ADVERTISEMENT

ವಿದ್ಯುತ್ ಸಮಸ್ಯೆ: ಆತಂಕದಲ್ಲಿ ಅನ್ನದಾತ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 9:50 IST
Last Updated 14 ಅಕ್ಟೋಬರ್ 2011, 9:50 IST

ತೀರ್ಥಹಳ್ಳಿ: ವಿದ್ಯುತ್ ನಂಬಿಕೊಂಡು ಅಡಿಕೆ ಕೃಷಿ ಮಾಡುತ್ತಿದ್ದ ರೈತರು ವಿದ್ಯುತ್ ಕಡಿತದಿಂದ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಭೀಕರ ಪರಿಸ್ಥಿತಿ ನೆನೆದು ಚಿಂತೆಗೀಡಾಗಿದ್ದಾರೆ.

ಅಡಿಕೆಗೆ ಬಂಗಾರದ ಬಲೆ ಬಂದಾಗ ಬತ್ತದ ಗದ್ದೆಗಳನ್ನು ಅಡಿಕೆ ತೋಟಗಳನ್ನಾಗಿ ಪರಿವರ್ತಿಸಿದ ರೈತರು ಈಗ ಅಂತಹ ತೋಟಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಮಳೆಯಾಶ್ರಿತ ಬೆಳೆಯಾಗಿ ವರ್ಷದಲ್ಲಿ ಒಂದು ಬೆಳೆ ಬತ್ತವನ್ನು ಬೆಳೆದು ನೆಮ್ಮದಿಯಿಂದಿದ್ದ ರೈತರು ವಾಣಿಜ್ಯ ಬೆಳೆ ಅಡಿಕೆಯ ಬೆನ್ನು ಬಿದ್ದು ಅಡಿಕೆ ತೋಟಗಳನ್ನಾಗಿ ಮಾರ್ಡಿಡಿಸಿರುವುದು ಈಗ ಶಾಪವಾಗಿ ಪರಿಣಮಿಸಿದೆ.

70ರ ದಶಕದಲ್ಲಿ ಪ್ರತಿ ಕ್ವಿಂಟಲ್ ಅಡಿಕೆಗೆ  ್ಙ 8, 10 ಸಾವಿರದ ಸುತ್ತ ಸುತ್ತುತ್ತಿದ್ದ ಬೆಲೆ ನಂತರದ ದಿನಗಳಲ್ಲಿ ಗುಟ್ಕಾ ತಯಾರಿಕೆಯಿಂದಾಗಿ ಮಿತಿಮೀರಿದ ಬೆಲೆ ಕಾಣುವಂತಾಯಿತು. ಪ್ರತಿ ಕ್ವಿಂಟಲ್ ಅಡಿಕೆ ಬೆಲೆ ಈ ಕಾರಣದಿಂದಾಗಿ ್ಙ 18, 20 ಸಾವಿರ ದಾಟಿತು. ಅಲ್ಪಸ್ವಲ್ಪ ಅಡಿಕೆ ಬೆಳೆಯುತ್ತಿದ್ದವರಿಗೂ ಕೂಡಾ ಕೈತುಂಬ ಹಣ ಸಿಕ್ಕಿತು. ಇದರಿಂದಾಗಿ ಮಲೆನಾಡಿನ ಅಡಿಕೆ ಬೆಳೆಗಾರರ ಜೀವನ ಶೈಲಿಯೇ ಬದಲಾಯಿತು. ಅಡಿಕೆ ತೋಟಗಳನ್ನು ಹೊಸತಾಗಿ ನಿರ್ಮಿಸುವ ಹುಚ್ಚು ರೈತರನ್ನಲ್ಲದೇ, ವ್ಯಾಪಾರಸ್ಥರು, ನೌಕರಿಯಲ್ಲಿರುವ ವರ್ಗವನ್ನೂ ತನ್ನಡೆಗೆ ಸೆಳೆಯುವಂತೆ ಮಾಡಿತು.

ಸಾಂಪ್ರದಾಯಿಕವಾಗಿ ನೀರಿನ ಒರತೆ ಇರುವ ಜಾಗದಲ್ಲಿ, ಗುಡ್ಡದ ನಡುವಿನ ತಂಪು ಸ್ಥಳದಲ್ಲಿ ಅಡಿಕೆ ತೋಟಗಳನ್ನು ಮಾಡುತ್ತಿದ್ದ ಕಲ್ಪನೆಗೆ ಹೊಸ ಆಯಾಮ ನೀಡಿ, ನೀರೊಂದಿದ್ದರೆ ಸಾಕು ಎಂತಹ ಬರಡು ಪ್ರದೇಶದಲ್ಲಿಯೂ ಅಡಿಕೆ ತೋಟಗಳನ್ನು ನಿರ್ಮಿಸಬಹುದು ಎಂಬುದನ್ನು ಅನೇಕ ರೈತರು ಸಾಬೀತು ಮಾಡಿದರು.
ಇದರಿಂದಾಗಿ ತಮ್ಮ ಜಮೀನಿನ ಸಮೀಪ ಹತ್ತಾರು ಕಿಲೋಮೀಟರ್ ದೂರದಲ್ಲಿನ ನದಿಗಳಿಂದ ದೊಡ್ಡದೊಡ್ಡ  ಪಂಪ್‌ಸೆಟ್‌ಗಳನ್ನು ಅಳವಡಿಸಿ, ಪೈಪ್‌ಲೈನ್ ಮೂಲಕ ನೀರನ್ನು ತಂದು ಬರಡು ಗುಡ್ಡದಲ್ಲಿ ಅಡಿಕೆ ಸಸಿಗಳನ್ನು ನೆಟ್ಟು ನೀರುಣಿಸಿ ಫಸಲು ಪಡೆದರು.

