ADVERTISEMENT

ಶ್ರೀದ್ವಿಮುಖ ಶಕ್ತಿ ಚಾಮುಂಡೇಶ್ವರಿ ಪುನರ್ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 6:35 IST
Last Updated 19 ಫೆಬ್ರುವರಿ 2011, 6:35 IST

ಕಾರ್ಗಲ್: ಮಲೆನಾಡು ತನ್ನ ಗರ್ಭದಲ್ಲಿ ಸಾಕಷ್ಟು ನಯನ ಮನೋಹರ ರಮ್ಯತಾಣ ಹಾಗೂ ವಿಸ್ಮಯಕಾರಿ ವಿಚಾರ ಅಡಗಿಸಿಕೊಂಡಿದೆ. ಆದಿಶಕ್ತಿಯ ಆರಾಧಕರ ನಾಡೂ ಆಗಿದೆ. ವಿಶ್ವ ವಿಖ್ಯಾತ ಜಲಪಾತ ಹೊಂದಿರುವ ಜೋಗ ಅದ್ಭುತವಾದ ದ್ವಿಮುಖ ಚಾಮುಂಡೇಶ್ವರಿ ಶಕ್ತಿ ದೇವತೆಯ ಆವಾಸ ಸ್ಥಾನವೂ ಹೌದು. ಫೆ. 19ರಿಂದ 21ರವರೆಗೆ ಇಲ್ಲಿನ ಶಕ್ತಿ ದೇವತೆಯಾದ ಶ್ರೀ ದ್ವಿಮುಖ ಚಾಮುಂಡೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ ಹಾಗೂ ಮಹಾ ಚಂಡಿಕಾಯಾಗ ಹಮ್ಮಿಕೊಳ್ಳಲಾಗಿದೆ.

1967ರಲ್ಲಿ ನಿರ್ಮಿತವಾದ ಈ ದೇವಾಲಯ ತನ್ನದೇ ಆದ ವಿಶಿಷ್ಟ ಹಿನ್ನೆಲೆ ಹೊಂದಿದೆ. ಇಡೀ ದೇಶದಲ್ಲಿ ಇಂಥ ವಿಗ್ರಹವಿರುವುದು ಜೋಗದಲ್ಲಿ ಮಾತ್ರ ಎಂಬುದು ಇಲ್ಲಿನ ವೈಶಿಷ್ಟ್ಯ ಸಾರುತ್ತದೆ.ಶನಿವಾರ ಬೆಳಿಗ್ಗೆ 10.30ರಿಂದ ಮಹಾಗಣಪತಿ ಹೋಮ, ದೇವನಾಂದಿ ವಿಶೇಷ ಪೂಜೆ, ಅಲಂಕಾರ. ಸಂಜೆ ಅಂಕುರಾರ್ಪಣ ಆದಿವಾಸಾದಿಗಳು, ಹೋಮ, ವಾಸ್ತುಹೋಮ ಹಾಗೂ ಭಜನಾ ಕಾರ್ಯಕ್ರಮ ಇರುತ್ತದೆ. 20ರಂದು ಬೆಳಿಗ್ಗೆ 7ಕ್ಕೆ ‘ಆದಿಶಕ್ತಿ ಶ್ರೀದ್ವಿಮುಖ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠೆ, ಅಷ್ಟಬಂಧ’ ಹೋಮ  ನಡೆಯುತ್ತದೆ.
 
ಸಂಜೆ ಶ್ರೀದುರ್ಗಾ ಪಾರಾಯಣ, ಅಷ್ಟಾವಧಾನ ಸೇವೆ ಹಾಗೂ ಭಜನಾ ಕಾರ್ಯಕ್ರಮ ಇರುತ್ತದೆ. 21ರಂದು ಬೆಳಿಗ್ಗೆ  ಮಹಾಚಂಡಿಕಾ ಯಾಗ ಪೂರ್ಣಾಹುತಿ ವಿಶೇಷ ಅಲಂಕಾರ ಪೂಜೆ ಹಾಗೂ ಸಂಜೆ ಭಜನಾ ಕಾರ್ಯಕ್ರಮ ಇರುತ್ತದೆ. 3 ದಿನಗಳ ಕಾಲವೂ ಅನ್ನಸಂತರ್ಪಣೆ ನಡೆಯುತ್ತದೆ. ದೇವಿ ಆಗಮನದ ಹಿನ್ನೆಲೆ: ಸರ್ ಎಂ. ವಿಶ್ವೇಶ್ವರಯ್ಯ ಅವರು ಜಗದ್ವಿಖ್ಯಾತ ಜೋಗ ಜಲಪಾತ ವೀಕ್ಷಿಸಲು 1916ರಲ್ಲಿ ಆಗಮಿಸಿದ್ದರು. ಬಹು ದೂರದರ್ಶಿತ್ವ, ಮುಂದಾಲೋಚನೆಯುಳ್ಳ ಸರ್ ಎಂವಿ ನೀರಿನ ಶಕ್ತಿಯ ಪರಿಕಲ್ಪನೆಗೆ ಮಾರುಹೋಗಿದ್ದರು. ಶರಾವತಿ ನೀರಿನಲ್ಲಿ ಅಡಗಿದ್ದ ಶಕ್ತಿಯನ್ನು ನಾಡಿನ ಮನೆಮನೆಗಳಲ್ಲಿ, ಮನಮನಗಳಲ್ಲಿ ಬೆಳಗಿಸಬೇಕು ಎಂಬ ಮನದಿಂಗಿತವನ್ನು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣದೇವರಾಯರ ಬಳಿ ವ್ಯಕ್ತಪಡಿಸಿ, ಶರಾವತಿಯ ಶಕ್ತಿಯನ್ನು ವಿವರಿಸಿದರು.

ಸದಾ ನಾಡಿನ ಅಭ್ಯುದಯ, ಪ್ರಜೆಗಳ ಅಭಿವೃದ್ಧಿಯ ಚಿಂತನೆಯಲ್ಲಿರುತ್ತಿದ್ದ ಮಹಾರಾಜರು ಈ ಯೋಜನೆಗೆ ತಡಮಾಡದೇ ಒಪ್ಪಿಗೆಯನ್ನು ನೀಡುವುದಲ್ಲದೇ ಸಮಗ್ರ ಮಾಹಿತಿ ಕಲೆಹಾಕಲು ಒಂದು ಸಮಿತಿಯನ್ನು ಕೂಡಾ ರಚಿಸಿದರು. 1918-1922ರ ವರೆಗೆ ಮಾಹಿತಿ ಕಲೆ ಹಾಕುವ ಕೆಲಸ ನಡೆದರೂ ಕೆಲಸ ಸ್ಥಗಿತವಾಗುತ್ತದೆ. ಹಲವಾರು ಬಾರಿ ತೊಡಕುಂಟಾಗಿ ಕೆಲಸ ನಿಂತಿತು. ಛಲಬಿಡದ ತ್ರಿವಿಕ್ರಮನಂತೆ 1939ರಲ್ಲಿ ವಿದ್ಯುತ್ ಉತ್ಪಾದನಾ ಕಾರ್ಯಕ್ಕೆ ಅಸ್ತಿಬಾರ ಶಿಲೆಯನ್ನು ನೆಡುವ ಸಲುವಾಗಿ ಜೋಗಕ್ಕೆ ಬರುವ ಮುನ್ನಾದಿನ ಮಹಾರಾಜರು ಅರಮನೆಯ ಹಾಗೂ ನಾಡದೇವತೆಯಾದ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ನಂತರ, ಪ್ರಯಾಣ ಬೆಳೆಸಿದ ಮಹಾರಾಜರು 5.2.39ರಂದು ಜೋಗದಲ್ಲಿ ತಂಗಿದರು.

ಬೆಳಿಗ್ಗೆ ನಾಡದೇವತೆ ಶ್ರೀಚಾಮುಂಡೇಶ್ವರಿ ಮಹಾರಾಜರ ಕನಸಿನಲ್ಲಿ ಕಾಣಿಸಿಕೊಂಡು, ದ್ವಿಮುಖವಿರುವ ತನ್ನ ವಿಗ್ರಹ ಕೆತ್ತಿಸಿ ಇಲ್ಲಿ ಪ್ರತಿಷ್ಠಾಪಿಸು. ವಿದ್ಯುತ್ ಕೆಲಸಗಳು ಸುಗಮವಾಗಿ ನಡೆಯುತ್ತವೆ ಎಂದು ನುಡಿದು ಅದೃಶ್ಯಳಾಗುತ್ತಾಳೆ. ತಡಮಾಡದೇ ಕಾರ್ಯ ಪ್ರವೃತ್ತರಾದರು. ಮೈಸೂರು ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಾಗಲಿಂಗ ಸ್ವಾಮಿಯವರ ಶಿಷ್ಯರಾದ ಶ್ರೀಸಿದ್ಧಯೋಗಿ ಶಿವಲಿಂಗ ಸ್ವಾಮಿಯವರಿಗೆ ಶ್ರೀಶಕ್ತಿ ದ್ವಿಮುಖ ಚಾಮುಂಡೇಶ್ವರಿ ವಿಗ್ರಹವನ್ನು ಕೆತ್ತುವಂತೆ ಕರೆ ನೀಡಿದರು. ನಂತರ, ಜೋಗದಕೆಲಸಗಳು ನಿರ್ವಿಘ್ನವಾಗಿ ನಿರಾತಂಕವಾಗಿ ಸಾಗಿದವು.

ವಿಗ್ರಹದ ವೈಶಿಷ್ಟ್ಯ: ಆದಿಶಕ್ತಿ ಶ್ರೀಚಾಮುಂಡೇಶ್ವರಿಯ ವಿಗ್ರಹವು ಅತ್ಯಂತ ವಿಶಿಷ್ಟ ಹಾಗೂ ವಿರಳವಾದುದಾಗಿದೆ. ಇಡೀ ದೇಶದಲ್ಲೇ ಇಂಥ ವಿಗ್ರಹ ಇನ್ನೊಂದಿಲ್ಲ ಎಂಬುದು ನಂಬಲರ್ಹ ಮೂಲಗಳು ತಿಳಿಸುತ್ತವೆ. ಏಕಶಿಲೆಯಲ್ಲಿ ಕೆತ್ತಲ್ಪಟ್ಟ ಅವಳಿ ವಿಗ್ರಹ. ಸಿಂಹವಾಹಿನಿಯಾಗಿ ಮಹಿಷಾಸುರನ ಸಂಹಾರ ಮಾಡುತ್ತಿರುವ ಮುಂಭಾಗದ ವಿಗ್ರಹದಲ್ಲಿ ಆತನ ತಲೆಯ ಮೇಲೆ ತನ್ನ ಬಲಗಾಲಿನಿಂದ ತುಳಿಯುತ್ತಿದ್ದರೆ, ಹಿಂಭಾಗದ ವಿಗ್ರಹದಲ್ಲಿ ಎಡಗಾಲಿನಿಂದ ತುಳಿಯುತ್ತಿದ್ದಾಳೆ. ದೇವಿಯ ಮುಖಮುದ್ರೆ ಅತ್ಯಂತ ಸೌಮ್ಯವಾಗಿದೆ. ಎರಡೂ ಭಾಗದಲ್ಲಿ ಅಷ್ಟ ಹಸ್ತ ಹೊಂದಿರುವ ದೇವಿ ಒಟ್ಟು 16 ಹಸ್ತಗಳನ್ನು ಹೊಂದಿದ್ದಾಳೆ. ಅಭಯ ಹಸ್ತ, ತ್ರಿಶೂಲ, ಢಕ್ಕೆ, ಶಂಖ, ಚಕ್ರ, ಖಡ್ಗ, ಗುರಾಣಿ ಎರಡೂ ಭಾಗದ ಹಸ್ತಗಳಲ್ಲಿದ್ದು, ಸುಂದರ ಪ್ರಭಾವಳಿ ಹೊಂದಿದೆ. ಈ ವಿಗ್ರಹದ ಪೀಠವೂ ಸೇರಿ 5.6 ಅಡಿ ಎತ್ತರವಿದೆ. ವಿಗ್ರಹದ ಪೀಠದಲ್ಲಿ ಕಂಡುಬರುವ ಶಾಸನದ ಪ್ರಕಾರ 1944ರಲ್ಲಿ ವಿಗ್ರಹದ ಕೆತ್ತನೆ ಕೆಲಸ ಪೂರ್ಣಗೊಳ್ಳುತ್ತದೆ.

ದೇವಸ್ಥಾನದ ಸ್ಥಾಪನೆ:
1967ರಲ್ಲಿ ಅಂದಿನ ಮೈಸೂರು ವಿದ್ಯುತ್ ಮಂಡಳಿಯ ಅಧ್ಯಕ್ಷರಾದ ಜಿ. ಸಾಂಬಶಿವಯ್ಯ ಅವರು ಕಟ್ಟಡ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸಿದರು.ಪಂಚರಾತ್ರ ಅಗಮ ಪ್ರಕಾರ ಶ್ರೀನಿವಾಸ ಮೂರ್ತಿ, ಸಾವಿತ್ರಮ್ಮ ದಂಪತಿ ನೇತೃತ್ವದಲ್ಲಿ 2.7.67ರಂದು ಋತ್ವಿಜರು ದೇವಿಯ ವಿಧ್ಯುಕ್ತ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಲಾಯಿತು. 1985ರಲ್ಲಿ ಶೃಂಗೇರಿ ಜಗದ್ಗುರು ಶ್ರೀಭಾರತಿ ತೀರ್ಥರು ಆಗಮಿಸಿ, ದೇವಾಲಯದಲ್ಲಿ 2 ದಿನಗಳ ಕಾಲ ಶ್ರೀಚಂದ್ರಮೌಳೇಶ್ವರ ಪೂಜೆ ಸಲ್ಲಿಸಿ, ಅಪಾರ ಭಕ್ತರಿಗೆ ಆಶಿರ್ವಚನ ನೀಡಿದರು. ಅಂದಿನಿಂದ ನಿರಂತರ ನಿತ್ಯ ಪೂಜೆ, ನವರಾತ್ರಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಬಂದಿದೆ.
ಪಾವನಾ ಶ್ರೀಧರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.