ADVERTISEMENT

ರಾಜ್ಯದಲ್ಲಿ ಧರ್ಮ ಸಂರಕ್ಷಣೆಯ ಸರ್ಕಾರ ಬರಲಿದೆ

ಚುನಾವಣೆ ನಿರ್ವಹಣಾ ಸಮಿತಿ ಸಭೆಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 11:17 IST
Last Updated 16 ಏಪ್ರಿಲ್ 2018, 11:17 IST
ಶಿವಮೊಗ್ಗದ ಶುಭಮಂಗಳ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಚುನಾವಣೆ ನಿರ್ವಹಣಾ ಸಮಿತಿ ಸಭೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್‌.ರುದ್ರೇಗೌಡ ಉದ್ಘಾಟಿಸಿದರು.
ಶಿವಮೊಗ್ಗದ ಶುಭಮಂಗಳ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಚುನಾವಣೆ ನಿರ್ವಹಣಾ ಸಮಿತಿ ಸಭೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್‌.ರುದ್ರೇಗೌಡ ಉದ್ಘಾಟಿಸಿದರು.   

ಶಿವಮೊಗ್ಗ : ರಾಜ್ಯದಲ್ಲಿ ಧರ್ಮ ವಿರೋಧಿ ಸರ್ಕಾರ ಹೋಗಿ ಧರ್ಮ ಸಂರಕ್ಷಣೆ ಮಾಡುವ ಸರ್ಕಾರ ಬರಲಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು.

ನಗರದ ಶುಭಮಂಗಳ ಮಾಂಗಲ್ಯ ಮಂದಿರದಲ್ಲಿ ಜಿಲ್ಲಾ ಬಿಜೆಪಿಯಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಚುನಾವಣೆ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಧರ್ಮ ವಿರೋಧಿ ಸರ್ಕಾರ ಆಡಳಿತದಲ್ಲಿದೆ. ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕೊಲೆ, ಸುಲಿಗೆಗಳು ಅಪಾರ ಪ್ರಮಾಣದಲ್ಲಿ ನಡೆಯುತ್ತಿವೆ. ಇಂತಹ ಸರ್ಕಾರದ ಆಡಳಿತಕ್ಕೆ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಹಾಗಾಗಿ ಬಿಜೆಪಿ ಸೈನ್ಯ ಧರ್ಮ ವಿರೋಧಿ ಸರ್ಕಾರವನ್ನು ಕಿತ್ತೊಗೆದು ಧರ್ಮ, ಸಂಸ್ಕೃತಿ ರಕ್ಷಣೆ ಮಾಡುವ ಸರ್ಕಾರವನ್ನು ತರಲು ಮುಂದಾಗಬೇಕಿದೆ ಎಂದರು.

ADVERTISEMENT

ರಾಜ್ಯದಲ್ಲಿರುವ ಧರ್ಮ ವಿರೋಧಿ ಸರ್ಕಾರವನ್ನು ಗಮನಿಸಿದಾಗ ಈ ಹಿಂದೆ ಛತ್ರಪತಿ ಶಿವಾಜಿ ಕಾಲದಲ್ಲಿ ನಡೆದಂತಹ ಘಟನೆಗಳು ನೆನಪಾಗುತ್ತವೆ. ಅಫ್ಜಲ್‌ಖಾನ್‌ ಧರ್ಮವಿರೋಧಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಛತ್ರಪತಿ ಶಿಜಾಜಿ ಮಹಾರಾಜರು ಸಮರ್ಥ ರಾಮದಾಸರ ಮಾರ್ಗದರ್ಶನದಲ್ಲಿ ಅಫ್ಜಲ್‌ಖಾನ್‌ನನ್ನು ಸೋಲಿಸಿ ಧರ್ಮರಕ್ಷಣೆ ಮಾಡಿದ್ದರು. ಇದೀಗ ಇತಿಹಾಸ ಮರುಕಳಿಸುತ್ತಿದೆ. ಶಿವಾಜಿ ಜಾಗಕ್ಕೆ ನರೇಂದ್ರ ಮೋದಿ ಹಾಗೂ ಸಮರ್ಥ ರಾಮದಾಸ್‌ ಜಾಗಕ್ಕೆ ಅಮಿತ್‌ ಶಾ ಬಂದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ರಾಜ್ಯದ ಚುನಾವಣೆ ಎದುರಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್‌.ರುದ್ರೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಚುನಾವಣೆಗಳು ಪ್ರಜಾಪ್ರಭುತ್ವದ ಉತ್ಸವಗಳು. ಈ ಉತ್ಸವದಲ್ಲಿ ಪಕ್ಷದ ಎಲ್ಲಾ ಮತದಾರರು, ಕಾರ್ಯಕರ್ತರು ಸಂಭ್ರಮದಿಂದ ಪಾಲ್ಗೊಳ್ಳಬೇಕಿದೆ. ದೇಶದ ರಕ್ಷಣೆ, ಆರ್ಥಿಕ ಸ್ಥಿತಿಗತಿ ಸುಧಾರಿಸಲು ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ. ಅಲ್ಲದೇ ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಆಡಳಿತದ ಸರ್ಕಾರ ನೀಡಿದ ಕಾರ್ಯಗಳನ್ನು ಜನರು ಇಂದಿಗೂ ಮೆಲುಕು ಹಾಕುತ್ತಿದ್ದಾರೆ. ಹಾಗಾಗಿ ಈ ಬಾರಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಮತದಾರರು ಹಾಗೂ ಕಾರ್ಯಕರ್ತರು ವಿಧಾನಸಭೆ ಚುನಾವಣೆಯ ಜತೆಜತೆಗೆ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆಯ ಗೆಲುವಿಗೂ ಶ್ರಮಿಸಬೇಕಿದೆ’ ಎಂದು ಕರೆ ನೀಡಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಆರ್‌.ಕೆ.ಸಿದ್ದರಾಮಣ್ಣ ಮಾತನಾಡಿ, ‘ಬಿಜೆಪಿ ನಾಯಕರು ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಿದೆ’ ಎಂದರು.

ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್, ಪ್ರಮುಖರಾದ ಆಯನೂರು ಮಂಜುನಾಥ್‌, ಕೆ.ಜಿ.ಕುಮಾರಸ್ವಾಮಿ, ಎಸ್‌.ದತ್ತಾತ್ರಿ, ಡಿ.ಎಸ್‌.ಅರುಣ್‌, ಚೆನ್ನಬಸಪ್ಪ, ಟಿ.ಡಿ.ಮೇಘರಾಜ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.