ADVERTISEMENT

ರೈತರು ಬೆಳೆದ ತೆಂಗಿನಕಾಯಿ ಕೇಳೋರಿಲ್ಲ

ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳಿಲ್ಲ; ಬೆಲೆ ನಿರೀಕ್ಷೆಯಲ್ಲಿ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 12:18 IST
Last Updated 14 ಡಿಸೆಂಬರ್ 2012, 12:18 IST

ಶಿವಮೊಗ್ಗ: ರೈತರು ಬೆಳೆದ ತೆಂಗಿನಕಾಯಿಯನ್ನು ಈಗ ಕೇಳುವವರೇ ಇಲ್ಲ. ಮನೆಬಾಗಿಲಿಗೆ ಬಂದು ಖರೀದಿ ಮಾಡುತ್ತಿದ್ದ ವ್ಯಾಪಾರಸ್ಥರ ಸುಳಿವು ಈಗಿಲ್ಲ. ತೆಂಗಿನಕಾಯಿ ಮರದಿಂದ ಇಳಿಸಿ ಗುಡ್ಡೆ ಹಾಕಿರುವ ರೈತರು ಈಗ ಅಕ್ಷರಶಃ ಕಂಗಾಲಾಗಿದ್ದಾರೆ.

ತೆಂಗಿನಕಾಯಿ ವಹಿವಾಟು ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದೆ. ರೈತರು ಅತ್ಯಂತ ಕಡಿಮೆ ಬೆಲೆಗೆ ನೀಡಲು ಮುಂದಾದರೂ, ಖರೀದಿಸಲು ವ್ಯಾಪಾರಸ್ಥರು ಆಸಕ್ತಿ ತೋರಿಸುತ್ತಿಲ್ಲ. ಕಲ್ಪವೃಕ್ಷವನ್ನೇ ಬದುಕಿಗಾಗಿ ನಂಬಿದ ರೈತರು, ವ್ಯಾಪಾರಸ್ಥರು ಈಗ ಆತಂಕಕ್ಕೆ ಒಳಗಾಗಿದ್ದಾರೆ.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ತೆಂಗಿನ ಕೃಷಿ ಕಡಿಮೆ. ಆದರೆ, ಇದನ್ನೇ ಜೀವನಾಧಾರವಾಗಿ ಮಾಡಿಕೊಂಡವರು ಹಲವರಿದ್ದಾರೆ. ಜಿಲ್ಲೆಯಲ್ಲಿ 6,925 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ವರ್ಷಕ್ಕೆ 768 ಲಕ್ಷ ತೆಂಗಿನಕಾಯಿ ಇಳುವರಿ ಸಿಗುತ್ತದೆ. ಮುಖ್ಯವಾಗಿ ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ ತಾಲ್ಲೂಕಿನಲ್ಲಿ ತೆಂಗಿನ ಕೃಷಿ ಹೆಚ್ಚಾಗಿ ನಡೆದಿದೆ. ಪ್ರತಿ ದಿವಸ 10 ಸಾವಿರ ತೆಂಗಿನಕಾಯಿ ಅಡುಗೆಗೆ ಬಳಕೆಯಾಗುತ್ತದೆ.

ಜಿಲ್ಲೆಯಲ್ಲಿ ತೆಂಗಿನಕಾಯಿ ಖರೀದಿ ಕೇಂದ್ರಗಳಿಲ್ಲ. ವ್ಯಾಪಾರಸ್ಥರೇ ರೈತರ ಬಳಿಗೆ ಹೋಗಿ ಖರೀದಿಸಿದ ಮಾಲನ್ನು ತಿಪಟೂರು, ಅರಸೀಕೆರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು.

`ಕಳೆದ ಒಂದು ತಿಂಗಳಿನಿಂದ ತೆಂಗಿನಕಾಯಿ ಮರದಿಂದ ಇಳಿಸಿ ಇಟ್ಟುಕೊಂಡಿದ್ದೇನೆ. ಮನೆಬಾಗಿಲಿಗೆ ಬಂದ ವ್ಯಾಪಾರಿ ಜತೆ ಕೊನೆಗೂ ಚೌಕಾಸಿ ಮಾಡಿ ಉತ್ತಮ ಗುಣಮಟ್ಟದ ಒಂದು ತೆಂಗಿನಕಾಯಿಗೆ 4ರೂಪಾಯಿ ದರಕ್ಕೆ ಖುದುರಿಸಿದೆ. ಎರಡು ದಿವಸದ ಒಳಗೆ ಬಂದು ಕಾಯಿ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದ ವ್ಯಾಪಾರಸ್ಥ ಇದುವರೆಗೂ ಬಂದಿಲ್ಲ' ಎನ್ನುತ್ತಾರೆ ತೀರ್ಥಹಳ್ಳಿಯ ಮೇಗರವಳ್ಳಿಯ ಆದರ್ಶ ಹೆಗ್ಡೆ.

