ADVERTISEMENT

ರಾಜ್ಯ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 6:40 IST
Last Updated 13 ಜುಲೈ 2013, 6:40 IST

ಶಿವಮೊಗ್ಗ: ಹೊಸ ಸರ್ಕಾರದ ಬಜೆಟ್ ಬಗ್ಗೆ ವಿವಿಧ ಕ್ಷೇತ್ರದ ಗಣ್ಯರು, ತಜ್ಞರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

`ಅಭಿವೃದ್ಧಿ ದೃಷ್ಟಿ ಕೊರತೆ'
ಶಿವಮೊಗ್ಗ ಮಹಾನಗರ ಪಾಲಿಕೆ ಘೋಷಣೆಯಾಗಿದ್ದು ಸಮಾಧಾನದ ಅಂಶ. ನಗರದ ಅಭಿವೃದ್ಧಿ ದೃಷ್ಟಿಯಿಂದ ಇದು ಅನುಕೂಲ. ಉಳಿದಂತೆ ಸಾಮಾಜಿಕ ಕಳಕಳಿಯಿಂದ ಕೂಡಿದ ಬಜೆಟ್ ಇದಾಗಿದ್ದು ವಿವಿಧ ವರ್ಗಗಳಿಗೆ ಹೆಚ್ಚಿನ ಹಣ ನೀಡಲಾಗಿದೆ. ಆದರೆ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸದಿರುವುದು ತಪ್ಪು. ಕೃಷಿಗೆ ಇನ್ನಷ್ಟು ಒತ್ತು ನೀಡಬೇಕಾಗಿತ್ತು. ಒಟ್ಟಾರೆ ಬಜೆಟ್‌ಗೆ ಅಭಿವೃದ್ಧಿ ದೃಷ್ಟಿಕೋನ ಇಲ್ಲ. ಉದ್ಯೋಗದ ಸೃಷ್ಟಿ ಬಗ್ಗೆ ಚಕಾರ ಇಲ್ಲ. ಸಮಾಧಾನದ ಸಂಗತಿ ಎಂದರೆ ತೆರಿಗೆ ಹೊರೆ ಹೇರಿಲ್ಲ.
-ಕೆ.ವಿ.ವಸಂತಕುಮಾರ್  ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಅಧ್ಯಕ್ಷ

`ಜನ ಸಾಮಾನ್ಯರಿಗೆ ಕಷ್ಟ'

ಸಿದ್ದರಾಮಯ್ಯ ಅವರ ಬಜೆಟ್ ಆಶಾದಾಯಕವಾಗಿಯೂ; ನಿರಾಶಾದಾಯಕವಾಗಿಯೂ ಇಲ್ಲ. ಶಿವಮೊಗ್ಗ ನಗರಸಭೆಯನ್ನು ನಗರಪಾಲಿಕೆಗೆ ಮೇಲ್ದರ್ಜೆಗೆ ಏರಿಸಿರುವುದು ಬಡವರ ಬದುಕಿಗೆ ಕಷ್ಟ ಆಗಲಿದೆ. ಮಧ್ಯಮ ವರ್ಗದವರಿಗೂ ಹೊರೆ ಆಗಲಿದೆ.

ಅಡಿಕೆ ಬೆಳೆ ಅಭಿವೃದ್ಧಿಪಡಿಸಲು ನವುಲೆಯ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಹೆಚ್ಚಿನ ಹಣ ಒದಗಿಸುವಂತೆ ರೈತಸಂಘ ಸರ್ಕಾರವನ್ನು ಒತ್ತಾಯಿಸಿತ್ತು. ಹಾಗೆಯೇ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೂ ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಬಜೆಟ್‌ನಲ್ಲಿ ಈ ಬಗ್ಗೆ ಗಮನ ಹರಿಸಿಲ್ಲ.

ರೈತರಿಗೆ ಸಹಕಾರ ಸಂಘಗಳಲ್ಲಿ ರೂ 10 ಲಕ್ಷ ವರೆಗೆ ಬಡ್ಡಿರಹಿತ ಸಾಲ ನೀಡುವಂತೆ ರೈತಸಂಘ ಮನವಿ ಮಾಡಿತ್ತು. ಆದರೆ, ರೂ 2ಲಕ್ಷ ದವರೆಗೆ ಮಾತ್ರ ಬಡ್ಡಿ ರಹಿತ ಸಾಲ ನೀಡುವ ಬಗ್ಗೆ ಘೋಷಿಸಿದ್ದು, ರೂ 2ರಿಂದ ರೂ 3ಲಕ್ಷ ವರೆಗೆ ಶೇ 1 ಬಡ್ಡಿ, ರೂ 3ರಿಂದ ರೂ 10ಲಕ್ಷ ವರೆಗೆ ಶೇ 3 ಬಡ್ಡಿದರದಲ್ಲಿ ಸಾಲ ನೀಡುವುದಾಗಿ ತಿಳಿಸಿದೆ.

