ವಿಶೇಷ ವರದಿ
ಶಿವಮೊಗ್ಗ: ಬೇಸಿಗೆ ಆರಂಭವಾಗುತ್ತಿದ್ದಂತೆ ಇಲ್ಲಿನ ಶರಾವತಿ ವಿದ್ಯುದಾಗಾರದ ಮೇಲೆ ಒತ್ತಡ ಹೆಚ್ಚಿದ್ದು, ಗರಿಷ್ಠ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ವಿದ್ಯುದಾಗಾರದಲ್ಲಿ ಪ್ರತಿದಿನ ಸರಾಸರಿ 18ರಿಂದ 20ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ. ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಸೂಚನೆ ಮೇರೆಗೆ ರಾಜ್ಯದ ಒಟ್ಟಾರೆ ವಿದ್ಯುತ್‌ನಲ್ಲಿ ವಿದ್ಯುದ್ದಾಗರದಿಂದ ಈಗ ಸರಿಸುಮಾರು 21ಮಿ.ಯೂ.ನಷ್ಟು ವಿದ್ಯುತ್ ಉತ್ಪಾದಿಸಿ, ಪೂರೈಸಲಾಗುತ್ತಿದೆ.
ಅಲ್ಲದೇ, ಜಿಲ್ಲೆಯ ಇತರ ವಿದ್ಯುದಾಗಾರಗಳಿಂದಲೂ ವಿದ್ಯುತ್ ಉತ್ಪಾದನೆ ಹೆಚ್ಚಿಸಲಾಗಿದೆ ಎಂದು ಶರಾವತಿ ವಿದ್ಯುದ್ದಾಗರದ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಲಿಂಗನಮಕ್ಕಿ ಜಲಾಶಯದಲ್ಲಿ ಶೇ. 51.87ರಷ್ಟು ನೀರು ಶೇಖರಣೆಯಾಗಿದೆ (ಕಳೆದ ವರ್ಷ ಇದೇ ದಿನದಲ್ಲಿ ಶೇ. 47.4ರಷ್ಟು ಶೇಖರಣೆಯಾಗಿತ್ತು). ಈಗಿರುವ ನೀರಿನಲ್ಲಿ ಪ್ರತಿದಿನ 20ಮಿಲಿಯನ್ ಯೂನಿಟ್‌ನಂತೆ ಇನ್ನೂ 2,300ಮಿ.ಯೂ. ವಿದ್ಯುತ್ ಉತ್ಪಾದಿಸಬಹುದಾಗಿದ್ದು, ಜೂನ್ ಅಂತ್ಯದವರೆಗೆ ವಿದ್ಯುತ್ ಲಭ್ಯವಾಗಲಿದೆ ಎಂದು ಶರಾವತಿ ವಿದ್ಯುದ್ದಾಗರದ ಮುಖ್ಯ ಕಾರ್ಯಪಾಲಕ ಎಂಜಿನಿಯರ್ ಹನುಮಂತಪ್ಪ ಹೇಳುತ್ತಾರೆ.
ಪ್ರಸ್ತುತ ತಿಂಗಳಿಗೆ 600ಮಿ.ಯೂ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಬೇಡಿಕೆ ಪ್ರಮಾಣ ಹೆಚ್ಚುತ್ತಿರುವುದರಿಂದ ಗರಿಷ್ಠ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ವಿದ್ಯುತ್ ಬೇಡಿಕೆ ರಾಜ್ಯದಲ್ಲಿ ಪ್ರತಿದಿನ 150ಮಿ.ಯೂ. ಇದೆ (ಭಾನುವಾರ 157ಮಿ.ಯೂ. ಇತ್ತು). ಆದರೆ, ಉತ್ಪಾದನೆ ಇದರರ್ಧ! ಅಂದರೆ ಕೇವಲ 77.65ಮಿ.ಯೂ. ಉಳಿದ ವಿದ್ಯುತ್‌ನ್ನು ಖರೀದಿಸಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ವಿದ್ಯುದಾಗಾರದ ಮೇಲೆ ಒತ್ತಡ ಸಹಜ ಎಂದು ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.
ಜಿಲ್ಲೆಯಲ್ಲಿ ಪ್ರಸ್ತುತ ಶರಾವತಿ ವಿದ್ಯುದಾಗಾರದಲ್ಲಿ 10 ಘಟಕಗಳಿದ್ದು, ಭಾನುವಾರ ಮಧ್ಯರಾತ್ರಿವರೆಗೆ ಲಿಂಗನಮಕ್ಕಿಯಲ್ಲಿ 1.06ಮಿ.ಯೂ., ಶರಾವತಿಯಲ್ಲಿ 19.688ಮಿ.ಯೂ., ಮಹಾತ್ಮಗಾಂಧಿ ವಿದ್ಯುದಾಗಾರದಲ್ಲಿ 1.061ಮಿ.ಯೂ., ಗೇರುಸೊಪ್ಪದಲ್ಲಿ 1.117ಮಿ.ಯೂ. ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, 5ನೇ ಯೂನಿಟ್ ಘಟಕ ದುರಸ್ತಿಗೆ ಬಂದಿದೆ ಎಂದು ಅವರು ವಿವರಿಸಿದರು.
ಕೆಲ ವರ್ಷಗಳಿಂದ ಮಳೆಗಾಲ ಆರಂಭದಲ್ಲಿ ವಿಳಂಬವಾಗುತ್ತಿದ್ದು, ಕಳೆದ ಬಾರಿ ಆಗಸ್ಟ್‌ನಲ್ಲಿ ಮಳೆಗಾಲ ಶುರುವಾಗಿತ್ತು. ಈ ಸಲವೂ ಮಳೆ ವಿಳಂಬವಾದಲ್ಲಿ ಪರಿಸ್ಥಿತಿ ಬಿಗಡಾಯಿಸಲಿದೆ ಎಂದೂ ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.