ADVERTISEMENT

ವಿಜೃಂಭಣೆಯಿಂದ ಸಾಗಿದ ದೇವಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 10:28 IST
Last Updated 1 ಅಕ್ಟೋಬರ್ 2017, 10:28 IST
ತೀರ್ಥಹಳ್ಳಿಯಲ್ಲಿ ಶನಿವಾರ ವಿಜಯದಶಮಿ ಅಂಗವಾಗಿ ಚಾಮುಂಡೇಶ್ವರಿ ದೇವಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ತೀರ್ಥಹಳ್ಳಿಯಲ್ಲಿ ಶನಿವಾರ ವಿಜಯದಶಮಿ ಅಂಗವಾಗಿ ಚಾಮುಂಡೇಶ್ವರಿ ದೇವಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.   

ತೀರ್ಥಹಳ್ಳಿ: ನಾಡದೇವಿ ಚಾಮುಂಡೇಶ್ವರಿ ಮೆರವಣಿಗೆ ಪಟ್ಟಣದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಿತು. ಪಟ್ಟಣದ ಶ್ರೀರಾಮೇಶ್ವರ ದೇವಸ್ಥಾನದಿಂದ ಹೊರಟ ಶ್ರೀರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವ ಮತ್ತು ಚಾಮುಂಡೇಶ್ವರಿ ದೇವಿಯ ಭವ್ಯ ಮೆರವಣಿಗೆಗೆ ರಸ್ತೆ ಉದ್ದಕ್ಕೂ ನೆರೆದ ಜನರು ಸಾಕ್ಷಿಯಾದರು.

ಮಧ್ಯಾಹ್ನ ಎರಡು ಗಂಟೆಗೆ ಶಾಸಕ ಕಿಮ್ಮನೆ ರತ್ನಾಕರ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ರಥಬೀದಿಯಿಂದ ಸಾಗಿ ಆಜಾದ್‌ ರಸ್ತೆ ಮೂಲಕ ಕುಶಾವತಿ ನೆಹರೂ ಪಾರ್ಕ್‌ ತಲುಪಿತು. ವಿವಿಧ ವೇಷಭೂಷಣಗಳು, ಹುಲಿವೇಷ, ಕೀಲು ಕುದುರೆ, ಡೊಳ್ಳುಕುಣಿತ, ಆಕರ್ಷಕ ಸ್ತಬ್ಧ ಚಿತ್ರಗಳು ಜನರನ್ನು ರಂಜಿಸಿದವು.

ಸಂಜೆ 5ಕ್ಕೆ ಮೆರವಣಿಗೆ ಕುಶಾವತಿಯ ನೆಹರೂ ಪಾರ್ಕ್‌ ತಲುಪಿತು. ನೆಹರೂ ಪಾರ್ಕಿನಲ್ಲಿ ಸಾಂಪ್ರದಾಯಿಕ ಪೂಜಾ ವಿಧಾನಗಳು ನಡೆದ ನಂತರ ಬನ್ನಿ ಪೂಜೆ ನಡೆಸಲಾಯಿತು. ನೆಹರೂ ಪಾರ್ಕಿನಲ್ಲಿ ಸೇರಿದ್ದ ಜನರು ಬನ್ನಿ ಪ್ರಸಾದ ಪಡೆದು ವಿಜಯದಶಮಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ADVERTISEMENT

ಹುಲಿವೇಷ, ಡೊಳ್ಳುಕುಣಿತ, ಪೌರಾಣಿಕ, ಸಾಮಾಜಿಕ, ದೇಶದ ಭದ್ರತೆ ಕುರಿತ ಸ್ತಬ್ಧಚಿತ್ರಗಳು ಮೆರವಣಿಗೆಯುದ್ದಕ್ಕೂ ಸಾಗಿದವು. ದಸರಾ ಮೆರವಣಿಗೆ ವೇಳೆ ಅರ್ಧ ಗಂಟೆಗೂ ಹೆಚ್ಚುಕಾಲ ಮಳೆ ಸುರಿದು ಅಡ್ಡಿ ಮಾಡಿತು. ಮೆರವಣಿಗೆಯಲ್ಲಿ ಸಾಗಿದ ಕಲಾವಿದರ ವೇಷಭೂಷಣಗಳು ಮಳೆಯಿಂದಾಗಿ ಒದ್ದೆಯಾದವು.

ದಸರಾ ಅಂಗವಾಗಿ ನೆಹರೂ ಪಾರ್ಕಿನ ಸಾಂಸ್ಕೃತಿಕ ವೇದಿಕೆಯಲ್ಲಿ ಕಸ್ಟಮ್ಸ್‌ ಅಧಿಕಾರಿ ಜಿ.ನಾಗರಾಜ್‌, ಸಮಾಜ ಸೇವಕ ಬೆನಕಭಟ್‌, ಡಾ.ಕೃಷ್ಣಪ್ಪಗೌಡ ಹೊಳೆಕೊಪ್ಪ , ಶಿಕ್ಷಕಿ ರೇಣುಕಾದೇವಿ, ಯೋಗಪಟು ಗೌರಿ ಕಾರಂತ್‌ ಅವರನ್ನು ಸನ್ಮಾನಿಸಲಾಯಿತು.

ಬನ್ನಿಮಂಟಪದ ಸಾಂಸ್ಕೃತಿಕ ವೇದಿಕೆಯಲ್ಲಿ ಶಾಸಕ ಕಿಮ್ಮನೆ ರತ್ನಾಕರ ಕಾರ್ಯಕ್ರಮ ಉದ್ಘಾಟಿಸಿದರು, ತಹಶೀಲ್ದಾರ್‌ ಧರ್ಮೋಜಿರಾವ್‌ ಅಧ್ಯಕ್ಷತೆ ವಹಿಸಿದ್ದರು, ದಸರಾ ಉತ್ಸವ ಸಮಿತಿ ಸಂಚಾಲಕ ಡಿ.ಎಸ್‌.ವಿಶ್ವನಾಥಶೆಟ್ಟಿ, ಮಾಜಿ ಶಾಸಕ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನವಮಣಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂದೇಶ್‌ ಜವಳಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ದಸರಾ ಉತ್ಸವ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.