ADVERTISEMENT

ವಿದ್ಯಾರ್ಥಿಗಳ ಧರಣಿ; ಮಾತುಕತೆ ವಿಫಲ

ಪಶುವೈದ್ಯಕೀಯ ಪರಿಷತ್ತಿನ ನೋಂದಣಿ ಸಂಖ್ಯೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:52 IST
Last Updated 5 ಸೆಪ್ಟೆಂಬರ್ 2013, 8:52 IST

ಶಿವಮೊಗ್ಗ: ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ನೋಂದಣಿ ಸಂಖ್ಯೆಗೆ ಆಗ್ರಹಿಸಿ ಶಿವಮೊಗ್ಗ ಪಶುವೈದ್ಯಕೀಯ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದು, ಬೆಂಗಳೂರಿನಿಂದ ಆಗಮಿಸಿದ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಗಳನ್ನು ಒಳಗೊಂಡ ತಂಡ ವಿದ್ಯಾರ್ಥಿಗಳ ಜತೆ ನಡೆಸಿದ ಮಾತುಕತೆ ವಿಫಲವಾಗಿದೆ.

ವಿದ್ಯಾರ್ಥಿಗಳ ಧರಣಿ ಮಾಹಿತಿ ತಿಳಿದು ಬೆಂಗಳೂರಿನಿಂದ ಆಗಮಿಸಿದ ನಾಲ್ವರು ಹಿರಿಯ ಪ್ರಾಧ್ಯಾಪಕರ ತಂಡ, ವಿದ್ಯಾರ್ಥಿಗಳೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿತು. ತಂಡದ ಸದಸ್ಯರು ಧರಣಿ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು. ಆದರೆ, ವಿದ್ಯಾರ್ಥಿಗಳು ಬೇಡಿಕೆ ಈಡೇರುವವರೆಗೂ ಧರಣಿ ನಡೆಸುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ತಂಡ ಬರಿಗೈಯಲ್ಲಿ ಹಿಂತಿರುಗಿತು. 

ಕಾಲೇಜಿಗೆ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ. ಪಶು ಸಂಗೋಪನೆ ಸಚಿವ ಟಿ.ಬಿ.ಜಯಚಂದ್ರ ಅವರು ಸೆ.5ರಂದೇ ಈ ಸಂಬಂಧ ನವದೆಹಲಿಗೆ ಹೋಗುತ್ತಿದ್ದು, ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ. ಹದಿನೈದು ದಿವಸದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ. ತದನಂತರವೂ ಸಮಸ್ಯೆ ಪರಿಹಾರಗೊಳ್ಳದಿದ್ದರೆ ತಾವು ಧರಣಿ ಸತ್ಯಾಗ್ರಹ ನಡೆಸಿ ಎಂದು ವಿದ್ಯಾರ್ಥಿಗಳಿಗೆ, ತಂಡದ ಸದಸ್ಯರು ಮನವರಿಕೆ ಮಾಡಿಕೊಡಲು ಯತ್ನಿಸಿದರು.

