ADVERTISEMENT

ಶೀಘ್ರವೇ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 7:05 IST
Last Updated 19 ಸೆಪ್ಟೆಂಬರ್ 2013, 7:05 IST

ಸೊರಬ: ತಾಲ್ಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆ, ಕೆರೆ–ಕಟ್ಟೆಗೆ ಹಾನಿಯುಂಟಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಮಧು ಬಂಗಾರಪ್ಪ ಹೇಳಿದರು.

ಬುಧವಾರ ಸೊರಬ ತಾಲ್ಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಜೀವ್‌ಗಾಂಧಿ ಮಾಹಿತಿ ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಜುಲೈ– ಆಗಸ್ಟ್‌ನಲ್ಲಿ ಒಂದೇ ದಿನ 9 ಸೆಂ.ಮೀ. ಮಳೆಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿಯೇ ಸೊರಬದಲ್ಲಿ ಭಾರಿ ಪ್ರಮಾಣದ ರಸ್ತೆ, ಮನೆ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ವರದಿಯಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ರಾಜ್ಯ ಸರ್ಕಾರ ನೆರೆ ಹಾವಳಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಪರಿಹಾರದ ಹಣ ಬಿಡುಗಡೆ ಮಾಡಿದೆ. ಆದರೆ, ಬಿಡುಗಡೆ ಯಾದ ಹಣ ಸಾಕಾಗುವುದಿಲ್ಲ. ಆದ್ದರಿಂದ ಮತ್ತೊಮ್ಮೆ ತಾಲ್ಲೂಕಿನ ಕ್ರಿಯಾವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸರ್ಕಾರ ತನ್ನ ಕಾರ್ಯಸೂಚಿಯಲ್ಲಿ ತಿಳಿಸಿದ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿದ್ದು, ಇದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಸಾರ್ವಜನಿಕರಿಗೆ ಉತ್ತರ ಕೊಡಲು ತೊಂದರೆಯಾಗುತ್ತದೆ ಎಂದರು. ಬೆಳೆ ವಿಮೆಗೆ ಸಂಬಂಧಪಟ್ಟಂತೆ ಸೆ.30ರ ಒಳಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ರೈತರು ಪ್ರಯೋಜನ ಪಡೆಯುವಂತೆ ಸಲಹೆ ನೀಡಿದರು.

ಕುಪ್ಪಗಡ್ಡೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಮ್ಮ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ನೀಲಮ್ಮ ಸುರೇಶ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಕೋಮಲಾ ನಿರಂಜನ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಲಕ್ಷ್ಮಿ ಜಗದೀಶ, ಗ್ರಾಮ ಪಂಚಾಯ್ತಿ ಸದಸ್ಯರಾದ ಕೃಷ್ಣಪ್ಪ, ಆನಂದಪ್ಪ, ವೀರಭದ್ರಪ್ಪ, ರಾಧಾಕೃಷ್ಣ, ಬಸವರಾಜ್, ಎಂ.ಎಂ.ರವಿ, ವಿಮಲಮ್ಮ, ಲಕ್ಷ್ಮಮ್ಮ , ಸರೋಜಮ್ಮ, ಸಣ್ಣಮ್ಮ, ಭೂದೇವಮ್ಮ, ಇಒ ಮಂಜುಳಾ ದೇವಿ, ಜಿಲ್ಲಾ ಪಂಚಾಯಿ್ತ ಎಂಜನಿಯರ್ ತಿಮ್ಮಣ್ಣ, ಪಿಡಿಒ ಶ್ರೀರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.