ADVERTISEMENT

ಸರ್ಕಾರದ ಆದೇಶ ವಿರೋಧಿಸಿ ಧರಣಿ

ರೂ` 1 ಲಕ್ಷದ ಕಾಮಗಾರಿಗೂ ಟೆಂಡರ್‌: ಪಂಚಾಯತ್‌ ರಾಜ್‌ ಇಲಾಖೆ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 6:32 IST
Last Updated 13 ಸೆಪ್ಟೆಂಬರ್ 2013, 6:32 IST

ಶಿವಮೊಗ್ಗ: ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ` 1ಲಕ್ಷದ ಕಾಮಗಾರಿಗಳಿಗೆ ಕಡ್ಡಾಯವಾಗಿ ಪಂಚಾಯತ್‌ ರಾಜ್ ಇಲಾಖೆಯ ವತಿಯಿಂದ ಟೆಂಡರ್ ಕರೆಯುವ ಸರ್ಕಾರದ ನಿರ್ಧಾರಕ್ಕೆ ಜಿಲ್ಲಾ ಪಂಚಾಯ್ತಿಯ ಬಿಜೆಪಿ, ಕೆಜೆಪಿ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಗುರುವಾರ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಈ ಆದೇಶದ ವಿರುದ್ಧ ಸದಸ್ಯರು ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿ, ಸರ್ಕಾರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಸರ್ಕಾರದ ಸುತ್ತೋಲೆಯ ಪ್ರತಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್‌ ಸಭೆಯನು್ನ ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಜಿ.ಪಂ. ಅನುದಾನದಡಿ ಕೈಗೊಳ್ಳುವ ` 1 ಲಕ್ಷದ ಮೇಲಿನ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ನಿರ್ಮಾಣ ಕಾಮಗಾರಿಗಳನ್ನು ಕಡ್ಡಾಯವಾಗಿ ಟೆಂಡರ್ ಮುಖಾಂತರವೇ ಕೈಗೆತ್ತಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ.

ಸರ್ಕಾರ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಇದರಿಂದ ಜಿ.ಪಂ. ಸದಸ್ಯರ ಅಧಿಕಾರ ಮೊಟಕು ಗೊಳಿಸಿದಂತಾಗುತ್ತದೆ. ಶಾಸಕರು ಹಾಗೂ ಜಿ.ಪಂ. ಸದಸ್ಯರ ನಡುವೆ ನಡೆಸುತ್ತಿರುವ ತಾರತಮ್ಯ ಧೋರಣೆಗೆ ಈ ಆದೇಶ ಸಾಕ್ಷಿಯಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ಸದಸ್ಯ ಅಶೋಕ್ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು.

ಅಶೋಕ್ ನಾಯ್ಕ ಅವರನು್ನ ಬೆಂಬಲಿಸಿ ಕೆಜೆಪಿ, ಜೆಡಿಎಸ್‌ ಸದಸ್ಯರು ಕೂಡ ಸಭೆಯ ಬಾವಿಗಿಳಿದು ಧರಣಿ ಕುಳಿತುಕೊಂಡರು.

ಈ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ ಸದಸ್ಯರ ಸಮಾಧಾನಕ್ಕೆ ವಿಫಲ
ಯತ್ನ ನಡೆಸಿದರು. ನಂತರ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್‌ ಕಲಾಪಕ್ಕೆ ಅವಕಾಶ ನೀಡುವಂತೆ ಧರಣಿನಿರತ ಸದಸ್ಯರಲ್ಲಿ ಮನವಿ ಮಾಡಿಕೊಂಡರು. ಆದರೆ, ಧರಣಿ ನಿರತ ಸದಸ್ಯರು ತಮ್ಮ ನಿರ್ಧಾರ ಬದಲಿಸಲಿಲ್ಲ. ತಕ್ಷಣ ಎದ್ದು ನಿಂತ ಅಧ್ಯಕ್ಷೆ, ಈ ಮೊದಲು ತಾವು ಸಂಬಂಧಪಟ್ಟ ಇಲಾಖೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ ಎಂದರು. ಆದರೂ ಸದಸ್ಯರು ಧರಣಿ ನಿಲ್ಲಿಸದೇ ಇದ್ದಾಗ ಸಭೆಯನ್ನು ಮುಂದಕ್ಕೆ ಹಾಕಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಹೇಮಾಪಾವನಿ, ಜಿಲ್ಲಾ ಪಂಚಾಯಿ್ತ ಸಿಇಒ ಎಸ್‌.ಸಸಿಕಾಂತ್‌ ಸೆಂಥಿಲ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.