ADVERTISEMENT

ಮೌಲ್ಯಯುತ ಸಮಾಜ ನಿರ್ಮಾಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 10:20 IST
Last Updated 9 ಫೆಬ್ರುವರಿ 2011, 10:20 IST

ಶಿವಮೊಗ್ಗ: ಒಳ್ಳೆಯ ಯೋಚನೆ, ಕಲ್ಪನೆ ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಮಾಜ ನಿರ್ಮಾಣ ಇಂದು ಅಗತ್ಯವಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು. ನಗರದ ಹೊಸಮನೆ ಬಡಾವಣೆಯ ಅಂತರಘಟ್ಟಮ್ಮ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೂರ್ತಿ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆಗಳು ಯುವಜನಾಂಗದ ಮೇಲೆ ಪರಿಣಾಮ ಬೀರುತ್ತಿವೆ. ಒಳ್ಳೆಯ ಆಲೋಚನೆಗಳು, ಉತ್ತಮ ಕಲ್ಪನೆಯ ಸಮಾಜ ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳು ದಾರಿದೀಪವಾಗಬೇಕು ಎಂದು ಹೇಳಿದರು.ಕಷ್ಟಗಳು ಬಂದಾಗ ದೇವರ ಮೊರೆ ಹೋಗುತ್ತೇವೆ. ದೇವರ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಎಂದ ಸ್ವಾಮೀಜಿ, ಕಷ್ಟಗಳು ದೇವರ ಮೇಲಿನ ನಂಬಿಕೆ ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ದೇವರಲ್ಲಿ ಸುಖ-ಸಮೃದ್ಧಿ ಕೇಳದೆ, ಶಾಂತಿ-ನೆಮ್ಮದಿ ಕರುಣಿಸಲಿ ಎಂದು ಕೋರುವಂತೆ ಭಕ್ತರಿಗೆ ಕಿವಿಮಾತು ಹೇಳಿದರು.ದೇವಸ್ಥಾನ ನಿರ್ಮಾಣದಂತಹ ಕಾರ್ಯಗಳನ್ನು ಮಾಡುವಾಗ ಎಲ್ಲರ ಸಹಕಾರ ಬಹುಮುಖ್ಯ. ದೇವಸ್ಥಾನಗಳು ಆಯಾ ಕಾಲಘಟ್ಟದ ಸಂಸ್ಕೃತಿಯನ್ನು ಪರಿಚಯಿಸುವ ಕೇಂದ್ರಗಳಾಗಿವೆ. ಅವುಗಳ ಜೀರ್ಣೋದ್ಧಾರಕ್ಕೆ ಮುಂದಾಗಿರುವುದು ಔಚಿತ್ಯಪೂರ್ಣ ಎಂದರು.

ಪ್ರತಿಯೊಬ್ಬರು ದುಡಿಮೆಯ ಒಂದು ಭಾಗವನ್ನು ದಾನ-ಧರ್ಮಗಳಿಗೆ ಮೀಸಲಿಡಬೇಕು. ಆ ಮೂಲಕ ಭಗವಂತನ ಹತ್ತಿರ ಹೋಗಬಹುದು ಎಂದು ಹೇಳಿದರು.ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ಈ ಭಾಗದ ಶ್ರದ್ಧಾಕೇಂದ್ರವಾದ ಅಂತರಘಟ್ಟಮ್ಮ ದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು. ಹಂದಲಸು ಲಕ್ಷ್ಮೀನಾರಾಯಣ ಭಟ್ಟ ಮಾತನಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ರೋಜಾ ಷಣ್ಮುಗಂ, ಮನೋಹರ್ ಭಟ್, ಕೆ.ಬಿ. ರಾಮಪ್ಪ, ದೇವೇಂದ್ರಪ್ಪ, ಕಲ್ಲಪ್ಪ, ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.