ಶಿವಮೊಗ್ಗ: ಸಿಇಟಿ ಸಹಾಯವಾಣಿ ಕೇಂದ್ರ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜೂನ್ 20ರಂದು ಸ್ಥಾಪನೆಯಾಗಲಿದೆ. ರಾಜ್ಯ ಪರೀಕ್ಷಾ ಪ್ರಾಧಿಕಾರ (ಕೆಇಎ) ತೆರೆಯುವ ಈ ಕೇಂದ್ರ ಜೂನ್ 25ರಿಂದ ಕಾರ್ಯಾರಂಭ ಮಾಡಲಿದೆ.
ಜೂನ್ 25ರಿಂದ ಜುಲೈ 11ರವರೆಗೆ ವಿದ್ಯಾರ್ಥಿಗಳ ಶ್ರೇಯಾಂಕ ಆಧರಿಸಿ ದಾಖಲೆ ಪತ್ರ ಪರಿಶೀಲನೆ ಕಾರ್ಯ ಸಹಾಯವಾಣಿ ಕೇಂದ್ರದಲ್ಲಿ ನಡೆಯಲಿದೆ. ಸ್ಥಾಪಿಸಲಿರುವ ಐದು ಕೌಂಟರ್‌ಗಳಲ್ಲಿ ವಿದ್ಯಾರ್ಥಿಗಳ ಸಿಇಟಿ ನೋಂದಣಿ, ಶ್ರೇಯಾಂಕ ಸಂಖ್ಯೆ ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ ವಿದ್ಯಾರ್ಥಿಗಳಿಗೆ ಕೀ ನಂಬರ್ ನೀಡಲಾಗುತ್ತದೆ. ನಂತರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಿಇಟಿ ಕೌನ್ಸೆಲಿಂಗ್ ಬಗ್ಗೆ ವಿವರಿಸುವ ಸುಮಾರು 20 ನಿಮಿಷದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇರುವ ವಿಶೇಷ ಧ್ವನಿ ಚಿತ್ರದ ಸಿ.ಡಿ.ಯ ಪ್ರದರ್ಶನ ವ್ಯವಸ್ಥೆ ಇದೆ.
ಯಾವ ದಾಖಲೆಗಳು?
ಈಗಾಗಲೇ ವಿದ್ಯಾರ್ಥಿಗಳಿಗೆ ನೀಡಿರುವ ಸಿಇಟಿ ಮಾಹಿತಿ ಪುಸ್ತಕದಲ್ಲಿ ಸಹಾಯವಾಣಿ ಕೇಂದ್ರಕ್ಕೆ ತರಬೇಕಾದ ದಾಖಲೆಗಳ ಹೆಸರಿನ ಪಟ್ಟಿ ಇದ್ದು, ಮುಖ್ಯವಾಗಿ ಸಿಇಟಿ ನೋಂದಣಿ ಸಂಖ್ಯೆ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಜಾತಿ ಪ್ರಮಾಣಪತ್ರ ಸೇರಿದಂತೆ ಮತ್ತಿತರ ಮೂಲದಾಖಲೆಗಳನ್ನು ತರಬೇಕು. ಅದರೊಂದಿಗೆ ದೃಢೀಕರಣಗೊಳಿಸಿದ ಈ ಮೂಲ ದಾಖಲೆಗಳ ಒಂದೊಂದು ಜೆರಾಕ್ಸ್ ಪ್ರತಿಗಳನ್ನೂ ತೆಗೆದುಕೊಂಡು ಬರಬೇಕು.
ಈ ಬಾರಿ ಆನ್‌ಲೈನ್‌ನಲ್ಲಿ ಸಿಇಟಿ ಕೌನ್ಸೆಲಿಂಗ್ ನಡೆಯುತ್ತಿರುವುದರಿಂದ ರಾಜ್ಯ ಪರೀಕ್ಷಾ ಪ್ರಾಧಿಕಾರ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದ ಒಟ್ಟು 13 ಭಾಗಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆದಿದೆ. ಬೆಂಗಳೂರು, ಮೈಸೂರು, ಗುಲ್ಬರ್ಗ, ಹುಬ್ಬಳ್ಳಿ, ರಾಯಚೂರು, ಕಾರವಾರ, ವಿಜಾಪುರ, ಬೆಳಗಾವಿ, ಬಳ್ಳಾರಿ, ಮಂಗಳೂರು, ಶಿವಮೊಗ್ಗ, ದಾವಣಗೆರೆ ಮತ್ತು ಹಾಸನಗಳಲ್ಲಿ ಕೇಂದ್ರ ಸ್ಥಾಪನೆಗೆ ಅಂತಿಮ ಹಂತದ ಸಿದ್ಧತೆಗಳು ನಡೆದಿವೆ.
