ADVERTISEMENT

ಶಾಲಾ ಮಕ್ಕಳಿಗೆ ಶೀಘ್ರ ನಂದಿನಿ ಹಾಲು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 6:15 IST
Last Updated 6 ಅಕ್ಟೋಬರ್ 2012, 6:15 IST

ಪಶು ಆಹಾರ ತಯಾರಿಕಾ ಘಟಕಕ್ಕೆ ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ಭೇಟಿ
ಶಿಕಾರಿಪುರ:
ರೈತರು ನೆಮ್ಮದಿಯಿಂದ ಜೀವನ ನಡೆಸಲು ಕೃಷಿ ಬೆಳೆ ಜತೆ, ಸಹಕಾರ ಸಂಘಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಹೈನುಗಾರಿಕೆ ನಡೆಸಲು ರೈತರಿಗೆ ಉತ್ತೇಜನ ನೀಡಿದ ಪ್ರಥಮ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದು ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ಹೇಳಿದರು.

ತಾಲ್ಲೂಕಿನ ಸಂಡ ಕೈಗಾರಿಕಾ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ನಿರ್ಮಾಣ ಹಂತದಲ್ಲಿರುವ ಕೆಎಂಎಫ್ ಪಶು ಆಹಾರ ತಯಾರಿಕಾ ಘಟಕದ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರೊಂದಿಗೆ ಅವರು ಮಾತನಾಡಿದರು.

ಯಡಿಯೂರಪ್ಪ ಅವರ ಇಚ್ಛಾ ಶಕ್ತಿಯಿಂದ ಇಂದು ಈ ಘಟಕ ಗ್ರಾಮೀಣ ಪ್ರದೇಶದಲ್ಲಿ  ಸ್ಥಾಪನೆಯಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿರುವ 65 ಲಕ್ಷ ಮಕ್ಕಳಿಗೆ ಬಿಸಿಯೂಟದ ಜತೆ ನಂದಿನಿ ಹಾಲು ವಿತರಿಸುವ ಯೋಜನೆ ಶೀಘ್ರವೇ ಜಾರಿಗೆ ಬರಲಿದ್ದು, ಕೆಎಂಎಫ್‌ನಿಂದ ರಾಜ್ಯದಲ್ಲಿ ಪ್ರತಿ ದಿನ ಕನಿಷ್ಠ 6.5 ಲಕ್ಷ ಲೀಟರ್ ಹೆಚ್ಚುವರಿಯಾಗಲಿದೆ.

ಬಿಸಿಯೂಟದ ಜತೆ ನಂದಿನಿ ಹಾಲು ವಿತರಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜತೆ ಚರ್ಚಿಸಲಾಗಿದೆ. ಕೆಎಂಎಫ್‌ನಲ್ಲಿ ಈಗಾಗಲೇ ಈ ಯೋಜನೆ ಬಗ್ಗೆ ತೀರ್ಮಾನ ಕೈಗೊಂಡಿರುವುದರಿಂದ ಈ ತಿಂಗಳ ಅಂತ್ಯದಲ್ಲಿ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಸಂಡಾ ಕೈಗಾರಿಕಾ ಪ್ರದೇಶಕ್ಕೆ ಜಮೀನು ನೀಡಿದ ರೈತರ ಮನೆಯ ಒಬ್ಬ ಸದಸ್ಯನಿಗೆ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದರು.

ದೇಶದಲ್ಲೇ ಉನ್ನತಮಟ್ಟದ ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣ ಆಗುತ್ತಿರುವ ಪಶು ಆಹಾರ ತಯಾರಿಕಾ ಘಟಕ ಇದಾಗಿದ್ದು, ರಾಜ್ಯದಲ್ಲೇ ಪ್ರಥಮ ದೊಡ್ಡ ಪ್ಲಾಂಟ್ ಇದಾಗಿದೆ ಎಂದರು.

ಮನವೊಲಿಕೆಗೆ ಯತ್ನಿಸಲಿ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಚಾರದಲ್ಲಿ ಹೈಕಮಾಂಡ್ ನಡೆದು ಕೊಂಡ ರೀತಿಯಿಂದ ಯಡಿಯೂರಪ್ಪ ತಮ್ಮ ದಿಕ್ಕನ್ನು ಬದಲಿಸಲು ಪ್ರಯತ್ನಿಸಿದ್ದು, ಅವರ ಮನಹೊಲಿಸುವ ಪ್ರಯತ್ನವನ್ನು ಬಿಜೆಪಿ ಹೈಕಮಾಂಡ್ ಮಾಡಬೇಕು ಎಂದು ಬಿ.ಜೆ. ಪುಟ್ಟಸ್ವಾಮಿ ಹೇಳಿದರು.

