ADVERTISEMENT

ಸಂಘಗಳಿಗೆ 45 ಕೆರೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 5:39 IST
Last Updated 7 ಡಿಸೆಂಬರ್ 2012, 5:39 IST

ಸೊರಬ: ತಾಲ್ಲೂಕಿನ 120 ಕೆರೆಗಳನ್ನು 96ಕೆರೆ ಬಳಕೆದಾರರ ಸಂಘಗಳಿಗೆ ಹಸ್ತಾಂತರಿಸುವ ಕಾರ್ಯ ನಡೆಯಬೇಕಿದ್ದು, ಈಗಾಗಲೇ 45 ಕೆರೆಗಳನ್ನು ಹಸ್ತಾಂತರ ಮಾಡಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಕಮ್ಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆಯ ತಾಲ್ಲೂಕು ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿರುವ 5 ಜಿಲ್ಲಾ ಮಾರ್ಗದರ್ಶನ ತಂಡಗಳಿಂದ ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆ 2013ರ ಜನವರಿ 30ಕ್ಕೆ ಕೊನೆ ಆಗುವುದರಿಂದ ಹಸ್ತಾಂತರಿಸಬೇಕಿದೆ. ಹಸ್ತಾಂತರದ ನಂತರ ಕೆರೆಗಳ ನಿರ್ವಹಣೆ ಯಾರು ವಹಿಸಿಕೊಳ್ಳಬೇಕೆಂಬುದು ಪ್ರಶ್ನೆಯಾಗಿದ್ದು, ಸಂಘ ಸಂಸ್ಥೆಗಳಿಗೆ ಇಚ್ಚಾಶಕ್ತಿ ಇದ್ದರೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳ ಬಹುದಾಗಿದೆ.  ಮುಂದಿನ ಕೆಲವು ತಿಂಗಳಲ್ಲಿ ನೀರಿನ ಲಭ್ಯತೆ ನೋಡಿ ರೈತರು ಫಸಲು ಬೆಳೆಯಲು ಮುಂದಾಗಬೇಕು ಎಂದರು.

ಜಿಲ್ಲಾ ಜಲಸಂವರ್ಧನಾ ಯೋಜನಾ ಒಕ್ಕೂಟದ ಕಾರ್ಯದರ್ಶಿ ಜಯಶೀಲಗೌಡ ಮಾತನಾಡಿ, ಯೋಜನೆಯನ್ನು ಮುಂದುವರಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ರೈತರ ಕೃಷಿ ಬದುಕಿಗೆ ಅನುಕೂಲವಾಗುವ ಯೋಜನೆಯನ್ನು ಮುಂದುವರಿಸಬೇಕು ಎಂದರು.

ತಾಲ್ಲೂಕು ಕೆರೆ ನಿರ್ವಹಣಾ ಸಮನ್ವಯ ಸಮಿತಿ ಕಾರ್ಯದರ್ಶಿ ತಿಮ್ಮಪ್ಪ ಮಾತನಾಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ವಿಭಾಗ ಸೇರಿದಂತೆ ವಿವಿಧ ಇಲಾಖೆಯಿಂದ ದೊರೆಯುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಲಾಯಿತು.

ಒಕ್ಕೂಟದ ತಾಲ್ಲೂಕು ಅಧ್ಯಕ್ಷ ರಾಜಶೇಖರಪ್ಪ, ಪಂಚಾಯತ್ ರಾಜ್ ಇಂಜಿನಿಯರ್ ಸಿದ್ದನಗೌಡ, ತೋಟಗಾರಿಕಾ ಸಹಾಯಕ ನಿರ್ದೇಶಕ ರಾಮಚಂದ್ರಪ್ಪ, ಕೃಷಿ ಅಧಿಕಾರಿ ಸನಾವುಲ್ಲಾ, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್, ಪಶು ವೈದ್ಯಾಧಿಕಾರಿ ಡಾ. ರಂಗಸ್ವಾಮಿ, ಹನುಮಂತಪ್ಪ, ಚೌಡಪ್ಪ ಹಾಗೂ ಕೆರೆ ಬಳಕೆದಾರರ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.