ಭದ್ರಾವತಿ: ಇಲ್ಲಿನ ವಿಐಎಸ್‌ಎಲ್ ಕಾರ್ಖಾನೆ ಸಂಪೂರ್ಣವಾಗಿ ಗುತ್ತಿಗೆ ಕಾರ್ಮಿಕರನ್ನು ಅವಲಂಬಿಸಿದೆ. ಅವರಿಲ್ಲದೇ ಒಂದು ಕೆಜಿ ಉಕ್ಕನ್ನು ಸಹ ಉತ್ಪಾದಿಸಲು ಸಾಧ್ಯವಿಲ್ಲ ಎಂದು ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್‌ನ ಅಧ್ಯಕ್ಷ ಎಲ್. ರಂಗೇಗೌಡ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆದಿರುವ ಧರಣಿ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟರೂ ಸಹ ಆಡಳಿತ ಮಂಡಳಿ ಮಾತುಕತೆಗೆ ಮುಂದಾಗದಿರುವುದು ಖಂಡನೀಯ ಎಂದರು.
ಹಲವು ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಗತ್ಯವಿರುವ ರಕ್ಷಾಕವಚ, ಷೂ, ಗ್ಲೌಸ್ ಹಾಗೂ ಇನ್ನಿತರೆ ಪರಿಕರಳಗನ್ನು ವಿತರಣೆ ಮಾಡದ ಆಡಳಿತ ಮಂಡಳಿ ಉದ್ಯೋಗಿಗಳನ್ನು ಕಾನೂನು ಬಾಹಿರವಾಗಿ ದುಡಿಸಿಕೊಳ್ಳುತ್ತಿದೇ ಎಂದು ದೂರಿದರು.
ಈ ಕಾರ್ಮಿಕರ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆಯಿದ್ದರೂ ಅಲ್ಲಿ ಅದನ್ನು ನಿಲುಗಡೆ ಮಾಡಲು ಅವಕಾಶವಿಲ್ಲ. ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಇಎಸ್‌ಐ ಸೌಲಭ್ಯವಿದ್ದರೂ ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಸಿಬ್ಬಂದಿ ಕೊರತೆ ಇದೆ ಎಂದು ಸಬೂಬು ಹೇಳುತ್ತಿರುವುದು ದೌರ್ಜನ್ಯಕ್ಕೆ ಹಿಡಿದ ಕೈಗನ್ನಡಿ ಎಂದರು.
ಗೌರವಾಧ್ಯಕ್ಷ ಜೆ.ಎನ್. ಚಂದ್ರಹಾಸ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ವೇತನನೀತಿಯಲ್ಲಿ ತಾರತಮ್ಯ ನೀತಿ ಅನುಸರಿಸಿದೆ. ಈ ಕಾರ್ಮಿಕರನ್ನು 8 ಗಂಟೆಗಿಂತ ಹೆಚ್ಚು ದುಡಿಸಿಕೊಂಡರೂ ಅದಕ್ಕೆ ತಕ್ಕ ವೇತನ ನೀಡದೇ ವಂಚಿಸಲಾಗುತ್ತಿದೆ ಎಂದು ದೂರಿದರು.
ಈ ಎಲ್ಲಾ ಬೇಡಿಕೆಗಳ ಕುರಿತಂತೆ 14 ದಿನದಲ್ಲಿ ಆಡಳಿತ ಮಂಡಳಿ ಸ್ಪಂದಿಸದಿದ್ದರೆ ಹೋರಾಟದ ಸ್ವರೂಪ ಬದಲಿಸಿ, ಗುತ್ತಿಗೆ ಕಾರ್ಮಿಕರು ಕೆಲಸಕ್ಕೆ ಹಾಜರಾಗದೇ ಚಳವಳಿ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆ. ಜಗದೀಶ್, ಚಂದ್ರಮೋಹನ್, ಎಂ. ಅನಂತರಾಮ್, ಮಹಾದೇವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.