ADVERTISEMENT

ಸಮಗ್ರ ನೀರಾವರಿ ಯೋಜನೆ ಅನುಷ್ಠಾನ

ಶಿಕಾರಿಪುರ:ತಾಲ್ಲೂಕಿನ ಜನರ ಆಗ್ರಹ l ದೇವಾಲಯಗಳು ಪ್ರವಾಸಿ ತಾಣವಾಗಲಿ

​ಪ್ರಜಾವಾಣಿ ವಾರ್ತೆ
Published 21 ಮೇ 2018, 10:11 IST
Last Updated 21 ಮೇ 2018, 10:11 IST
ತುಂಗಾ ನದಿ ಮೂಲದಿಂದ ಏತನೀರಾವರಿ ಮೂಲಕ ನೀರು ತರಬೇಕಾದ ಶಿಕಾರಿಪುರ ತಾಲ್ಲೂಕಿನಲ್ಲಿರುವ ಅಂಜನಾಪುರ ಜಲಾಶಯ ದೃಶ್ಯ
ತುಂಗಾ ನದಿ ಮೂಲದಿಂದ ಏತನೀರಾವರಿ ಮೂಲಕ ನೀರು ತರಬೇಕಾದ ಶಿಕಾರಿಪುರ ತಾಲ್ಲೂಕಿನಲ್ಲಿರುವ ಅಂಜನಾಪುರ ಜಲಾಶಯ ದೃಶ್ಯ   

ಶಿಕಾರಿಪುರ: ತಾಲ್ಲೂಕಿನ ರೈತರ ಕೃಷಿ ಚಟುವಟಿಕೆಗೆ ಪೂರಕವಾದ ಹಾಗೂ ವಿವಿಧ ಗ್ರಾಮಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನೂತನ ಶಾಸಕ ಬಿ.ಎಸ್‌.ಯಡಿಯೂರಪ್ಪ ಅವರು ಸಮಗ್ರ ನೀರಾವರಿ ಯೋಜನೆ ಅನುಷ್ಠಾನ ಮಾಡಿಸಲು ಆದ್ಯತೆ ನೀಡಬೇಕಾಗಿದೆ.

ಕಳೆದ ವರ್ಷಗಳಲ್ಲಿ ಆವರಿಸಿದ್ದ ಬರಗಾಲದಿಂದ ತಾಲ್ಲೂಕಿನ ಬಹುತೇಕ ರೈತರು ತತ್ತರಿಸಿ ಹೋಗಿದ್ದಾರೆ. ಅಂತರ್ಜಲ ಕೂಡ ಬತ್ತಿ ಹೋಗಿದ್ದರಿಂದ ನೀರಿಲ್ಲದೆ ಬೆಳೆದ ಬೆಳೆಯನ್ನು ರೈತರು ಕಳೆದುಕೊಂಡಿದ್ದಾರೆ. ನೂರಾರು ವರ್ಷಗಳಿಂದ ಪೋಷಣೆ ಮಾಡಿದ ಅಡಿಕೆ ಮರಗಳು ಒಣಗಿ ರೈತರು ಕಷ್ಟ ಅನುಭವಿಸಿದ್ದಾರೆ.

ತಾಲ್ಲೂಕಿನ ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲವಾಗಲು ಹಾಗೂ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ತುಂಗಾ ನದಿಯಿಂದ ಅಂಜನಾಪುರ ಜಲಾಶಯಕ್ಕೆ ಏತ ನೀರಾವರಿ ಮೂಲಕ ನೀರು ತರಬೇಕು. ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕಾರ್ಯ ಆಗಬೇಕಾಗಿದೆ.

ADVERTISEMENT

ತಾಲ್ಲೂಕಿನ ತಾಳಗುಂದ, ಉಡುಗಣಿ ಹಾಗೂ ಕಸಬಾ, ಅಂಜನಾಪುರ, ಹೊಸೂರು ಹೋಬಳಿ ಜನರಿಗೆ ಕೃಷಿ ಚಟುವಟಿಕೆ ನಡೆಸಲು ಹಾಗೂ ಕುಡಿಯುವ ನೀರಿಗಾಗಿ ವಿವಿಧ ನೀರಾವರಿ ಯೋಜನೆ ಅನುಷ್ಠಾನ ಮಾಡುವ ಅಗತ್ಯ ಇದೆ.

