ADVERTISEMENT

ಸಚಿವರಿಗಾಗಿ ಕಾದಿರುವ ಅಧ್ಯಯನ ಪೀಠಗಳು!

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 8:38 IST
Last Updated 4 ಅಕ್ಟೋಬರ್ 2017, 8:38 IST
ಕುವೆಂಪು ವಿಶ್ವವಿದ್ಯಾಲಯ
ಕುವೆಂಪು ವಿಶ್ವವಿದ್ಯಾಲಯ   

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಿರುವ ಪ್ರೊ.ಬಿ. ಕೃಷ್ಣಪ್ಪ ಹಾಗೂ ಬಾಬು ಜಗಜೀವನರಾಂ ಅಧ್ಯಯನ ಪೀಠಗಳು ಕಳೆದ ಆರು ತಿಂಗಳಿನಿಂದ ಉದ್ಘಾಟನೆಯಾಗದೇ ಸಚಿವರ ಬರುವಿಕೆಗಾಗಿ ಎದುರುನೋಡುತ್ತಿವೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಪ್ರೊ.ಬಿ. ಕೃಷ್ಣಪ್ಪ ಹಾಗೂ ಬಾಬು ಜಗಜೀವನರಾಂ ಅಧ್ಯಯನ ಪೀಠ ಸ್ಥಾಪಿಸಲು 2016ರ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಅನುಮೋದನೆ ದೊರೆತು ಎರಡೂ ಪೀಠಗಳಿಗೆ ತಲಾ ₨ 2 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ, ಇಲ್ಲಿಯವರೆಗೂ ಪೀಠಗಳು ಉದ್ಘಾಟನೆಯಾಗದ ಕಾರಣ ಪೀಠಗಳು ಕಾರ್ಯ ಆರಂಭಿಸಿಲ್ಲ.

ಕೈ ಕೊಟ್ಟಿದ್ದ ಸಚಿವರು: ಕುವೆಂಪು ವಿವಿಯಲ್ಲಿ ಸ್ಥಾಪಿಸಿರುವ ಎರಡೂ ಅಧ್ಯಯನ ಪೀಠಗಳ ಉದ್ಘಾಟನಾ ಕಾರ್ಯಕ್ರಮ ಜೂನ್‌ 10ರಂದು ನಿಗದಿಯಾಗಿತ್ತು. ಆಹ್ವಾನ ಪತ್ರಿಕೆಗಳೂ ಎಲ್ಲರ ಕೈ ಸೇರಿದ್ದವು. ವಿವಿ ಆವರಣದಲ್ಲಿ ಕಾರ್ಯಕ್ರಮಕ್ಕೆ ಸಾಕಷ್ಟು ಹಣ ಖರ್ಚು ಮಾಡಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ADVERTISEMENT

ಆದರೆ, ಕೊನೆ ಕ್ಷಣದಲ್ಲಿ ಸಮಾಜಕಲ್ಯಾಣ ಸಚಿವ ಎಚ್‌. ಆಂಜನೇಯ ಬಾರದ ಕಾರಣ ಉದ್ಘಾಟನೆ ಕಾರ್ಯಕ್ರಮ ಮುಂದೂಡಲಾಗಿತ್ತು. ಕಾರ್ಯಕ್ರಮ ರದ್ದಾಗಿ ನಾಲ್ಕು ತಿಂಗಳು ಕಳೆದರೂ ಇಂದಿಗೂ ಪೀಠಗಳಿಗೆ ಉದ್ಘಾಟನಾ ಭಾಗ್ಯ ಕೂಡಿಬಂದಿಲ್ಲ.

ಪೀಠಗಳ ಉದ್ದೇಶ: ಡಾ.ಬಿ.ಆರ್. ಅಂಬೇಡ್ಕರ್ ಅವರ ಬಳಿಕ ದಲಿತರು, ಶೋಷಿತರ ಪರವಾಗಿ ದನಿಯಾಗಿದ್ದ, ದಲಿತ ಸಂಘರ್ಷ ಸಮಿತಿ ಸ್ಥಾಪಿಸುವ ಮೂಲಕ ಹೋರಾಟಕ್ಕೆ ಹೊಸ ಅರ್ಥ ನೀಡಿದ್ದ ಪ್ರೊ.ಬಿ. ಕೃಷ್ಣಪ್ಪ ಹಾಗೂ ರಾಷ್ಟ್ರನಾಯಕ ಡಾ.ಬಾಬು ಜಗಜೀವನರಾಂ ಅವರ ತತ್ವ ಸಿದ್ಧಾಂತಗಳು, ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಪೀಠಗಳ ಉದ್ದೇಶ.