`ಮಾರುಕಟ್ಟೆಯಲ್ಲಿ ಒಳ್ಳೆಯ ರೇಟಿಲ್ಲ. ರೈತರಿಂದ ಈಗ ಖರೀದಿ ಮಾಡಿದರೆ ಲಾಸ್ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಎರಡು ತಿಂಗಳಿಂದ ವ್ಯಾಪಾರವನ್ನೇ ಮಾಡಿಲ್ಲ' ಎಂದು ಸಂಕಟಪಡುತ್ತಾರೆ ತೆಂಗಿನಕಾಯಿ ವ್ಯಾಪಾರಸ್ಥ ಅಬ್ದುಲ್ ಖಾದರ್.

ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ತೆಂಗಿನಕಾಯಿ ಬೆಲೆ ಏರಿಳಿತ ಇದೆ. ಕಳೆದ ಎರಡು ವರ್ಷಗಳಿಂದಲೂ ಬೆಲೆ ವ್ಯತ್ಯಾಸ ನಡೆದಿದೆ. ಜನವರಿ ನಂತರ ಮತ್ತೆ ತೆಂಗಿನಕಾಯಿಗೆ ಉತ್ತಮ ಬೆಲೆ ನಿರೀಕ್ಷಿಸಲಾಗಿದೆ. ರೈತರು ಈ ಸಮಯದಲ್ಲಿ ಎಳನೀರಿಗೆ ಹೆಚ್ಚಿನ ಒತ್ತು ನೀಡಿ, ಅದನ್ನೇ ಮಾರುಕಟ್ಟೆಗೆ ನೀಡಬೇಕು ಎನ್ನುವ ಸಲಹೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ಎಂ.ವಿಶ್ವನಾಥ ಅವರದ್ದು.

ಪ್ರಥಮ ದರ್ಜೆಯ ಒಂದು ಸಾವಿರ ತೆಂಗಿನಕಾಯಿಗೆ ಈಗ ಮಾರುಕಟ್ಟೆ ಬೆಲೆರೂ4ಸಾವಿರದಿಂದ 9,500ರವರೆಗೆ ಇದೆ. ದ್ವಿತೀಯ ದರ್ಜೆಯ ತೆಂಗಿನಕಾಯಿಗೆರೂ3 ಸಾವಿರದಿಂದ 7 ಸಾವಿರ ಇದೆ. ಕಳೆದ ಬಾರಿರೂ6 ಸಾವಿರದಿಂದರೂ9 ಸಾವಿರದವರೆಗೆ ಇತ್ತು ಎಂಬುದು ಅವರ ವಿವರಣೆ.

ಕೊಬ್ಬರಿ ಬೆಲೆ ಕುಸಿತ ಆಗಿರುವುದರಿಂದ ಸಹಜವಾಗಿಯೇ ಹಸಿಕಾಯಿಯ ಬೆಲೆ ಕುಸಿತ ಆಗಿದೆ. ವಿಪರ್ಯಾಸ ಎಂದರೆ ಗ್ರಾಹಕ ಮಾತ್ರ ಎಂದಿನ ದರದಲ್ಲಿ ತೆಂಗಿನಕಾಯಿ ಕೊಂಡುಕೊಳ್ಳುತ್ತಿದ್ದಾನೆ. ಕೇಂದ್ರ ಸರ್ಕಾರ ತಕ್ಷಣವೇ ಬೆಂಬಲ ಬೆಲ ಘೋಷಿಸಬೇಕು. ಜತೆಗೆ ತೆಂಗಿನಕಾಯಿ ಸಂಬಂಧಿತ ಉತ್ಪನ್ನಗಳ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ತೆಂಗಿನ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ಆನೇಕ ಸಂಸ್ಥೆಗಳಿವೆ. ಅವು ಈ ಸಂದರ್ಭದಲ್ಲಿ ಇಚ್ಛಾಶಕ್ತಿ ಪ್ರಕಟಿಸಬೇಕು ಎನ್ನುತ್ತಾರೆ ರೈತ ಮುಖಂಡ ಕೆ.ಟಿ. ಗಂಗಾಧರ್.

ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸುವಂತೆ ಈ ಹಿಂದೆ ಸರ್ಕಾರಕ್ಕೆ ಆಗ್ರಹಿಸಲಾಗಿತ್ತು. ಈಗ ಮತ್ತೆ ಡಿ. 21ರಂದು ರಾಜ್ಯದ ಎಲ್ಲೆಡೆ ಜಿಲ್ಲಾ ಕೇಂದ್ರಗಳಲ್ಲಿ ಈ ವಿಷಯವೂ ಸೇರಿದಂತೆ ರೈತರ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂಬ ಮಾತು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.