ತರಗತಿ ತಪ್ಪಿಸಿಕೊಳ್ಳುವುದರಿಂದ ಶೈಕ್ಷಣಿಕ ವೇಳಾಪಟ್ಟಿ ಏರುಪೇರಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಇದು ಪ್ರತಿಭಟನೆ ನಡೆಸುವ ಸಮಯವೂ ಅಲ್ಲ. ನೀವು ಪ್ರತಿಭಟನೆ ಮಾಡಿ, ಬಿಡಿ ಇನ್ನು ಹದಿನೈದು ದಿವಸದಲ್ಲಿ ಕಾಲೇಜಿಗೆ ಮಾನ್ಯತೆ ಸಿಗುತ್ತದೆ. ಹಾಗೆಯೇ, ನೋಂದಣಿ ಕೊಡಿಸುವ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ಕಳೆದ ಎಂಟು ತಿಂಗಳಿನಿಂದ ಇದೇ ಮಾತು ಕೇಳಿಬರುತ್ತಿದೆ. ಆದರೆ, ಈಡೇರಿಲ್ಲ. 2006ರಲ್ಲಿ ಸರ್ಕಾರ ಆರಂಭಿಸಿದ ಈ ಕಾಲೇಜಿಗೆ ಇದುವರೆಗೂ ಮಾನ್ಯತೆ ಸಿಕ್ಕಿಲ್ಲ. ಈಗಾಗಲೇ ಎರಡು ಬ್ಯಾಚ್‌ಗಳಿಂದ ಸುಮಾರು 60 ವಿದ್ಯಾರ್ಥಿಗಳು ಕೋರ್ಸ್ ಮುಗಿಸಿದ್ದರೂ ಅವರಿಗೆ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ನೋಂದಣಿ ಸಂಖ್ಯೆ ನೀಡಿಲ್ಲ. ಎಂಟು ತಿಂಗಳ ಹಿಂದೆ ಭಾರತೀಯ ಪಶುವೈದ್ಯಕೀಯ ಪರಿಷತ್ತು ಭೇಟಿ ನೀಡಿದಾಗ ಅದು ನೀಡಿದ ಸಲಹೆ-ಸೂಚನೆಗಳನ್ನು ಈಡೇರಿಸುವ ಪ್ರಯತ್ನ ವಿಶ್ವವಿದ್ಯಾಲಯ ಮತ್ತು ಸರ್ಕಾರದ ಕಡೆಗಳಿಂದಲೂ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ನಗರದ ಅಣ್ಣಾ ಹಜಾರೆ ಹೋರಾಟ ಸಮಿತಿ, ನನ್ನ ಕನಸಿನ ಶಿವಮೊಗ್ಗ, ಬೆಂಬಲ ಸೂಚಿಸಿ ಪಾಲ್ಗೊಂಡಿದ್ದವು. ಸಮಿತಿಗಳ  ಪದಾಧಿಕಾರಿಗಳಾದ ಡಾ.ಸತೀಶ್‌ಕುಮಾರ್ ಶೆಟ್ಟಿ, ಕೆ.ವಿ.ವಸಂತಕುಮಾರ್, ರಮೇಶ್ ಯಾದವ್, ಕೆ.ಗೋಪಿನಾಥ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಪ್ರಾಧ್ಯಾಪಕರ ತಂಡದ ಸದಸ್ಯರು, ಸರ್ಕಾರ, ಕಾಲೇಜಿಗೆ ಮಾನ್ಯತೆ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಶೀಘ್ರದಲ್ಲೇ ಅದು ಸಿಗಲಿದೆ. ಭಾರತೀಯ ಪಶುವೈದ್ಯಕೀಯ ಪರಿಷತ್ತು ಸೂಚಿಸಿದ ಹಲವು ಯೋಜನೆಗಳನ್ನು ಹಂತ-ಹಂತವಾಗಿ ಜಾರಿಗೊಳಿಸುವ ಪ್ರಯತ್ನ ನಡೆದಿದೆ. ಅಲ್ಲದೇ, ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನೋಂದಣಿ ಸಂಖ್ಯೆ ನೀಡಲಾಗುತ್ತಿದೆ ಎಂದರು. ಹಿರಿಯ ಪ್ರಾಧ್ಯಾಪಕರ ತಂಡದಲ್ಲಿ ಡಾ.ಎ.ಕೃಷ್ಣಸ್ವಾಮಿ, ಡಾ.ರಂಗನಾಥ, ಚಂದ್ರಪಾಲ್‌ಸಿಂಗ್, ಡಾ.ಯು.ಕೃಷ್ಣಮೂರ್ತಿ ಇದ್ದರು. ಕಾಲೇಜಿನ ಡೀನ್ ಆರ್.ಬಿ.ದಬಾಲೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.