ADVERTISEMENT

ಮಲೆನಾಡ ಮೆರುಗಿನ ಪ್ರವಾಸಿ ಮಂದಿರ

ತೀರ್ಥಹಳ್ಳಿ ಪ್ರವಾಸಿ ಮಂದಿರಕ್ಕೆ ಹೊಸ ರೂಪ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 8:19 IST
Last Updated 24 ಜೂನ್ 2013, 8:19 IST

ತೀರ್ಥಹಳ್ಳಿ: ತುಂಗಾ ನದಿಯ ದಡದಲ್ಲಿ ನಿರ್ಮಾಣವಾಗಿರುವ ತೀರ್ಥಹಳ್ಳಿ ಪ್ರವಾಸಿ ಮಂದಿರಕ್ಕೆ ತನ್ನದೇ ಆದ ಮಹತ್ವ ಇದೆ. ಪ್ರವಾಸಿ ಮಂದಿರದ ಚಾವಡಿಯಲ್ಲಿ ನಿಂತು ಕಣ್ಣು ಹಾಯಿಸಿದರೆ ಕಾಣುವ ಕುರುವಳ್ಳಿ ಕಮಾನು ಸೇತುವೆ, ತುಂಗಾ ನದಿ ಮಧ್ಯೆ ಇರುವ ಪ್ರಸಿದ್ಧ ರಾಮಮಂಟಪ, ಪಶ್ಚಿಮದ ಸಿದ್ದೇಶ್ವರ ಬೆಟ್ಟದ ಅಂಚಲ್ಲಿ ಮುಳುಗುವ ಸೂರ್ಯನ ವಿಹಂಗಮ ನೋಟ ಎಂಥವರನ್ನೂ ಒಂದು ಕ್ಷಣ ತನ್ಮಯಗೊಳಿಸುತ್ತದೆ. 

1950-51ರಲ್ಲಿ  72,257 ವೆಚ್ಚದಲ್ಲಿ ನಿರ್ಮಾಣವಾದ ಈ ಪ್ರವಾಸಿ ಮಂದಿರದಲ್ಲಿ ಅನೇಕ ಗಣ್ಯರು ವಾಸ್ತವ್ಯ ಹೂಡಿ ಅಪ್ಪಟ ಮಲೆನಾಡಿನ ಸೊಬಗನ್ನು ಸವಿದಿದ್ದಾರೆ. ಬೇಸಿಗೆಯಲ್ಲಿ ತಂಪು ನೀಡುವ, ಮಳೆಗಾಲ ಹಾಗೂ ಚಳಿಗಾಲದಲ್ಲಿ ಬೆಚ್ಚನೆಯ ವಾತಾವರಣ ನೀಡುವ ಪ್ರವಾಸಿ ಮಂದಿರ ಸ್ಥಳೀಯವಾಗಿ ಸಿಗುವ ಕಲ್ಲು ಹಾಗೂ  ಮರದ ಹೊದಿಕೆಯಿಂದ ನಿರ್ಮಾಣಗೊಂಡಿದೆ.

ಪ್ರವಾಸಿ ಮಂದಿರದ ನಡುವೆ ಇರುವ ಮೀಟಿಂಗ್ ಹಾಲ್‌ನಲ್ಲಿನ ವಿಶಾಲ ಗೋಡೆಯಲ್ಲಿ ರಾಷ್ಟ್ರಕವಿ ಕುವೆಂಪು, ಬಸವಣ್ಣ, ಮದರ್ ತೆರೇಸಾ, ಗಾಂಧೀಜಿ, ಸುಭಾಷ್‌ಚಂದ್ರ ಬೋಸ್, ವಿವೇಕಾನಂದ, ನೆಲ್ಸನ್ ಮಂಡೇಲ ಸೇರಿದಂತೆ ಅನೇಕ ದಾರ್ಶನಿಕರ, ಹೋರಾಟಗಾರರ ಚಿತ್ರಗಳನ್ನು ಕಪ್ಪು ಗೆರೆಗಳಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ.