ಕೋಟ್ಯಂತರ ರೂಪಾಯಿ ದುರುಪಯೋಗ ಆಪಾದನೆ ಇರುವ ಪ್ರಧಾನಮಂತ್ರಿಗಳೇ ರಾಜೀನಾಮೆ ನೀಡಿಲ್ಲ. ಯಡಿಯೂರಪ್ಪ ಅವರ ಮೇಲೆ ಭ್ರಷ್ಟಚಾರ ಆರೋಪ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 3-4 ದಿನಗಳಿಗೊಮ್ಮೆ ಕೋರ್ಟ್‌ಗೆ ಹೋಗುತ್ತಿದ್ದು, ಅವರು ಜೆಡಿಎಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮೈನಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದೂರುಗಳಿದ್ದರೂ ರಾಜೀನಾಮೆ ನೀಡದೆ ಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹೈಕಮಾಂಡ್ ಅವರ ರಾಜೀನಾಮೆ ಪಡೆಯಲಿಲ್ಲ ಎಂದು ಹೇಳಿದರು.

ಯಡಿಯೂರಪ್ಪ ಜನನಾಯಕ ಆಗಿದ್ದು, ಒಳ್ಳೆ ಸ್ಥಾನ ಮಾನ ನೀಡಿದರೆ 120 ವಿಧಾನಸಾಭ ಸದಸ್ಯರು ಹಾಗೂ 20 ಸಂಸತ್ ಸದಸ್ಯರನ್ನು ಗೆಲ್ಲಿಸುವ ಶಕ್ತಿ ಇದೆ. ಯಾವ ಪಕ್ಷದಲ್ಲಿ ಇಷ್ಟು ಸಂಖ್ಯೆಯ ಜನ ಪ್ರತಿನಿಧಿಗಳನ್ನು ಗೆಲ್ಲಿಸಿಕೊಂಡು ಬರುವ ಗಂಡಸರು ಇದ್ದಾರೆ ಎಂದು ಸವಾಲೆಸದರು.

ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಅವರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯೋ ಅಧಿಕಾರ ನಮಗೆ ಇಲ್ಲ. ಕೆಎಂಎಫ್ ಕಾನೂನು ಯಾವ ರೀತಿ ಇದೆಯೋ ಆ ರೀತಿ ಮುಂದಿನ ದಿನಗಳಲ್ಲಿ ನಡೆಯುತ್ತದೆ ಎಂದರು.

ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮಾತನಾಡಿ, ಪಶು ಆಹಾರ ಕೈಗಾರಿಕಾ ಘಟಕ ಉದ್ಘಾಟನೆ ಆಗುವುದರಿಂದ ಬತ್ತಕ್ಕಿಂತ ಹೆಚ್ಚಿನ ಬೆಲೆ ಮೆಕ್ಕೆಜೋಳ ಬೆಳೆದ ಈ ಭಾಗದ ನಮ್ಮ ರೈತರಿಗೆ ಸಿಗುತ್ತದೆ ಎಂದರು.

`ಕಾಡಾ~ ಅಧ್ಯಕ್ಷ ಕೆ. ಶೇಖರಪ್ಪ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಪ್ರೇಮ್‌ನಾಥ್, ಶಿಮೂಲ್ ಅಧ್ಯಕ್ಷ ಕೆ.ಎಲ್. ಜಗದೀಶ್ವರ್, ಮ್ಯಾಮ್‌ಕೋಸ್ ಅಧ್ಯಕ್ಷ ನರಸಿಂಗನಾಯಕ್, ಜಿಲ್ಲಾಜಾಗೃತಿ ಸಮಿತಿ ಸದಸ್ಯ ಕೆ.ಎಸ್. ಗುರುಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್. ಮೋಹನ್, ಎಪಿಎಂಸಿ ಅಧ್ಯಕ್ಷ ಸುಕೇಂದ್ರಪ್ಪ, ಚಾರಗಲ್ಲಿ ಪರಶುರಾಮ್, ಸಂದಿಮನಿ ಯೋಗೇಶ್, ಬೆಣ್ಣೆ ದೇವೇಂದ್ರಪ್ಪ, ಕಬಾಡಿ ರಾಜಪ್ಪ, ರಹಮತ್‌ವುಲ್ಲಾ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.