ಖುಷ್ಕಿ ಜಮೀನಿನಲ್ಲಿ ಬೋರ್ ಕೊರೆದು ನೂರಾರು ಅಡಿಗಳ ಆಳದಿಂದ ನೀರನ್ನು ಚಿಮ್ಮಿಸಿ ಅಡಿಕೆ ಸಸಿಗಳನ್ನು ನೆಟ್ಟ ರೈತರು ಈಗ ವಿದ್ಯುತ್ ಕಡಿತದಿಂದ  ತಮ್ಮ ಜಮೀನುಗಳಿಗೆ ನೀರನ್ನು ಒದಗಿಸಲು ಸಾಧ್ಯವಾಗದೇ ಕೈಚೆಲ್ಲಿ ಕುಳಿತಿದ್ದಾರೆ.

ತಮ್ಮ ಕಣ್ಣೆದುರೇ ಹಂತ ಹಂತವಾಗಿ ಒಣಗಲಾರಂಭಿಸಿರುವ ತೋಟಗಳನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಚಿಂತೆಯಲ್ಲಿ ಮುಳುಗುವಂತೆ ಅವರನ್ನು ಮಾಡಿದೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸುಮಾರು 20 ಸಾವಿರ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಆದರೆ, ಅಷ್ಟೇ ಪ್ರಮಾಣದಲ್ಲಿ ರೈತರು ತಮ್ಮ ಒತ್ತುವರಿ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ.

ಅಕ್ರಮ ಸಕ್ರಮ ಯೋಜನೆಯಿಂದಾಗಿ ಸಾವಿರಾರು  ಪಂಪ್‌ಸೆಟ್‌ಗಳು ಚಾಲ್ತಿಯಲ್ಲಿವೆ. ಇಂತಹ ಪಂಪ್‌ಸೆಟ್‌ಗಳಿಗೆ ಈಗ ವಿದ್ಯುತ್ ಸರಬರಾಜು ಆಗದೇ ಇರುವುದು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮಳೆಗಾಲ ಮುಗಿಯುತ್ತಿದ್ದಂತೆಯೇ ನವೆಂಬರ್ ತಿಂಗಳಿನಿಂದ ಮತ್ತೆ ಮುಂಗಾರು ಆರಂಭವಾಗುವ ಜೂನ್ ವರೆಗೆ ತೋಟಗಳಿಗೆ ನೀರುಣಿಸಲೇಬೇಕು.

ಬೇಸಿಗೆಯಲ್ಲಿ ಹೆಚ್ಚು ನೀರನ್ನು ಬಯಸುವ ತೋಟಗಳಿಗೆ ನೀರು ಒದಗಿಸಲು ಸಾಧ್ಯವಾಗದ್ದಿದ್ದರೆ  ಅಂಥ ತೋಟಗಳನ್ನು ಉಳಿಸಿಕೊಳ್ಳುಲು ಸಾಧ್ಯವಾಗುವುದಿಲ್ಲ. ಝರಿ, ತಂಪಿನ ಪ್ರದೇಶಗಳಲ್ಲಿನ ತೋಟಗಳಿಗೆ ನೀರು ಒದಗಿಸದೇ ಇದ್ದರೂ ಅವು ಹಾಗೆಯೇ ಉಳಿಯಬಲ್ಲವು.

ದಿನದ 5 ಗಂಟೆಗಳ ಕಾಲವೂ ಈಗ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸಲು ಸಾಧ್ಯ ಆಗಲಾರದು ಎಂಬ ಸುದ್ದಿಯಿಂದ ದಿಕ್ಕೆಟ್ಟ ರೈತರು ತಮ್ಮ ಜಮೀನನ್ನು ಈ ಬೇಸಿಗೆ ಹಂಗಾಮಿನಲ್ಲಿ ಹೇಗೆ ಉಳಿಸಿಕೊಳ್ಳುವುದು ಎಂಬ ಆತಂಕದಲ್ಲಿ ಮುಳುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.