ತಾಲ್ಲೂಕು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಹಲವು ಪ್ರೇಕ್ಷಣಿಯ ಸ್ಥಳಗಳು ತಾಲ್ಲೂಕಿನಲ್ಲಿವೆ. ನಾಟ್ಯರಾಣಿ ಶಾಂತಲೆ ಜನ್ಮ ನೀಡಿದ ಬಳ್ಳಿಗಾವಿ, ಕನ್ನಡ ಮೊದಲ ದೊರೆ ಮಯೂರ ವರ್ಮ ಜನಿಸಿದ ತಾಳಗುಂದ ಸೇರಿದಂತೆ ತಾಲ್ಲೂಕಿನ ಹಲವು ದೇವಸ್ಥಾನಗಳಿದ್ದು, ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸುವ ಜತೆ ತಾಲ್ಲೂಕು ಅನ್ನು ಪ್ರವಾಸಿ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ನೂತನ ಶಾಸಕರು ಗಮನ ಹರಿಸಬೇಕಾಗಿದೆ.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿಕಾರಿಪುರ ಪಟ್ಟಣದಲ್ಲಿ ಡಿಪ್ಲೊಮಾ ಹಾಗೂ ಎಂಜಿನಿಯರ್‌ ಕಾಲೇಜು ಆರಂಭ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಸೇವೆ ನೀಡಲು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ ಡಿಪೊ ನಿರ್ಮಾಣ ಹಾಗೂ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗವಾಕಾಶ ದೊರಕಿಸುವ ನಿಟ್ಟಿನಲ್ಲಿ ಕೈಗಾರಿಕಾ ಘಟಕಗಳನ್ನು ಆರಂಭಿಸಬೇಕು. ಕ್ರೀಡಾಪಟುಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಪೂರಕವಾಗುವ ನಿಟ್ಟಿನಲ್ಲಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಗಮನ ನೀಡಬೇಕು. ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ಶಾಸಕರ ಮೇಲಿದೆ.

ತಾಲ್ಲೂಕಿನ ರೈತರಿಗೆ ಪೂರಕವಾದ ಏತನೀರಾವರಿ ಯೋಜನೆ ಅನುಷ್ಠಾನ ಮಾಡಬೇಕು. ಕೆರೆಗಳ ಹೂಳು ತೆಗೆಯಬೇಕು. ಕೆರೆ ಒತ್ತುವರಿ ತೆರವುಗೊಳಿಸಬೇಕು ಎಂದು ಮಾಜಿ ಸೈನಿಕ ಪಿ.ವೈ.ರವಿ ಒತ್ತಾಯಿಸಿದ್ದಾರೆ.

ವಿನಾಯಕ ನಗರ ಹಾಗೂ ಆಶ್ರಯ ಬಡಾವಣೆಗಳ ಕಲುಷಿತ ಚರಂಡಿ ನೀರು ಅಂಜನಾಪುರ ಜಲಾಶಯ ನಾಲೆ ಮೂಲಕ ಪಟ್ಟಣದ ಹುಚ್ಚರಾಯಸ್ವಾಮಿ ಕೆರೆಗೆ ಸೇರ್ಪಡೆಯಾಗುತ್ತಿದ್ದು,ಕೆರೆ ಮಲಿನವಾಗುತ್ತಿದೆ. ಈ ಕಲುಷಿತ ನೀರು ಕೆರೆ ಸೇರದಂತೆ ಕ್ರಮಕೈಗೊಳ್ಳಲು ಶಾಸಕರು ಗಮನ ಹರಿಸಬೇಕು ಎಂಬುದು ಈಜು ಪಟು ಕರಿಬಸಪ್ಪ ಮನವಿಯಾಗಿದೆ.

ಹಲವು ವರ್ಷಗಳಿಂದ ಪಟ್ಟಣದಲ್ಲಿ ಆಶ್ರಯ ಯೋಜನೆ ಅಡಿ ಬಡವರಿಗೆ ನಿವೇಶನ ಒದಗಿಸುವ ಕಾರ್ಯವಾಗಿಲ್ಲ. ನೂತನ ಶಾಸಕರು ಬಡವರಿಗೆ ನಿವೇಶನ ನೀಡಲು ಆದ್ಯತೆ ನೀಡಬೇಕು ಎಂಬುದು ಬಸ್‌ ನಿಲ್ದಾಣ ಓಂ ಗಣಪತಿ ಸೇವಾ ಸಮಿತಿ ಮಾಜಿ ಅಧ್ಯಕ್ಷ ಜೀನಳ್ಳಿ ಪ್ರಶಾಂತ್ ಮನವಿಯಾಗಿದೆ

– ಎಚ್.ಎಸ್. ರಘು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.