ADVERTISEMENT

ವಸತಿನಿಲಯದ ವಿದ್ಯಾರ್ಥಿಗಳ ಪ್ರಗತಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 6:00 IST
Last Updated 2 ಜೂನ್ 2011, 6:00 IST

ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆಯಿಂದ ಶಿವಮೊಗ್ಗ ತಾಲ್ಲೂಕಿನ ವಸತಿನಿಲಯಗಳಲ್ಲಿ ಪ್ರತಿದಿನ ಸಂಜೆ ನಡೆಯುವ ತರಗತಿಗಳಿಗೆ ನುರಿತ ಅಧ್ಯಾಪಕರನ್ನು ನೇಮಿಸಿ, ಶೈಕ್ಷಣಿಕ ಪ್ರಗತಿಗೆ ಹಾಗೂ ಉತ್ತಮ ಫಲಿತಾಂಶಕ್ಕೆ ಶ್ರಮಿಸುವಂತೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಶಿವಮೊಗ್ಗ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯ್ತಿಯಿಂದ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ ಮಾತನಾಡಿ, ವಸತಿ ನಿಲಯಗಳಲ್ಲಿ ಸಂಜೆ ತರಗತಿಗಳಿಗೆ ನೇಮಿಸಿಕೊಳ್ಳುವ ಬೋಧಕರಿಗೆ ನೀಡುವ ಗೌರವಧನ ತೀರಾ ಕಡಿಮೆಯಾಗಿದೆ.

ಗೌರವಧನ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ಜಿ.ಪಂ. ಉಪಾಧ್ಯಕ್ಷ ಹುಣವಳ್ಳಿ ಗಂಗಾಧರಪ್ಪ ಭರವಸೆ ನೀಡಿದರು.

ಶಿವಮೊಗ್ಗ ತಾಲ್ಲೂಕಿನಲ್ಲಿ ಅಂಗನವಾಡಿ ಕೇಂದ್ರಗಳು ಪುನರಾರಂಭಗೊಂಡಿದ್ದು, ಹೊಸೂರಿನ ಅಂಗನವಾಡಿ ಕೇಂದ್ರದಲ್ಲಿ ಈವರೆಗೂ ಪೌಷ್ಟಿಕ ಆಹಾರ ಸರಬರಾಜು ಆಗಿಲ್ಲ. ಅಲ್ಲದೇ, ದಾಸ್ತಾನು ಕೂಡ ಇರುವುದಿಲ್ಲ. ತಕ್ಷಣ ಇದರ ವ್ಯವಸ್ಥೆ ಮಾಡಬೇಕು ಎಂದು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ. ಅಶೋಕ್‌ನಾಯಕ್, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಣ್ಣಗೆ ಸೂಚಿಸಿದರು.

ರೆಡ್ಡಿಕ್ಯಾಂಪ್‌ನಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಪಡೆದು, ಕಟ್ಟಡ ನಿರ್ಮಿಸಲು ಮುಂದಾಗಿದ್ದು, ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ, ಸೋಗಾನೆ ಹೊಸೂರು ಗ್ರಾಮದಲ್ಲಿ ಹೊಸದಾಗಿ ಅಂಗನವಾಡಿ ಕಟ್ಟಡ ನಿರ್ಮಿಸಲು ಮುಂದಾಗಿರುವುದು ಕಾನೂನು ಬಾಹಿರವಾಗಿದೆ. ಪರವಾನಗಿ ಇಲ್ಲದೆ, ಕಟ್ಟಡ ನಿರ್ಮಿಸಲು ಮುಂದಾಗಿರುವ ಶಿಶು ಯೋಜನಾಧಿಕಾರಿಗಳಿಗೆ ತಿಳಿವಳಿಕೆ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಪ್ರಸಕ್ತ ಮುಂಗಾರು ಹಂಗಾಮಿಗೆ ತಾಲ್ಲೂಕಿಗೆ ಅಗತ್ಯ ಇರುವ ಬಿತ್ತನೆಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ಸಹಕಾರಿ ಸಂಘಗಳ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟವಾಗಬಹುದಾದ ಸಂಭವವಿದ್ದು, ರಸಗೊಬ್ಬರಗಳ ನಿಗದಿತ ದರಪಟ್ಟಿಯನ್ನು ಮಾರಾಟ ಮಳಿಗೆಯಲ್ಲಿ ಪ್ರದರ್ಶಿಸುವಂತೆ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಹನುಮನರಸಯ್ಯ ತಿಳಿಸಿದರು.

ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಕೆ.ಬಿ. ಚಂದ್ರಶೇಖರಪ್ಪ, ಉಪಾಧ್ಯಕ್ಷೆ ಕಮಲಮ್ಮ  ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಿ. ಸಿದ್ದಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.