ADVERTISEMENT

ಸಂಪ್ರದಾಯ ಸೀಮಿತಗೊಳಿಸುವ ಹುನ್ನಾರ

ನೆಹರೂ ವಿವಿ ಪ್ರಾಧ್ಯಾಪಕ ಡಾ.ಗೋಪಾಲ್‌ ಗುರು ಕಳವಳ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2013, 5:30 IST
Last Updated 15 ಅಕ್ಟೋಬರ್ 2013, 5:30 IST

ಸಾಗರ: ಸಂಪ್ರದಾಯದ ವ್ಯಾಖ್ಯೆಯೊಳಗೆ ನಿಲುಕದ ಸಂಗತಿಗಳನ್ನು ಸಂಪ್ರದಾಯದ ಚೌಕಟ್ಟಿಗೆ ತರುವ ರಾಜಕಾರಣದ ಬಗ್ಗೆ ಎಚ್ಚರವಹಿಸುವ ಅಗತ್ಯವಿದೆ ಎಂದು ನವದೆಹಲಿಯ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಗೋಪಾಲ್‌ ಗುರು ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಸೋಮವಾರ ನಡೆದ ಗೋಷ್ಟಿಯಲ್ಲಿ ‘ಸಂಪ್ರದಾಯದೊಂದಿಗೆ ಸಹಬಾಳ್ವೆ’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗಿರದ ಸಂಪ್ರದಾಯವನ್ನು ಹೀಗೆ ಸೀಮಿತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದರು.

ಕೆಲವು ಸಂಪ್ರದಾಯ ಸಾಂಪ್ರದಾಯಿಕ ವಾಗಿದ್ದರೆ, ಇನ್ನು ಕೆಲವು ಪ್ರತಿಗಾಮಿ, ಶಾಸ್ತ್ರೀಯ ಹೀಗೆ ವಿವಿಧ ನೆಲೆಗಟ್ಟನ್ನು ಹೊಂದಿವೆ. ಸಂಪ್ರದಾಯ ಸ್ಥಗಿತದ ಗುಣ ಹೊಂದಿದ್ದರೆ ಪರಂಪರೆಯು ಚಲನಶೀಲತೆಯ ಗುಣವನ್ನು ಪಡೆದಿದೆ. ಪರಂಪರೆಯನ್ನು ಅದರೊಳಗೆ ಇದ್ದುಕೊಂಡೇ ವಿರ್ಮಶಾತ್ಮಕ ದೃಷ್ಟಿಯಿಂದ ನೋಡಿದಾಗ ಮಾತ್ರ ಅದರ ಸತ್ವ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮಣಿಪಾಲ ವಿಶ್ವವಿದ್ಯಾಲಯದ ಮೋಹನದಾಸ್‌ ಪೈ ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿಯನ್ನು ಆತ ಸಾಂಪ್ರದಾಯಿಕ
ಅಥವಾ ಆಧುನಿಕ ಎಂದು ಸ್ಪಷ್ಟವಾಗಿ ವರ್ಗೀಕರಿಸುವುದು ಕಷ್ಟಸಾಧ್ಯ. ಭಾರತೀಯನೊಬ್ಬ ಕರ್ನಾಟಕದವನಾಗಿರುವ ಜತೆಗೆ ಕನ್ನಡಿಗ ಅಥವಾ ಕೊಂಕಣಿಗ ಹೀಗೆ ಬೇರೆ ಬೇರೆ ಸ್ತರಗಳನ್ನು ಹೊಂದಿರುತ್ತಾನೆ ಎಂದು ವಿಶ್ಲೇಷಿಸಿದರು.

ಸಂಪ್ರದಾಯ ಎನ್ನುವುದು ಸಾಂದರ್ಭಿಕವಾದದ್ದು. ಅದಕ್ಕೆ ಸ್ವತಂತ್ರ ಅಸ್ತಿತ್ವ ಇಲ್ಲ. ಸಂಪ್ರದಾಯವನ್ನು ಪ್ರಶ್ನಿಸಲಾಗದು. ಆದರೆ ಪರಂಪರೆಯನ್ನು ಪ್ರಶ್ನಿಸುವ ಜತೆಗೆ ಅದರ ವಿರುದ್ದ ಪ್ರತಿಭಟನೆ ಕೂಡ ನಡೆಸಬಹುದು. ಬಹುತ್ವ ಹಾಗೂ ಮೌಲ್ಯಗಳನ್ನು ಉಳಿಸಿಕೊಳ್ಳಲು ಪರಂಪರೆಯ ಉಳಿವು ಅಗತ್ಯ ಎಂದು ಪ್ರತಿಪಾದಿಸಿದರು.

ಲೇಖಕ ಸುಂದರ ಸಾರುಕ್ಕೈ ಮಾತನಾಡಿ, ಪರಂಪರೆ ಹಾಗೂ ಆಧುನಿಕತೆ ನಡುವೆ ಇರುವ ಗೆರೆ ತೀರಾ ತೆಳುವಾದದ್ದು. ಆಹಾರ, ಉಡುಪು, ಪ್ರವೃತ್ತಿಗಳ ಸಂದರ್ಭದಲ್ಲಿ ಇವೆರಡೂ ತೀರಾ ಒಂದೇ ಎನ್ನುವ ಮಟ್ಟಿಗೆ ಸಮೀಕರಿಸುವುದನ್ನು ನೋಡುತ್ತಿದ್ದೇವೆ ಎಂದರು.

ಪ್ರತಿಕ್ರಿಯಿಸಿದ ಸಾಹಿತಿ ಗಿರಡ್ಡಿ ಗೋವಿಂದರಾಜ, ಪರಂಪರೆಯನ್ನು ಇದೇ ಎಂದು ಗಟ್ಟಿಯಾಗಿ ಗುರುತಿಸುವುದು ಕಷ್ಟ. ಪರಂಪರೆ ಸಂಪ್ರದಾಯವಾಗಿ ಬದಲಾದಾಗ ಅದನ್ನು ಗುರುತಿಸುವುದು ಸುಲಭ. ಈಚೆಗೆ ಸಂಪ್ರದಾಯ ಜಡವಾಗುತ್ತಾ ಅರ್ಥ ಕಳೆದುಕೊಳ್ಳುತ್ತಿರುವ ಜತೆಗೆ ವಾಣಿಜ್ಯೀಕರಣಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.