ADVERTISEMENT

ಸರ್ಕಾರಿ ಪ್ರೌಢಶಾಲೆ ಮೇಲ್ದರ್ಜೆಗೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಮೇ 2012, 10:45 IST
Last Updated 30 ಮೇ 2012, 10:45 IST
ಸರ್ಕಾರಿ ಪ್ರೌಢಶಾಲೆ ಮೇಲ್ದರ್ಜೆಗೇರಿಸಲು ಆಗ್ರಹ
ಸರ್ಕಾರಿ ಪ್ರೌಢಶಾಲೆ ಮೇಲ್ದರ್ಜೆಗೇರಿಸಲು ಆಗ್ರಹ   

ಕಾರ್ಗಲ್: ಇಲ್ಲಿನ ಸರ್ಕಾರಿ ಫ್ರೌಢಶಾಲೆಯನ್ನು ಮೇಲ್ದರ್ಜೆಗೇರಿಸಿ ಪದವಿಪೂರ್ವ ಕಾಲೇಜು ಆಗಿ ಮಾರ್ಪಡಿಸುವಂತೆ ಪೋಷಕರ ಪರವಾಗಿ ಸಾಮಾಜಿಕ ಕಾರ್ಯಕರ್ತ ಸಶಿ ಲಕ್ಷ್ಮೀನಾರಾಯಣ ನಂದೋಡಿ ಶಿಕ್ಷಣ ಸಚಿವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಭಾರಂಗಿ ಹೋಬಳಿ ಕೇಂದ್ರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ಸಾಲಿನಲ್ಲಿ ಮುಂಪಕ್ತಿಯಲ್ಲಿ ಇರುವ ಕಾರ್ಗಲ್ ಶಾಲೆ ಉತ್ತಮ ಫಲಿತಾಂಶ ಪಡೆಯುತ್ತಾ ಬರುತ್ತಿದ್ದು, ಅಗತ್ಯವಾದ ಎಲ್ಲಾ ಮೂಲಸೌಕರ್ಯಗಳನ್ನು ಶಾಲೆ ಹೊಂದಿದೆ. ಸುತ್ತಮುತ್ತಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಗಲ್ ಪ್ರೌಢಶಾಲೆಯನ್ನು ಮೇಲ್ದರ್ಜೆಗೇರಿಸುವುದು ಅನಿವಾರ್ಯ ಆಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ 1 ವರ್ಷಗಳಿಂದ ಇಲ್ಲಿನ ಶಾಲೆಗೆ ಮುಖ್ಯೋಪಾಧ್ಯಾಯರ ಹುದ್ದೆಖಾಲಿ ಇದ್ದು, ಕೂಡಲೇ ಸದರಿ ಹುದ್ದೆಯನ್ನು ಭರ್ತಿ ಮಾಡುವಂತೆ ಶಿಕ್ಷಣ ಇಲಾಖೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ಒತ್ತಾಯಿಸಿದ್ದಾರೆ.
ಇಲ್ಲಿನ ಶಾಲೆಗೆ ವರ್ಗವಾಗಿ ಬಂದ ಗುಮಾಸ್ತೆ ಸಿ. ಸುಮಾ 1 ವರ್ಷಗಳಿಂದ ಶಿವಮೊಗ್ಗದ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಎರವಲು ಸೇವೆ ಮಾಡುತ್ತಾ ಕಾರ್ಗಲ್ ಶಾಲೆಗೆ ಹೊರೆಯಾಗಿದ್ದಾರೆ. ಅವರನ್ನು ಕೂಡಲೇ ವರ್ಗ ಮಾಡಿ ಬೇರೆ ಗುಮಾಸ್ತರನ್ನು ನೇಮಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.

ಈ ಬಾರಿ ಸರ್ಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿದ್ದು, ಆಂಗ್ಲ ಮಾಧ್ಯಮದಲ್ಲಿ ಶೇ 98, ಕನ್ನಡ ಮಾಧ್ಯಮದಲ್ಲಿ ಶೇ 58 ಪಡೆದಿದೆ. ಒಟ್ಟು ಶಾಲಾ ಶೇ. 77ರಷ್ಟು ಪಡೆದಿದೆ ಎಂದು ಉಸ್ತುವಾರಿ ಮುಖ್ಯೋಪಾಧ್ಯಾಯಿನಿ ಗ್ಲಾಡಿಸ್ ಫಿಲೋಮಿನಾ ತಿಳಿಸಿದ್ದಾರೆ.

5 ವಿದ್ಯಾರ್ಥಿನಿಯರು 2 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ವಿಧ್ಯಾರ್ಥಿನಿ ಚೈತ್ರಾ ಎನ್. ಹೆಗಡೆ 599 ಅಂಕಗಳನ್ನು ಪಡೆದು ಶೇ 96 ಅಂಕಗಳೊಂದಿಗೆ ಶಾಲೆಗೆ ಅಗ್ರಸ್ಥಾನವನ್ನು ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.