ರೈತರ ವೇತನ ಆಯೋಗ ರಚನೆ ಹಾಗೂ 60 ವರ್ಷ ದಾಟಿದ ರೈತರಿಗೆ ಪಿಂಚಣಿ ನೀಡುವ, ರೈತರ ಆತ್ಮಹತ್ಯೆ ಬಗ್ಗೆ ಸಂಶೋಧನೆ ಮಾಡುವ ಬಗ್ಗೆ ಸರ್ಕಾರ ನಿರ್ಧಾರಗಳನ್ನು ಘೋಷಿಸದೆ ನಿರ್ಲಕ್ಷ್ಯ ವಹಿಸಿದೆ.
-ಎಚ್.ಆರ್.ಬಸವರಾಜಪ್ಪ, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ

`ಕೃಷಿಗೆ ಆದ್ಯತೆ ಇಲ್ಲ'

ಬಡವರಿಗೆ ಆಹಾರ ಭದ್ರತೆ ನೀಡಿದ ಸಿದ್ದರಾಮಯ್ಯ, ಆಹಾರ ಉತ್ಪಾದಕರಿಗೆ ಭದ್ರತೆ ನೀಡುವಲ್ಲಿ ಸೋತಿದ್ದಾರೆ. ಹಳ್ಳಿಯ ಮಕ್ಕಳು, ಹಳ್ಳಿಯಲ್ಲೇ ಉಳಿಯುವಂತೆ ಮಾಡುವಂತೆ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಮಾರುಕಟ್ಟೆ ಕೌಶಲ ಅಭಿವೃದ್ಧಿಗೆ ಸಂಸ್ಥೆಯೊಂದನ್ನು ತೆರೆಯಬೇಕಾಗಿತ್ತು. ಆದರೆ, ಕಾಂಗ್ರೆಸ್‌ನ ಕೈವಾಡ ಜಾಸ್ತಿಯಾಗಿ, ಬಜೆಟ್ ಸೊರಗಿದೆ.
-ಕೆ.ಟಿ.ಗಂಗಾಧರ್,ರಾಜ್ಯ ರೈತ ಸಂಘ (ಪ್ರೊ.ನಂಜುಂಡಸ್ವಾಮಿ ರಾಜಕೀಯೇತರ ಬಣ)ದ ಕಾರ್ಯಾಧ್ಯಕ್ಷ

`ಕಾಂಗ್ರೆಸ್ ಪ್ರಣಾಳಿಕೆ'

ಇದು ಬಜೆಟ್ ಅಲ್ಲ; ಕಾಂಗ್ರೆಸ್‌ನ ಪ್ರಣಾಳಿಕೆ. ಸಂಸತ್ ಚುನಾವಣೆ ಎದುರು ಇಟ್ಟುಕೊಂಡು ಕಾಂಗ್ರೆಸ್ ಮಂಡಿಸಿದ ಬಜೆಟ್ ಇದು. ಕೃಷಿಯನ್ನು, ರೈತರನ್ನೂ ಕಡೆಗಣಿಸಲಾಗಿದೆ. ಇದರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಶಿವಮೊಗ್ಗ ನಗರಪಾಲಿಕೆ ಘೋಷಣೆಗೆ ಹಿಂದಿನ ಸರ್ಕಾರದಲ್ಲೇ ಎಲ್ಲಾ ಪ್ರಕ್ರಿಯೆಗಳು ನಡೆದಿದ್ದವು. ಜನಗಣತಿಯ ಅಂತಿಮ ವರದಿಗೆ ಕಾಯಲಾಗಿತ್ತು. ಈಗ ಘೋಷಣೆಯಾಗಿದ್ದು ಸಂತೋಷ.
-ಆರ್.ಕೆ.ಸಿದ್ದರಾಮಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

`ಕೈಗಾರಿಕೆಗಳ ಕಡೆಗಣನೆ'

ಕರ್ನಾಟಕದಲ್ಲಿ ಕೈಗಾರಿಕೆಗಳು ಇವೆ ಎಂಬುದನ್ನೇ ಸಿದ್ದರಾಮಯ್ಯ ಅವರು ಮರೆತಂತಿದೆ. ಕೈಗಾರಿಕೆಗಳ ಉತ್ತೇಜನಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಮೂಲಸೌಕರ್ಯಗಳ ಅಭಿವೃದ್ಧಿ ಕೈಬಿಟ್ಟಿದ್ದಾರೆ.
-ಮಹೇಂದ್ರನಾಥ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ

`ಸಮತೋಲನ ಬಜೆಟ್'

ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದು. ಬಜೆಟ್ ಗಾತ್ರಕ್ಕಿಂತ ಅದರ ಅನುಷ್ಠಾನ ಮುಖ್ಯ ಎಂದು ಸಿದ್ದರಾಮಯ್ಯ ಹೇಳಿರುವ ಮಾತು ಅವರ ಅಭಿವೃದ್ಧಿ ದೃಷ್ಟಿಯನ್ನು ತೋರಿಸುತ್ತದೆ. ಶಿವಮೊಗ್ಗ ನಗರಸಭೆಯನ್ನು ನಗರಪಾಲಿಕೆಯಾಗಿ ಘೋಷಣೆ ಮಾಡಿರುವುದು ಖುಷಿ ತಂದಿದೆ.
-ಆರ್.ಪ್ರಸನ್ನಕುಮಾರ್,ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.