ಭೂ ಹೋರಾಟ, ಜಾತಿಪದ್ಧತಿ, ದೇವದಾಸಿ ಪದ್ಧತಿ, ಮಲಹೊರುವ ಪದ್ಧತಿ, ಮೂಢನಂಬಿಕೆ, ಜಾತಿಯ ಕಾರಣಕ್ಕೆ ಹಲವು ರೀತಿಯ ದೌರ್ಜನ್ಯ, ವರ್ಗ ಹೋರಾಟ ಇವೆಲ್ಲವುಗಳ ಚರ್ಚೆ ಹಾಗೂ ಉತ್ತರ ಕಂಡುಕೊಳ್ಳಲು ಒಂದು ಪೀಠ ಸ್ಥಾಪಿಸಬೇಕು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲವಾದ ಒಂದು ಎಚ್ಚರ ಮೂಡಿಸಬೇಕು ಎಂದು ಹಲವರು ಒತ್ತಾಯಿಸಿದ್ದರು.

ಮುಂದಿನ ಆಲೋಚನೆಗಳು: ಕೃಷ್ಣಪ್ಪ ಹಾಗೂ ಜಗಜೀವನರಾಂ ಅವರ ಬದುಕಿನ ಹೋರಾಟಗಾಥೆ, ಆಶಯಗಳು ಮತ್ತು ಕನಸುಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವುದು. ಹಸಿರುಕ್ರಾಂತಿ, ಸೈದ್ಧಾಂತಿಕ ನೆಲೆಗಳು, ದಲಿತ ಚಳವಳಿ, ಮಹಿಳಾ ಸಂಘಗಳು, ರೈತ ಸಂಘಗಳು, ಕಾರ್ಮಿಕ ಸಂಘಗಳ ಹುಟ್ಟಿಗೆ ಕಾರಣವಾದ ಬಗೆ, ಸಮಾಜಕ್ಕೆ ದಲಿತ ಸಂಘಟನೆಗಳ ಕೊಡುಗೆ, ಕೃಷ್ಣಪ್ಪ ಮತ್ತು ರಾಜಕಾರಣ, ಚಳವಳಿಗಳ ಜತೆಗೆ ಕೃಷ್ಣಪ್ಪನವರ ಪ್ರಭಾವ, ವಿನಿಮಯಗಳು. ಇವುಗಳ ಜತೆಗೆ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ವಿವಿಧ ಸೆಮಿನಾರ್, ಕಾರ್ಯಾಗಾರಗಳು, ಯೋಜನೆಗಳು, ಡಿಪ್ಲೊಮಾ ಹಾಗೂ ಸರ್ಟಿಫಿಕೆಟ್‌ ಕೋರ್ಸ್‌ ಮಾಡುವ ಯೋಚನೆ ರೂಪಿಸಲಾಗಿದೆ ಎನ್ನುತ್ತಾರೆ ಪೀಠದ ಸಂಚಾಲಕ ಡಾ.ಶಿವಾನಂದ ಕೆಳಗಿನಮನಿ.

ದಶಕಗಳ ಹೋರಾಟ: ಪ್ರೊ.ಬಿ. ಕೃಷ್ಣಪ್ಪ ಹಾಗೂ ಡಾ.ಬಾಬು ಜಗಜೀವನರಾಂ ಅವರ ತತ್ವ ಸಿದ್ಧಾಂತಗಳು, ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಸಲುವಾಗಿ ಅವರ ಹೆಸರಿನ ಅಧ್ಯಯನ ಪೀಠಗಳನ್ನು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಬೇಕು ಎನ್ನುವುದು ಎರಡು ದಶಕಗಳ ಬೇಡಿಕೆ. ಅದಕ್ಕಾಗಿ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು, ಸಂಘ ಸಂಸ್ಥೆಗಳು, ಬಿ. ಕೃಷ್ಣಪ್ಪ ಅವರ ಒಡನಾಡಿಗಳು ನಿರಂತರವಾಗಿ ಹೋರಾಟ ನಡೆಸಿದ್ದರು.

‘ಕುವೆಂಪು ವಿವಿ ಕೂಡ 2015ರಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಇಷ್ಟೆಲ್ಲಾ ಹೋರಾಟಗಳ ಪರಿಣಾಮವಾಗಿ ಸ್ಥಾಪನೆಯಾಗಿರುವ ಪೀಠಗಳು ಇಂದಿಗೂ ಉದ್ಘಾಟನೆಯಾಗದಿರುವುದು ಹಲವರ ಬೇಸರಕ್ಕೆ ಕಾರಣವಾಗಿವೆ’ ಎನ್ನುತ್ತಾರೆ ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.