ADVERTISEMENT

ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ: ಭಾಗಶಃ ಬದಲಾವಣೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 5:45 IST
Last Updated 17 ಏಪ್ರಿಲ್ 2012, 5:45 IST

ಶಿವಮೊಗ್ಗ: ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ ಭಾಗಶಃ ಬದಲಾವಣೆಗೆ ಆಗ್ರಹಿಸಿ ಸೋಮವಾರ ಜನಶಕ್ತಿ- ಜನಪರ ಹೋರಾಟ ವೇದಿಕೆ ನೇತೃತ್ವದಲ್ಲಿ ರೈತರು ನಗರದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿ, ಜಿಲ್ಲಾಧಿಕಾರಿ ಮೂಲಕ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು.

2010-11ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಶಿವಮೊಗ್ಗ - ಹರಿಹರ ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಈ ಯೋಜನೆಯಿಂದ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ. ಈ ಯೋಜನೆಗೆ ತಮ್ಮ ವಿರೋಧವಿಲ್ಲ. ಆದರೆ, ಉದ್ದೇಶಿತ ರೈಲ್ವೆ ಮಾರ್ಗ ಭಾಗಶಃ ಬದಲಾಯಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಶಿವಮೊಗ್ಗ-ಹೊಳಲೂರು - ಹೊನ್ನಾಳಿ ಮೂಲಕ ಹರಿಹರಕ್ಕೆ ರೈಲ್ವೆ ಮಾರ್ಗ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಆದರೆ, ಈ ಭಾಗದಲ್ಲಿ ನೀರಾವರಿ ಕೃಷಿ ಭೂಮಿಯಿದೆ. ಕಬ್ಬು, ಅಡಿಕೆ, ತೆಂಗು ಸೇರಿದಂತೆ ಹತ್ತು ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮಾರ್ಗ ನಿರ್ಮಾಣದಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗಲಿದೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದರು.

ಈಗಾಗಲೇ ಈ ಭಾಗದಲ್ಲಿ ತುಂಗಾ ನಾಲೆ ಹಾಗೂ ಮೇಲ್ದಂಡೆ ಯೋಜನೆಗೆ ಶಿವಮೊಗ್ಗ-ಹೊನ್ನಾಳಿ ರಸ್ತೆ ವಿಸ್ತರಣೆಗೆ, ಹೈಟೆನ್ಷನ್ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಅಪಾರ ಪ್ರಮಾಣದ ಫಲವತ್ತಾದ ಕೃಷಿ ಭೂಮಿಯನ್ನು ರೈತರು ಕಳೆದುಕೊಂಡಿದ್ದಾರೆ. ಉದ್ದೇಶಿತ ರೈಲ್ವೆ ಮಾರ್ಗದಿಂದ ರೈತರು ಮತ್ತಷ್ಟು ಕೃಷಿ ಭೂಮಿ, ಮನೆ ಕಳೆದು ಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಈ ದೃಷ್ಟಿಯಿಂದ ಶಿವಮೊಗ್ಗದಿಂದ ಕೋಟೆಗಂಗೂರು, ಸೋಮಿನಕೊಪ್ಪ, ಹುಣಸೋಡು, ಕೊಮ್ಮನಾಳು, ಸುತ್ತುಕೋಟೆ ಹಾಗೂ ಹೊನ್ನಾಳ್ಳಿಯ ಗಂಗನಕೋಟೆ, ದಿಡಗೂರು ಮೂಲಕ ರೈಲ್ವೆಮಾರ್ಗ ನಿರ್ಮಿಸಬೇಕು. ಈ ಮಾರ್ಗದ ಸರ್ವೇ ಕೂಡ ನಡೆದಿದೆ. ಈ ಮಾರ್ಗದಿಂದ ಯಾವುದೇ ನಷ್ಟ ಆಗುವುದಿಲ್ಲ ಎಂದು ಪ್ರತಿಭಟನಾಕಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ರೈಲ್ವೆ ಇಲಾಖೆ ಅಧಿಕಾರಿಗಳು ಈ ಸಂಬಂಧ ಕೂಡಲೇ ಸಭೆ ಕರೆದು, ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಪ್ರಸ್ತುತ ನಿರ್ಧರಿಸಿರುವ ಪ್ರದೇಶದಲ್ಲಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಸಿ. ಬಸವರಾಜಪ್ಪ, ಬಿ.ಜಿ. ರಾಜಪ್ಪ, ಎಚ್.ಎಂ. ಪ್ರವೀಣ್, ಹಾಲೇಶಪ್ಪ ದೊಡ್ಡೇರಿ, ಪರಮೇಶ್ವರಪ್ಪ ಕುರುವ, ಈಶ್ವರಪ್ಪಗೌಡ್ರು ಮಳಲಿ, ಎಸ್. ಮುರುಡಪ್ಪ ಮಾಸ್ಟರ್ ಮತ್ತಿತರರು ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.