ADVERTISEMENT

ರುದ್ರಭೂಮಿ ಒತ್ತುವರಿ:ಧರಣಿ

ಲಂಡಿಗೇರಿ ಗ್ರಾಮದ ದಲಿತರಿಗೆ ಮೀಸಲಾದ ಜಾಗ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 10:06 IST
Last Updated 21 ಡಿಸೆಂಬರ್ 2012, 10:06 IST

ಸಾಗರ: ಲಂಡಿಗೇರಿ ಗ್ರಾಮದ ಹರಿಜನ ಕಾಲೊನಿಯಲ್ಲಿ ದಲಿತರಿಗೆ ಮೀಸಲಾಗಿಟ್ಟಿದ್ದ ರುದ್ರಭೂಮಿ ಪ್ರದೇಶವನ್ನು ಕೆಲವರು ಅತಿಕ್ರಮಣ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ತಾಲ್ಲೂಕು ಶಾಖೆ ಕಾರ್ಯಕರ್ತರು, ತಾಲ್ಲೂಕು ಕಚೇರಿ ಎದುರು ಗುರುವಾರ ಅನಿದಿಷ್ಟ ಅವಧಿಯ ಧರಣಿ ಸತ್ಯಾಗ್ರಹ  ಆರಂಭಿಸಿದರು.

ಲಂಡಿಗೇರಿ ಗ್ರಾಮದ ಸ.ನಂ. 7/1ರಲ್ಲಿ 3 ಎಕರೆ ಸರ್ಕಾರಿ ಜಾಗ ಇದೆ. ಇದನ್ನು ದಲಿತರು ರುದ್ರಭೂಮಿಯಾಗಿ ಬಳಸುತ್ತಿದ್ದಾರೆ. ಇದನ್ನು ಚನ್ನಯ್ಯ ಸಮಾಜಕ್ಕೆ ಮಂಜೂರು ಮಾಡುವಂತೆ ಹಲವು ಬಾರಿ ತಾಲ್ಲೂಕು ಆಡಳಿತಕ್ಕೆ ಮನವಿ ನೀಡಿದ್ದರೂ ಸ್ಪಂದಿಸುತ್ತಿಲ್ಲ.

ರುದ್ರಭೂಮಿಗೆ ಮೀಸಲಿಟ್ಟಿರುವ ಜಾಗ ಮೇಲ್ವರ್ಗಕ್ಕೆ ಸೇರಿದ ಕೆಲವು ಪ್ರಭಾವಿ ವ್ಯಕ್ತಿಗಳು ಅತಿಕ್ರಮಣ ಮಾಡುತ್ತಿದ್ದಾರೆ. ತಾಲ್ಲೂಕು ಆಡಳಿತ ಚನ್ನಯ್ಯ ಸಮಾಜಕ್ಕೆ ರುದ್ರಭೂಮಿ ಎಂದು ಈ ಪ್ರದೇಶ ಮಂಜೂರು ಮಾಡಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ರುದ್ರಭೂಮಿ ಪ್ರದೇಶ ಅತಿಕ್ರಮಣ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕು. ಕೂಡಲೇ ಈ ಪ್ರದೇಶವನ್ನು ಚನ್ನಯ್ಯ ಸಮಾಜಕ್ಕೆ ಮಂಜೂರು ಮಾಡಬೇಕು. ಅಲ್ಲಿವರೆಗೂ ಧರಣಿ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಅವರು ತಿಳಿಸಿದರು.

ಚನ್ನಯ್ಯ ಸಮಾಜದ ರಾಜೇಂದ್ರ ಬಂದಗದ್ದೆ, ಎಚ್.ಸಿ. ರೇವಪ್ಪ, ಮಂಜಪ್ಪ, ಶೇಖರ ಬಾಳಗೋಡು, ಮಂಜುನಾಥ ಚಿಪ್ಪಳಿ, ತಿಮ್ಮಪ್ಪ ಹೊನಗೋಡು, ಡಿ. ರವಿ. ಅಣ್ಣಪ್ಪ, ಚಂದ್ರಪ್ಪ, ರವೀಂದ್ರ, ಸುಬ್ಬಪ್ಪ, ಸುರೇಶ, ರಾಮಚಂದ್ರ, ರಾಮಪ್ಪ,ಕಾಂಗ್ರೆಸ್ ಮುಖಂಡ ತೀ.ನಾ. ಶ್ರೀನಿವಾಸ್, ಡಿಎಸ್‌ಎಸ್‌ನ ಸೆಬಾಸ್ಟಿನ್ ಗೋಮ್ಸ, ವಿಶ್ವನಾಥ ಗೌಡ ಅದರಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.