ADVERTISEMENT

ವನ್ಯ ಜೀವಿಗಳಿಗೆ ಮೂಲಸೌಕರ್ಯ

ಶರಾವತಿ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆಯಿಂದ ಕ್ರಮ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 10:31 IST
Last Updated 3 ಅಕ್ಟೋಬರ್ 2017, 10:31 IST
ವನ್ಯ ಜೀವಿಗಳಿಗೆ ಮೂಲಸೌಕರ್ಯ
ವನ್ಯ ಜೀವಿಗಳಿಗೆ ಮೂಲಸೌಕರ್ಯ   

ಕಾರ್ಗಲ್: ಸಮೀಪದ ಶರಾವತಿ ಅಭಯಾರಣ್ಯದ ವನ್ಯ ಜೀವಿಗಳಿಗೆ ಅಗತ್ಯವಿರುವ ಕುಡಿಯುವ ನೀರು, ಲವಣಾಂಶಗಳು ಇನ್ನಿತರ ಮೂಲ ಸೌಕರ್ಯಗಳನ್ನು ಪೂರೈಸಲು ಶರಾವತಿ ವನ್ಯ ಜೀವಿ ಅರಣ್ಯ ಇಲಾಖೆಯವರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ವನ್ಯ ಜೀವಿಗಳು ಸಂಚರಿಸುವ ಮಾರ್ಗದಲ್ಲಿ ಸಣ್ಣ ಸಣ್ಣ ನೈಸರ್ಗಿಕ ತೊಟ್ಟಿಗಳನ್ನು ನಿರ್ಮಾಣ ಮಾಡಿ, ಅವುಗಳಲ್ಲಿ ಉಪ್ಪು ಚೆಲ್ಲಲಾಗಿದೆ. ಅವುಗಳಿಂದ ಮೃಗಗಳಿಗೆ ಕ್ಯಾಲ್ಸಿಯಂ ಲಭ್ಯವಾಗುತ್ತಿದೆ ಎಂದು ವನ್ಯ ಜೀವಿ ಇಲಾಖೆಯವರು ಅಭಿಪ್ರಾಯಪಡುತ್ತಾರೆ.

ಬೆಟ್ಟಗಳು, ಗುಡ್ಡಗಾಡುಗಳ ಇಳಿಜಾರಿನ ಇಕ್ಕೆಲಗಳಲ್ಲಿ ಕಾಡು ಕಲ್ಲುಗಳನ್ನು ಬಳಸಿ ಪ್ರಕೃತಿ ನಿರ್ಮಿತ ಒಡ್ಡುಗಳನ್ನು ಕಟ್ಟಲಾಗಿದೆ. ಇದರಿಂದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಬೇಸಿಗೆಯ ಬಿಸಿಲಿನ ನಡುವೆಯೂ ಜಲಮೂಲಗಳನ್ನು ಸಂಗ್ರಹಿಸಲು ಇಂಗು ಗುಂಡಿ ನಿರ್ಮಾಣ ಮಾಡಿದಂತೆ ಆಗುತ್ತಿದೆ. ಇವು ಗಿಡ–ಮರಗಳ ಜೊತೆಗೆ ವನ್ಯ ಜೀವಿ ಸಂಪತ್ತಿನ ನೀರಿನ ಬವಣೆಯನ್ನು ತೀರಿಸುತ್ತವೆ. 431 ಚದರ ಕಿಲೋಮೀಟರ್‌ ವ್ಯಾಪ್ತಿ ಹೊಂದಿರುವ ಶರಾವತಿ ಅಭಯಾರಣ್ಯದ ದಟ್ಟ ಕಾಡಿನ ಆಜು–ಬಾಜು ನೂರಾರು ರೈತ ಕುಟುಂಬಗಳಿವೆ. ರೈತರ ಜಮೀನು, ಹೊಲ–ಗದ್ದೆಗಳಲ್ಲಿರುವ ಬೆಳೆಗಳನ್ನು ವನ್ಯ ಮೃಗಗಳ ದಾಳಿಗೆ ಒಳಗಾಗದಂತೆ ಗಡಿ ಪ್ರದೇಶದ ಸುತ್ತಲೂ ಅಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಅರಣ್ಯ ನಾಶ ತಡೆಯಬಹುದು ವಲಯ ಅರಣ್ಯಾಧಿಕಾರಿ ವಿನೋದ್‌ ಅಂಗಡಿ ಮಾಹಿತಿ ನೀಡಿದರು.

ADVERTISEMENT

ಕಾಡಿನ ಬೆಂಕಿ ನಿಯಂತ್ರಿಸಲು ಲಿಂಗನಮಕ್ಕಿ ಹಿನ್ನೀರ ದಡದಲ್ಲಿರುವ, ಕಾಡುಕೋಣಗಳ ತಾಣ ಎಂದೇ ಹೆಸರು ವಾಸಿಯಾಗಿರುವ ಸಸಿ ಚೌಕದ ಅತಿ ಎತ್ತರದ ಪ್ರದೇಶದಲ್ಲಿ ವೀಕ್ಷಣಾ ಗೋಪುರವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಇಲಾಖೆಯ ಸಿಬ್ಬಂದಿ ಸದಾ ಜಾಗೃತರಾಗಿ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಕಂಡು ಬರುವ ಬೆಂಕಿ ನಿಯಂತ್ರಣಕ್ಕೆ ಸನ್ನದ್ಧರಾಗಿದ್ದಾರೆ. ಜಿಂಕೆ, ಕಡವೆ, ಮುಳ್ಳು ಹಂದಿ, ಕಾಡು ಹಂದಿ, ಬರ್ಕಾ, ಮೊಲ, ಕೆಂದಳಿಲು ಮೊದಲಾದ ಪ್ರಾಣಿಗಳ ಬೇಟೆಯನ್ನು ಸಂಪೂರ್ಣ ನಿಯಂತ್ರಿಸಿದ್ದಾರೆ. ಕಾಡು ಕೋಣ, ಚಿರತೆ, ಹುಲಿ ಸಂತತಿಗಳು ದಟ್ಟ ಅರಣ್ಯದಲ್ಲಿ ನೆಲೆಸುವಂತೆ ಮತ್ತು ಜನವಸತಿ ಪ್ರದೇಶಗಳಿಗೆ ಬರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಾರ್ವಜನಿಕರ ನೆರವಿಗಾಗಿ ಅಲ್ಲಲ್ಲಿ ಅಳವಡಿಸಿರುವ ಮಾಹಿತಿ ಫಲಕಗಳನ್ನು ಕಿಡಿಗೇಡಿಗಳು ನಾಶ ಪಡಿಸುತ್ತಿರುವುದು ಅನಾಗರಿಕತೆಯ ಸಂಕೇತವಾಗಿದೆ ಎಂದು ವನ್ಯ ಜೀವಿ ಇಲಾಖೆಯ ಉಪಸಂರಕ್ಷಣಾಧಿಕಾರಿ ರಮೇಶ್ ಪುಟ್ನಳ್ಳಿ ಬೇಸರ ವ್ಯಕ್ತಪಡಿಸಿದರು. ಕಿಡಿಗೇಡಿಗಳನ್ನು ಪತ್ತೆಹಚ್ಚಲು ಅಲ್ಲಲ್ಲಿ ಆಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಂತೋಷ್‌ ಕುಮಾರ್ ಕಾರ್ಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.