಲ್ಲಿ ಗುತ್ತಿಗೆದಾರರು ಕಾಮಗಾರಿ ಮುಗಿಸುವಲ್ಲಿ ವಿಫಲರಾಗಿದ್ದರು. ಅದರಂತೆ ಒಳಚರಂಡಿ ಮಂಡಳಿ ಗುತ್ತಿಗೆ ರದ್ದುಪಡಿಸಿತ್ತು ಎಂದು ತಿಳಿಸಿದರು.

ಇದರ ವಿರುದ್ಧ ಗುತ್ತಿಗೆದಾರರು ಹೈಕೋರ್ಟ್ ಮೊರೆ ಹೋಗಿದ್ದರು. 2012ರ ಜನವರಿ ತಿಂಗಳ ಶೇ. 75ರಷ್ಟು ಹಾಗೂ ಮಾರ್ಚ್ 15ರ ಒಳಗೆ ಶೇ. 90ರಷ್ಟು ಕಾಮಗಾರಿ ಮುಗಿಸಬೇಕು. 2012ರ ಅಂತ್ಯದೊಳಗೆ ಒಟ್ಟಾರೆ ಕಾಮಗಾರಿ ಮುಕ್ತಾಯ ಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿ, ಕಾಮಗಾರಿ ಮುಂದುವರಿಸಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿತ್ತು. ಆದರೆ, ಹೈಕೋರ್ಟ್ ಆದೇಶದ ಹೊರತಾಗಿಯೂ ಗುತ್ತಿಗೆದಾರರು ಭೌತಿಕವಾಗಿ ಶೇ. 35ರಷ್ಟು ಕಾಮಗಾರಿ ಮುಕ್ತಾಯಗೊಳಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈಚೆಗೆ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿ.ವಿ. ಸದಾನಂದಗೌಡ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ವೇಳೆ, ಒಳಚರಂಡಿ ಕಾಮಗಾರಿ ವಿಳಂಬದ ಬಗ್ಗೆ ಪ್ರಸ್ತಾಪಿಸಿ, ತುರ್ತುಗತಿಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದರು. ಇದೆಲ್ಲದರ ನಡುವೆಯೂ ಗುತ್ತಿಗೆದಾರರು ಸಮರ್ಪವಕಾಗಿ ಕಾಮಗಾರಿ ಕೈಗೊಂಡಿಲ್ಲ. ಈಗ ನಾವೇ ಕಾಮಗಾರಿ ಪರಿಶೀಲನೆ ನಡೆಸಿದ್ದು ಗುತ್ತಿಗೆದಾರರು ಕಾಮಗಾರಿ ಅನುಷ್ಠಾನದಲ್ಲಿ ವಿಫಲವಾಗಿದ್ದಾರೆ.ಈ ಎಲ್ಲ ಕಾರಣಗಳಿಂದ ಗುತ್ತಿಗೆ ರದ್ದುಪಡಿಸಲಾಗುವುದು ಎಂದು ಪ್ರಕಟಿಸಿದರು.

ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ 4 ಹಂತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಈಗ ಅದೇ ರೀತಿಯಲ್ಲಿ ಆಯಾ ವಿಭಾಗದಲ್ಲಿ ಉಳಿದಿರುವ ಹಣಕ್ಕೆ ಮರುಟೆಂಡರ್ ಕರೆದು ಕಾಮಗಾರಿಗೆ ಮರುಚಾಲನೆ ನೀಡಲಾಗುವುದು ಎಂದು ವಿವರಿಸಿದರು.

`ಕನ್ನಡ ಗಂಗಾ~ಕ್ಕೆ ಚಾಲನೆ: ಬರುವ ಜೂನ್ ತಿಂಗಳಲ್ಲಿ ಶಿವಮೊಗ್ಗವನ್ನು ಮಹಾನಗರ ಪಾಲಿಕೆಯನ್ನಾಗಿ ಘೋಷಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ ಅವರು, ಕನ್ನಡ ಗಂಗಾ ಯೋಜನೆಯಡಿ ಈಗಾಗಲೇ ಚಿತ್ರದುರ್ಗ, ವಿಜಾಪುರ ಜಿಲ್ಲೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಇದರಂತೆ 16 ನಗರ, ಪಟ್ಟಣಗಳಿಗೂ ಈ ಯೋಜನೆಯಡಿ ಲಭ್ಯವಿರುವ ನದಿ, ಜಲಾಶಯ, ಕೆರೆ ನೀರಿನ ಸಂಪನ್ಮೂಲವನ್ನು ಪರಿಣಾಮಕಾರಿ ಆಗಿ ಬಳಸಿಕೊಂಡು ವ್ಯವಸ್ಥಿತವಾಗಿ ನೀರು ಪೂರೈಸಲಾಗುವುದು ಎಂದರು.

 ನಗರ ಪ್ರದೇಶದ ಜನರಿಗೆ ನೀರು, ನೈರ್ಮಲ್ಯ, ನೆಮ್ಮದಿಯ ಬದುಕು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದ್ದು, ತೆರಿಗೆ ಸಂಗ್ರಹಣೆಯನ್ನು ಪರಿಣಾಮಕಾರಿ ಆಗಿ ಮಾಡುವುದು. ಸಂಗ್ರಹಣೆಯಲ್ಲಿ ಅತಿಹೆಚ್ಚು ಪ್ರಗತಿ ಸಾಧಿಸಿದ ಸಂಸ್ಥೆಗಳಿಗೆ ಪುರಸ್ಕಾರ ನೀಡಲಾಗುವುದು ಎಂದ ಸಚಿವರು, ತ್ಯಾಜ್ಯವಸ್ತು ವಿಲೇವಾರಿಗೂ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದ್ದು, ಆಯಾ ವಾರ್ಡ್‌ಗಳಲ್ಲಿಯೇ ತ್ಯಾಜ್ಯವಸ್ತು ವಿಲೇವಾರಿ ಮಾಡುವ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ವಾರ್ಡ್‌ಮಟ್ಟದಲ್ಲೇ ಕಸ ವಿಂಗಡಿಸುವ ಕಾರ್ಯ ಪ್ರಸ್ತುತ ಶಿವಮೊಗ್ಗ ನಗರಸಭೆಯ 12ನೇ ವಾರ್ಡಿನಲ್ಲಿ ಆರಂಭಿಸಲಾಗಿದೆ ಎಂದರು.

12ಕ್ಕೆ ಸಿಎಂ ಜತೆ ಸಭೆ:
  ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಏ. 12ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸದಾನಂದಗೌಡ, ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್, ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶಿವಮೊಗ್ಗ ನಗರದಲ್ಲಿ ಕೈಗೊಂಡಿರುವ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ, ಆದೇಶ ಇತ್ಯಾದಿಗಳನ್ನು ಪಡೆದುಕೊಂಡು ಕಾಮಗಾರಿಗಳ ವೇಗ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, `ಸೂಡಾ~ ಅಧ್ಯಕ್ಷ ಎಸ್. ದತ್ತಾತ್ರಿ, ಆಯುಕ್ತ ಎನ್.ಸಿ. ಮುನಿಯಪ್ಪ, ನಗರಸಭೆ ಆಯುಕ್ತ ಪಿ.ಜಿ. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.ಇದಕ್ಕೂ ಮೊದಲು ಸಚಿವ ಸುರೇಶ್ ನಗರದಾದ್ಯಂತ ಪ್ರವಾಸ ಮಾಡಿ, ಒಳಚರಂಡಿ ಕಾಮಗಾರಿಗಳನ್ನು ವೀಕ್ಷಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.