ADVERTISEMENT

ರೈತರ ನೆಮ್ಮದಿ ಬದುಕಿಗೆ ಸಂಚಕಾರ !

ಅರಣ್ಯ ಒತ್ತುವರಿದಾರರಿಗೆ ನೋಟಿಸ್‌ ಜಾರಿ

ಶಿವಾನಂದ ಕರ್ಕಿ
Published 9 ಜನವರಿ 2014, 5:56 IST
Last Updated 9 ಜನವರಿ 2014, 5:56 IST

ತೀರ್ಥಹಳ್ಳಿ:  ಕಾಡಿನ ನಡುವೆ ನೆಮ್ಮದಿ ಬದುಕು ಕಟ್ಟಿಕೊಂಡ ಮಲೆನಾಡಿನ ರೈತರಿಗೆ ಅರಣ್ಯ ಇಲಾಖೆಯ ಹೊಸ ಕಾನೂನು ತಲೆನೋವಿಗೆ ಕಾರಣವಾಗಿದೆ. ಸುಪ್ರಿಂಕೋರ್ಟ್‌ ಆದೇಶದಂತೆ ತೆರವಿಗೆ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಇಲಾಖೆಯಿಂದ ಗುರುತಾದ ರೈತರ ಪ್ರತಿ ಮನೆ ಮನೆಗಳಿಗೆ ನೋಟಿಸ್‌ ತಲುಪುತ್ತಿರುವುದು ರೈತರ ನಿದ್ದೆಗೆಡಿಸಿದೆ.

ತಾಲ್ಲೂಕು ವ್ಯಾಪ್ತಿಯ ಮಂಡಗದ್ದೆ, ತೀರ್ಥಹಳ್ಳಿ, ಆಗುಂಬೆ ಸಾಮಾನ್ಯ ವಲಯ ಆರಣ್ಯ ವ್ಯಾಪ್ತಿಯ ರೈತರಿಗೂ ಒತ್ತುವರಿ ತೆರವಿಗೆ ನೋಟಿಸ್ ನೀಡಲಾಗುತ್ತಿದೆ. ಶೆಟ್ಟಿಹಳ್ಳಿ ಅಭಯಾ ಆರಣ್ಯದ ಹಣಗೆರೆ ವನ್ಯಜೀವಿ ವಲಯ ಆರಣ್ಯ ವ್ಯಾಪ್ತಿಯ ಅನೇಕ ರೈತರಿಗೆ ಒತ್ತುವರಿ ಪ್ರದೇಶ ತೆರವು ಗೊಳಿಸುವಂತೆ ನೋಟಿಸ್ ನೀಡಲಾಗಿದ್ದು, ಒಂದು ತಿಂಗಳೊಳಗೆ ತೆರವುಗೊಳಿಸದೇ ಇದ್ದರೆ  ಕಾನೂನು ಕ್ರಮ ತೆಗೆದುಕೊಂಡು ಭೂ ಪ್ರದೇಶ ವಶಕ್ಕೆ ಪಡೆಯಲಾಗುತ್ತದೆ ಎಂದು ತಿಳಿವಳಿಕೆ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ಮೊದಲ ಹಂತದಲ್ಲಿ 10 ಎಕರೆ ಪ್ರದೇಶಕ್ಕೂ ಹೆಚ್ಚು ಒತ್ತುವರಿ ಮಾಡಿದ ರೈತರಿಗೆ ನೋಟಿಸ್ ನೀಡಲಾಗಿದೆ. ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ 10 ಒತ್ತುವರಿದಾರ ರೈತರಿಗೆ 2013, ಡಿಸೆಂಬರ್‌ 13 ರಂದು ತೆರವು ನೋಟಿಸ್ ನೀಡಲಾಗಿದೆ. 1 ರಿಂದ 4, 6ರಿಂದ 10 ಮತ್ತು 10 ಎಕರೆಗಿಂತ ಹೆಚ್ಚು ಪ್ರದೇಶ ಎಂದು ವಿಂಗಡಿಸಿ ತೆರವು ನೋಟಿಸ್ ನೀಡಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ದೇಮಾಲಪುರ ಗ್ರಾಮ ಪಂಚಾಯ್ತಿ ಯೋಗಿಮಳಲಿ, ಕೆಸುವಿನಮನೆ, ವಾಟಗಾರು, ಅಲಸೆ, ಹಣಗೆರೆ, ಬುಕ್ಕಿವರೆ, ಸಂಕ್ಲಾಪುರ ಸೇರಿದಂತೆ ಅನೇಕ ಗ್ರಾಮದ ಒತ್ತುವರಿದಾರ ರೈತರಿಗೆ ಈಗಾಗಲೇ ನೋಟಿಸ್‌ ತಲುಪಿದೆ.

