ADVERTISEMENT

ಶಾಸ್ತ್ರೀಯ ಸಂಗೀತ ಪರಂಪರೆಯ ಅಂಗ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 11:04 IST
Last Updated 20 ಡಿಸೆಂಬರ್ 2012, 11:04 IST

ಸಾಗರ: ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಎಂದು ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ ಹೇಳಿದರು.

ನಗರದ ಶ್ರೀನಗರ ಬಡಾವಣೆಯ ನೃತ್ಯ ಭಾಸ್ಕರ ಸಭಾಂಗಣದಲ್ಲಿ ನಾಟ್ಯ ತರಂಗ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿರುವ ಸಂಸ್ಕೃತಿ ಸಪ್ತಾಹ - 2012 ಕಾರ್ಯಕ್ರಮ ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕತೆ ಸೆಳೆತದಿಂದ ಪಾಶ್ಚಿಮಾತ್ಯ ಕಲೆ ಶ್ರೇಷ್ಠ ಎಂಬ ಭಾವನೆ ಯುವಜನರಲ್ಲಿ ನೆಲೆಯೂರಿದೆ. ಆದರೆ, ನಮ್ಮ ನೆಲದ ಸಂಸ್ಕೃತಿಗೆ ಸಂಬಂಧವೇ ಇಲ್ಲದ ಕಲೆಯ ಜತೆ, ನಂಟು ಬೆಳೆಸುವುದರಿಂದ ಸಂಸ್ಕಾರ ದಕ್ಕುವುದಿಲ್ಲ ಎಂಬ ವಿಷಯವನ್ನು ಯುವಜನರಿಗೆ ಮನವರಿಕೆ ಮಾಡಬೇಕಿದೆ ಎಂದರು.
ಈ ಹಿಂದೆ ಕಲೆಗೆ ಸಂಬಂಧಪಟ್ಟ ಚಟುವಟಿಕೆಗಳು ರಾಜಾಶ್ರಯದಲ್ಲಿ ನಡೆಯುತ್ತಿತ್ತು.

ಈಗ ಸರ್ಕಾರದ ನೆರವಿಲ್ಲದೆ ಹಲವು ಸಂಘಟನೆಗಳು ಕಲಾ ಸೇವೆಯಲ್ಲಿ ತೊಡಗಿವೆ. ಸಾಂಸ್ಕೃತಿಕ ತಂಡಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರದ ನಿಯಮಾವಳಿ ಅಡ್ಡ ಬರಬಾರದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಾಟ್ಯ ತರಂಗ ಟ್ರಸ್ಟ್‌ನ ಅಧ್ಯಕ್ಷ ಅಂದಗಾರು ಜನಾರ್ದನ್ ಮಾತನಾಡಿ, ಭರತನಾಟ್ಯದಂತಹ ಶಾಸ್ತ್ರೀಯ ನೃತ್ಯ ಪ್ರಕಾರದಲ್ಲಿ ಪರಿಣಿತಿ ಸಾಧಿಸಲು ಗುರುವಿನ ಮಾರ್ಗದರ್ಶನದ ಜತೆಗೆ, ಅಪಾರ ಪರಿಶ್ರಮ, ಶ್ರದ್ಧೆ ಅಗತ್ಯವಿದೆ. ಇದನ್ನು ಕಲಿಸುವ ಕೆಲಸವನ್ನು ನಾಟ್ಯ ತರಂಗ ಸಂಸ್ಥೆ ಮಾಡುತ್ತಿದೆ ಎಂದರು.

ಉದ್ಯಮಿ ಸಿ. ಗೋಪಾಲಕೃಷ್ಣ ರಾವ್, ವಿದ್ವಾನ್ ಜನಾರ್ದನ ಜಿ.ಬಿ. ಹಾಜರಿದ್ದರು. ಸಮನ್ವಿತ ಹಾಗೂ ನಂದಿನಿ ಪ್ರಾರ್ಥಿಸಿದರು. ವಸುಧಾ ಸ್ವಾಗತಿಸಿದರು. ಟಿ.ಎಸ್. ರಾಘವೇಂದ್ರ ಪ್ರಸ್ತಾವಿಕ ಮಾತನಾಡಿದರು. ರಮ್ಯಾ ಪಿ. ಕುಮಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT