ಹೊಸನಗರ: ಅನಾದಿ ಕಾಲದಿಂದ ಅರಣ್ಯ ಭೂಮಿಯಲ್ಲಿ ಕೃಷಿ ಮಾಡಿದ ಅನ್ನದಾತನ ಸಂಕಟದ ಪರಿಹಾರಕ್ಕಾಗಿ ಹೋರಾಟ ಮಾಡುವುದಾಗಿ ರಾಜ್ಯ ಯುವ ಜೆಡಿಎಸ್ ಅಧ್ಯಕ್ಷಮಧು ಬಂಗಾರಪ್ಪ ಘೋಷಿಸಿದರು.
ಮಂಗಳವಾರ ಪಟ್ಟಣದಲ್ಲಿ ಜೆಡಿಎಸ್ ತಾಲ್ಲೂಕು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಅನ್ನದಾತನ ಸಮಸ್ಯೆ ಪರಿಹಾರಕ್ಕಾಗಿ ಹೋರಾಟ ನಡೆಸಿ ರಾಷ್ಟ್ರೀಯ ನಾಯಕರಾಗಿದ್ದ ತಮ್ಮ ತಂದೆ ಬಂಗಾರಪ್ಪ ಅವರ ಹೋರಾಟ ಅವರ ಮಗನಾಗಿ ಮುಂದುವರಿಸಬೇಕಾದ ಸಂದರ್ಭ ಬಂದಿದೆ ಎಂದರು.
ಈ ಸಮಸ್ಯೆ ಪರಿಹಾರಕ್ಕಾಗಿಸೆ. 4ರಿಂದ ಸೊರಬದಿಂದ ಪಾದಯಾತ್ರೆ ಆರಂಭ ಮಾಡಲಿದ್ದು, ಸೆ. 9ರಂದು ಶಿವಮೊಗ್ಗದಲ್ಲಿ ದೊಡ್ಡ ಪ್ರತಿಭಟನಾ ಸಭೆ ಆಯೋಜಿಸಿಲಾಗಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.
ರೈತರ ಹೆಸರಿನಲ್ಲಿ ಮತ ಪಡೆದ ಬಿಜೆಪಿ ಸರ್ಕಾರ ಹಾಗೂಅಲ್ಪಸಂಖ್ಯಾತರ ಹೆಸರಿನಲ್ಲಿ ಓಟು ಪಡೆದ ಕಾಂಗ್ರೆಸ್ ಸರ್ಕಾರ ಅವರಿಗೆ ಏನನ್ನು ನೀಡಿಲ್ಲ. ಕೇವಲ ಮತ ಬ್ಯಾಂಕ್‌ನ್ನಾಗಿ ಮಾಡಿಕೊಂಡಿದೆ ಎಂದು ದೂರಿದರು.
ಮುಂದಿನ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಲೇ ಸಿದ್ಧರಾಗುವಂತೆ ಮನವಿ ಮಾಡಿದರು.
ತಾಲ್ಲೂಕು ಅಧ್ಯಕ್ಷ ಬಿ.ಜಿ. ನಾಗರಾಜ್ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಜಿಲ್ಲಾಧ್ಯಕ್ಷ ಶ್ರೀಕಾಂತ್, ಉಪಾಧ್ಯಕ್ಷ ಎಂ.ವಿ. ಜಯರಾಮ್, ಮುಖಂಡರಾದ ಮದನ್, ಚಾಬು ಸಾಬ್, ಸುಮತಿ ಪೂಜಾರಿ, ಅಮೀರ್ ಹಮ್ಜ ಹಾಜರಿದ್ದರು.
ಶುಭಕರ ಪೂಜಾರಿ ಸ್ವಾಗತಿಸಿದರು. ಉಮೇಶ್ ಕಾರ್ಯಕ್ರಮ ನಿರೂಪಿಸಿದರು.
ಪಾದಯಾತ್ರೆ
ಸಾಗರ ವರದಿ: ಕೇಂದ್ರ ಸರ್ಕಾರವು ಅರಣ್ಯಭೂಮಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿ ಬರುವ ಸೆ. 4ರಿಂದ 9ರವರೆಗೆ ಜಾತ್ಯಾತೀತ ಜನತಾದಳದ ವತಿಯಿಂದ ಸೊರಬ ತಾಲ್ಲೂಕಿನ ಕೆರೆಹಳ್ಳಿ ಗ್ರಾಮದಿಂದ ಶಿವಮೊಗ್ಗದವರೆಗ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ ಅರಣ್ಯಭೂಮಿ ಹಕ್ಕು ಕಾಯ್ದೆಯಲ್ಲಿ ರೈತರಿಗೆ ಹಕ್ಕುಪತ್ರ ನೀಡುವ ಸಂಬಂಧ ಅನೇಕ ತೊಡಕುಗಳಿವೆ. ಕಾಯ್ದೆಯಲ್ಲಿನ ನಿರ್ಬಂಧಗಳನ್ನು ಸಡಿಲಿಸದೆ ಅರಣ್ಯಭೂಮಿ ಸಾಗುವಳಿದಾರರಿಗೆ ಇದರ ಪ್ರಯೋಜನ ದೊರಕುವುದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡುವುದು ಅತ್ಯಗತ್ಯವಾಗಿದೆ ಎಂದರು.
ಸೊರಬ ತಾಲ್ಲೂಕಿನ ತಾಳಗುಪ್ಪ ಹಾಗೂ ಕೆರೆಹಳ್ಳಿ ಹೋಬಳಿಯಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಬಗರ್‌ಹುಕುಂ ರೈತರಲ್ಲಿ ಭೀತಿ ಹುಟ್ಟಿಸಿದೆ. ಸರ್ಕಾರ ಬಗರ್‌ಹುಕುಂ ರೈತರನ್ನು ಭಯೋತ್ಪಾದಕರಂತೆ ನೋಡುವ ಪ್ರವೃತ್ತಿ ಸರಿಯಲ್ಲ ಎಂದು ಹೇಳಿದರು.
ಕೆರೆಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ನಾನು ಬೆಂಗಳೂರಿನಲ್ಲಿ ಇದ್ದೆ. ಆದಾಗ್ಯೂ ಇಲಾಖೆ ಕಾರ್ಯಾಚರಣೆಗೆ ಅಡ್ಡಿ ಮಾಡಿರುವುದಾಗಿ ಹೇಳಿ ನನ್ನ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಇದರ ಹಿಂದೆ ರಾಜಕೀಯ ಹುನ್ನಾರ ಅಡಗಿದೆ ಎಂದರು.
ಕೆರೆಹಳ್ಳಿ ಹಾಗೂ ತಾಳಗುಪ್ಪ ಗ್ರಾಮದಲ್ಲಿ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಿಂದ ತೀವ್ರ ತೊಂದರೆಗೆ ಒಳಗಾಗಿರುವ ರೈತರಿಗೆ ಆರು ತಿಂಗಳಿಗೆ ಸಾಕಾಗುವಷ್ಟು ಬತ್ತವನ್ನು ಸೆ. 4ರಂದು ವಿತರಿಸುವ ಮೂಲಕ ಪಾದಯಾತ್ರೆ ಆರಂಭಗೊಳ್ಳಲಿದೆ. ಸೊರಬ, ಶಿರಾಳಕೊಪ್ಪ, ಶಿಕಾರಿಪುರ, ಕುಂಸಿ ಮಾರ್ಗವಾಗಿ ಶಿವಮೊಗ್ಗ ತಲುಪಲಿದೆ ಎಂದು ತಿಳಿಸಿದರು.
ಸೆ. 7ರಂದು ರಾತ್ರಿ ಕುಂಸಿ ಗ್ರಾಮದಲ್ಲಿ ಪಾದಯಾತ್ರೆ ತಂಗುವ ಸಮಯದಲ್ಲಿ ರೈತರೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಸೆ. 9ರಂದು ಶಿವಮೊಗ್ಗದಲ್ಲಿ ಪಾದಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು ಕುಮಾರಸ್ವಾಮಿ ಅವರೊಂದಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಜೆಡಿಎಸ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಅರುಣ್ ಪ್ರಸಾದ್, ಬಸವರಾಜ್ ಗೌಡ ಬೈದೂರು, ಕನ್ನಪ್ಪ ಬೆಳಲಮಕ್ಕಿ, ಉಮೇಶ್ ನಾಯ್ಕ, ಲೋಕೇಶ್ ಗಾಳಿಪುರ, ಲಿಂಗರಾಜ್, ಮಹಮದ್ ಜಿಕ್ರಿಯಾ, ಹಿರೇಮನೆ ಮಂಜುನಾಥ್, ಹುಚ್ಚಪ್ಪ ಪಡವಗೋಡು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.