ನಾವು ಉತ್ತಿ ಭಿತ್ತಿ, ಬೆಳೆದ ಭೂಮಿಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಚಡಪಡಿಕೆಯಲ್ಲಿ ರೈತರಿದ್ದಾರೆ. ನೂರಾರು ವರ್ಷಗಳಿಂದ ಮನೆ ಕಟ್ಟಿಕೊಂಡು ಕೃಷಿಯಲ್ಲಿ ತೊಡಗಿರುವ ರೈತರು ಈಗ ಒತ್ತುವರಿ ಪ್ರದೇಶ  ತೆರವುಗೊಳಿಸಿ ಹೋಗು ವುದಾದರೂ ಎಲ್ಲಿಗೆ ಎಂಬ ಪ್ರಶ್ನೆ  ಮುಂದಿಟ್ಟು ಮರಗುತ್ತಿದ್ದಾರೆ. ಅರಣ್ಯ ಒತ್ತುವರಿ ಭೂ ಪ್ರದೇಶದ ತೆರವು ಕಾಯ್ದೆಗೆ  ಸುಪ್ರಿಂ ಕೋರ್ಟ್‌ ಆದೇಶದಂತೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಂಡಿದ್ದರೂ, ಸರ್ಕಾರ ಒತ್ತುವರಿದಾರರ ಹಿತ ಕಾಪಾಡುವುದಕ್ಕೆ ಮುಂದಾಗಿಲ್ಲ.

ಈ ಹಿಂದೆ ಅರಣ್ಯ ಸಚಿವ ರಮಾನಾಥ ರೈ 10 ಎಕರೆ ಪ್ರದೇಶಕ್ಕೂ ಹೆಚ್ಚು ಒತ್ತುವರಿ ಮಾಡಿರುವ ರೈತರ ಮೇಲೆ ಮಾತ್ರ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಘೋಷಿಸಿದ್ದರು. ಆದರೆ, ಅರಣ್ಯ ಇಲಾಖೆ ಒತ್ತುವರಿ ಪ್ರದೇಶ ತೆರವು ಕುರಿತು ಪಟ್ಟಿ ಸಿದ್ಧಪಡಿಸಿ ತೆರವಿಗೆ ಮುಂದಾಗಿದೆ.  ರಾಜಕೀಯ ಪಕ್ಷಗಳ ಮುಖಂಡರು ಅರಣ್ಯ ಒತ್ತುವರಿದಾರರ ಸಮಸ್ಯೆ ಕುರಿತು ಎಷ್ಟೇ ಹೋರಾಟ  ನಡೆಸಿದ್ದರೂ ಇದರಿಂದ ರೈತರಿಗೆ ಯಾವುದೇ ಪ್ರಯೋಜನ ಸಿಕ್ಕಿಲ್ಲ.

ಯಾವುದು ಅರಣ್ಯ ಪ್ರದೇಶ, ಯಾವುದು ಕಂದಾಯ ಪ್ರದೇಶ ಎಂದು ತಿಳಿಯದೇ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇದುವರೆವಿಗೂ ನಮಗೆ ಇಂಥ ತೊಂದರೆ ಅರಣ್ಯ ಇಲಾಖೆಯಿಂದಾಗಲಿ. ಸರ್ಕಾರದಿಂದಾಗಲಿ ಆಗಿಲ್ಲ. ಈಗ ಏಕಾ ಏಕಿ ನೋಟಿಸ್ ನೀಡಿ ಊರು ಬಿಡಬೇಕು ಎಂದರೆ ಹೇಗೆ ? ಎಂಬ ಪ್ರಶ್ನೆಯನ್ನು ಅನೇಕ ರೈತರು ಮುಂದಿಡುತ್ತಿದ್ದಾರೆ.

‘ಅರಣ್ಯ ಇಲಾಖೆ ಇಷ್ಟು ವರ್ಷಗಳ ಕಾಲ ಸುಮ್ಮನಿದ್ದು, ಈಗ ನೀವು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದ್ದೀರಿ, ಇದನ್ನು ತೆರವುಗೊಳಿಸಿ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಇಲಾಖೆ ಒತ್ತುವರಿ ವಿಚಾರವಾಗಿ ಹಿಂದಿನಿಂದಲೂ ಕಠಿಣ ಕ್ರಮ ಕೈಗೊಂಡಿದ್ದರೆ, ಇಂಥ ಸಂದರ್ಭ ಎದುರಾಗುತ್ತಿರಲಿಲ್ಲ. ಈಗ ಒತ್ತುವರಿದಾರ ಹೋರಾಟ ನಡೆಸದೆ ಬೇರೆ ಮಾರ್ಗ ಉಳಿದಿಲ್ಲ’ ಎಂದು ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕೋಣಂದೂರು ಅಶೋಕ್‌ ತಿಳಿಸಿದ್ದಾರೆ.

‘ಸುಪ್ರಿಂ ಕೋರ್ಟ್‌ ಆದೇಶದಂತೆ ಅರಣ್ಯ ಇಲಾಖೆ ಕಾರ್ಯ ನಿರ್ವಹಿಸಲಿದೆ. ಈಗಾಗಲೇ 10 ಎಕರೆಗೂ ಹೆಚ್ಚು ಪ್ರದೇಶ ಒತ್ತುವರಿ ಮಾಡಿದ ರೈತರಿಗೆ ನೋಟಿಸ್ ನೀಡಲಾಗಿದೆ. 5 ಎಕರೆ ಪ್ರದೇಶ ಸೇರಿದಂತೆ ಎಲ್ಲಾ ಒತ್ತುವರಿದಾರರಿಗೂ ನೋಟಿಸ್ ಜಾರಿ ಮಾಡಲಾಗುವುದು. ತೆರವು ಕಾರ್ಯ ಅನಿವಾರ್ಯವಾಗಿದೆ’ ಎಂದು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಶಿವಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.