ತೀರ್ಥಹಳ್ಳಿಯಲ್ಲಿ ಈ ಪ್ರವಾಸಿ ಮಂದಿರ ನಿರ್ಮಾಣಕ್ಕೂ ಮುಂಚೆ ಈಗಿನ ಜಯಚಾಮ ರಾಜೇಂದ್ರ ಆಸ್ಪತ್ರೆ ಪ್ರವಾಸಿ ಮಂದಿರವಾಗಿತ್ತು. ತೀರ್ಥಹಳ್ಳಿಗೆ ಭೇಟಿ ನೀಡಿದ ಮಹಾತ್ಮ ಗಾಂಧೀಜಿ ಕರ್ನಾಟಕದ ಪ್ರವಾಸದಲ್ಲಿದ್ದಾಗ ಇಲ್ಲಿಗೆ ಭೇಟಿ ನೀಡಿದ್ದರು. ನಂತರ ಹೊಸ ಕಟ್ಟಡಕ್ಕೆ ಪ್ರವಾಸಿ ಮಂದಿರ ಸ್ಥಳಾಂತರಗೊಂಡಿತು.

ಗುಡ್ಡದ ಮೇಲೆ ನಿರ್ಮಾಣವಾದ ಪ್ರವಾಸಿ ಮಂದಿರ ವಿಶಾಲ ಕೊಠಡಿಗಳನ್ನು ಒಳಗೊಂಡಿದೆ. ತಾಲ್ಲೂಕಿಗೆ ಆಗಮಿಸುವ ಗಣ್ಯರು ಇಲ್ಲಿ ವಾಸ್ತವ್ಯ ಹೂಡುತ್ತಾರೆ. ಪ್ರವಾಸಿ ಮಂದಿರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾದಂತೆ ಆಗಮಿಸುವ ಅತಿಥಿಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಈಗ  ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಟ್ಟಡ ವಿಸ್ತರಿಸಲಾಗಿದೆ.

ಹಳೆಯ ಕಟ್ಟಡದ ಸೌದರ್ಯಕ್ಕೆ ಧಕ್ಕೆಯಾಗದಂತೆ ಸ್ಥಳೀಯ ಕಲ್ಲುಗಳನ್ನು ಬಳಸಿ ಮೂರು ಮಲಗುವ ಕೊಠಡಿ ಹಾಗೂ ಒಂದು ನಿರೀಕ್ಷಣಾ ಕೊಠಡಿ ಒಳಗೊಂಡ ಸುಂದರ ಕಟ್ಟಡ ಈಗ ತಲೆ ಎತ್ತಿದೆ. ತುಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕುರುವಳ್ಳಿ ಕಮಾನು ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಪ್ರವಾಸಿ ಮಂದಿರವನ್ನು ನಿರ್ಮಿಸಲಾಗಿದೆ. ಪ್ರವಾಸಿ ಮಂದಿರದ ನಿರ್ಮಾಣದ ನೀಲ ನಕ್ಷೆಯನ್ನು  ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಸಿದ್ಧಗೊಳಿಸಿದ್ದರು ಎಂಬ ಮಾತುಗಳನ್ನು ಹಿರಿಯರು ನೆನಯುತ್ತಾರೆ.

ತೀರ್ಥಹಳ್ಳಿ ಮಟ್ಟಿಗೆ ಪ್ರಮುಖ ಕಟ್ಟಡಗಳಲ್ಲಿ ಒಂದಾದ ಪ್ರವಾಸಿಮಂದಿರ ಇಂದಿಗೂ ಭದ್ರವಾಗಿದ್ದು ಪ್ರವಾಸಿಗರ ತಂಗುವಿಕೆಗೆ ಅಗತ್ಯ ಸೌಲಭ್ಯ ಒದಗಿಸಿದೆ.

ಕೇವಲ ಸೌಲಭ್ಯಗಳ ದೃಷ್ಟಿಯಿಂದ ಹೊರತಾಗಿಯೂ ಪ್ರವಾಸಿ ಮಂದಿರ ತೀರ್ಥಹಳ್ಳಿ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.