ADVERTISEMENT

ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2011, 5:45 IST
Last Updated 19 ಏಪ್ರಿಲ್ 2011, 5:45 IST
ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರದಾನ
ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರದಾನ   

ಶಿವಮೊಗ್ಗ: ಕರ್ನಾಟಕ ಲಲಿತಕಲಾ ಅಕಾಡೆಮಿಯ 2010ನೇ ಸಾಲಿನ ಗೌರವ ಪ್ರಶಸ್ತಿಯನ್ನು ರಾಯಚೂರಿನ ಹೀರಾಲಾಲ್ ಮಲ್ಕಾರಿ, ಬೆಂಗಳೂರಿನ ಸುಧಾ ವೆಂಕಟೇಶ್ ಹಾಗೂ ವಿಜಾಪುರದ ಪಿ.ಎಸ್. ಕಡೇಮನಿ ಅವರಿಗೆ ನಗರದ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಸಂಜೆ ಪ್ರದಾನ ಮಾಡಲಾಯಿತು.ಪ್ರಶಸ್ತಿ ಪ್ರದಾನ ಮಾಡಿದ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಚಿತ್ರಕಲೆ ಮನುಷ್ಯನ ಹುಟ್ಟಿನ ಜತೆಗೆ ಬೆಳೆದುಬಂದಿದೆ. ಮನುಷ್ಯ ತನ್ನ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಮೊದಲು ಕಂಡುಕೊಂಡಿದ್ದು ಚಿತ್ರಕಲೆಯನ್ನು ಎಂದರು.
ಪ್ರಾಸ್ತಾವಿಕ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಡಾ.ಜೆ.ಎಸ್. ಖಂಡೇರಾವ್, ಸರ್ಕಾರ ಬಜೆಟ್‌ನಲ್ಲಿ ಲಲಿತಕಲಾ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿರುವುದು ಸ್ವಾಗತರ್ಹ. ಆದರೆ, ಇದನ್ನು ತಕ್ಷಣವೇ ಆರಂಭಿಸಬೇಕು ಎಂದು ಮನವಿ ಮಾಡಿದರು.ಅಕಾಡೆಮಿ ಪ್ರಸ್ತುತ ವಾರ್ಷಿಕವಾಗಿ ಮೂವರು ಹಿರಿಯ ಕಲಾವಿದರಿಗೆ ಗೌರವ ಪ್ರಶಸ್ತಿ ನೀಡುತ್ತದೆ. ಆದರೆ, ಚಿತ್ರಕಲಾವಿದರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಸಂಖ್ಯೆಯನ್ನು ಐದಕ್ಕೆ ಏರಿಸಬೇಕೆಂಬ ಚಿಂತನೆ ಅಕಾಡೆಮಿಗಿದೆ. ಈ ಸಂಬಂಧ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಅಕಾಡೆಮಿಯ 40ನೇ ವಾರ್ಷಿಕ ಕಲಾಕೃತಿ ಬಹುಮಾನಗಳನ್ನು ಬಿ.ಎಸ್. ದೇಸಾಯಿ (ಹಾಸನ), ಟಿ.ಎಸ್. ಪ್ರತಿಭಾ (ಬೆಂಗಳೂರು), ಎಸ್.ವಿ. ಹೂಗಾರ (ಬೆಂಗಳೂರು), ಅನಿಲ್ ಎಸ್. ಇಚೇರಿ (ವಿಜಾಪುರ), ಉದಯ ಡಿ. ಜೈನ್ (ಬೆಂಗಳೂರು), ಕಾಶಿನಾಥ್ ವಿ. ಪತ್ತಾರ (ವಿಜಾಪುರ), ಎಚ್. ಮಂಜುನಾಥ್ (ತುಮಕೂರು), ಬಿ.ಎಚ್. ಲೋಕೇಶ್ (ಬೆಂಗಳೂರು), ಸಂತೋಷ್ ಅಂಬರಕರ್ (ಬೆಂಗಳೂರು) ಹಾಗೂ ಬಸವರಾಜ ವಿ. ಕಮಾಜಿ (ಗುಲ್ಬರ್ಗ) ಅವರಿಗೆ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಶಾಸಕ ಕೆ.ಜಿ. ಕುಮಾರಸ್ವಾಮಿ ಮಾತನಾಡಿದರು. ಹಿರಿಯ ಚಿತ್ರಕಲಾವಿದ ಎಸ್.ಆರ್. ವೆಂಕಟೇಶ್, ಅಕಾಡೆಮಿ ರಿಜಿಸ್ಟ್ರಾರ್ ಎಚ್.ಜಿ. ವಿಜಯಲಕ್ಷ್ಮೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮುನಿರಾಜು ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಸಂಚಾಲಕ ಕೆ.ಬಿ. ವಸಂತಕುಮಾರ್ ಸ್ವಾಗತಿಸಿದರು.
ಇದಕ್ಕೂ ಮುನ್ನ ಹಮ್ಮಿಕೊಂಡಿದ್ದಮೆರವಣಿಗೆಗೆ ಜನರಿಂದ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.