ರಾಜಾದ್ಯಂತ ಈ ಬಾರಿ ಸರ್ಕಾರಿ ಕಾಲೇಜುಗಳಲ್ಲೇ ಸಹಾಯವಾಣಿ ಕೇಂದ್ರ ತೆರೆಯುವುದರ ಜತೆಗೆ ಸರ್ಕಾರಿ ಕಾಲೇಜು ಸಿಬ್ಬಂದಿಗಳನ್ನೇ ಬಳಸಿಕೊಳ್ಳುತ್ತಿರುವುದು ವಿಶೇಷ. ಜಿಲ್ಲೆಯಲ್ಲಿ ಕಳೆದ ವರ್ಷ ಪಿಇಎಸ್ ಕಾಲೇಜಿನಲ್ಲಿ ಕೌನ್ಸೆಲಿಂಗ್ ಕೇಂದ್ರ ತೆರೆಯಲಾಗಿತ್ತು. ಈ ಬಾರಿ ಅದು ರದ್ದಾಗಿದೆ.
ಸಹಾಯವಾಣಿ ಕೇಂದ್ರದಿಂದ ಕೀ ನಂಬರ್ ತಂದ ವಿದ್ಯಾರ್ಥಿಗಳು, ಜುಲೈ 12ರಿಂದ 18ವರೆಗೆ ಒಟ್ಟು 7 ದಿವಸ ಇಂಟರ್‌ನೆಟ್ ವ್ಯವಸ್ಥೆ ಇರುವ ಯಾವ ಸ್ಥಳದಿಂದ ಬೇಕಾದರೂ ತಮ್ಮ ಶ್ರೇಯಾಂಕ ಸಂಖ್ಯೆಗೆ ಅನುಗುಣವಾಗಿ ಕಾಲೇಜು- ಕೋರ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಅದಕ್ಕೆ 1,384 ಆಯ್ಕೆಗಳಿರುತ್ತವೆ. ಹಿಂದಿನ ವರ್ಷ ಯಾವ ರ‌್ಯಾಂಕಿಗೆ ಯಾವ ಕಾಲೇಜು-ಕೋರ್ಸ್ ಸಿಕ್ಕಿತ್ತು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಇದ್ದರೆ ಇನ್ನೂ ಒಳ್ಳೆಯದು.
ಇಂಟರ್‌ನೆಟ್ ತೆರೆದು ಕೊಳ್ಳುತ್ತಿದ್ದಂತೆ ಮೊದಲು ಸಿಇಟಿ ನೋಂದಣಿ ಸಂಖ್ಯೆ, ನಂತರ ಶ್ರೇಯಾಂಕ ಸಂಖ್ಯೆ, ನಂತರ ಸಹಾಯವಾಣಿ ಕೇಂದ್ರ ನೀಡಿದ ಕೀ ನಂಬರ್ ನಮೂದಿಸಬೇಕು. ಆಮೇಲೆ ತಮ್ಮ ಯಾವುದೇ ಪಾರ್ಸ್‌ವಾರ್ಡ್ ಬರೆದು, ದಾಖಲಿಸಿದರೆ ಕಾಲೇಜು-ಕೋರ್ಸ್‌ಗಳ ವಿವರಗಳು ಕಂಪ್ಯೂಟರ್ ಪರದೆ ಮೇಲೆ ಮೂಡುತ್ತವೆ.
ಜುಲೈ 19ಕ್ಕೆ ಆನ್‌ಲೈನ್‌ನಲ್ಲಿ ಅಣಕು ಸೀಟು ಹಂಚಿಕೆ ಪಟ್ಟಿ ತೋರಿಸುತ್ತದೆ. 21ಕ್ಕೆ ಅಣಕು ಸೀಟು ಹಂಚಿಕೆ ಬಿಡುಗಡೆಯಾಗುತ್ತದೆ. ಈ ಪಟ್ಟಿ ನೋಡಿಕೊಂಡು ವಿದ್ಯಾರ್ಥಿಗಳು ಬದಲಾವಣೆ ಬೇಕಾದರೆ 22ರಂದು ಪುನಃ ತಮಗೆ ಬೇಕಾದ ಕಾಲೇಜು-ಕೋರ್ಸ್‌ಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಬಹುದು. 23ಕ್ಕೆ ನಿಜವಾದ ಸೀಟು ಹಂಚಿಕೆ ಪಟ್ಟಿ ಬಿಡುಗಡೆಯಾಗುತ್ತದೆ. ನಂತರ ಜುಲೈ 26ರಿಂದ 30ರವರೆಗೆ ಸಹಾಯವಾಣಿ ಕೇಂದ್ರದಲ್ಲಿ ನಿಗದಿತ ಶುಲ್ಕ ನೀಡಿ, ವಿದ್ಯಾರ್ಥಿಗಳು ನೋಂದಾಣಿಯಾಗಬೇಕು. 31ಕ್ಕೆ ಸಂಬಂಧಪಟ್ಟ ಕಾಲೇಜಿನಲ್ಲಿ ವಿದ್ಯಾರ್ಥಿಗಳು ದಾಖಲಾಗಬೇಕು.
ನಂತರದ ಸುತ್ತುಗಳ ನೋಂದಣಿ ಪ್ರಕ್ರಿಯೆ ಮುಂದುವರಿಯುತ್ತದೆ. ಬೇರೆ, ಬೇರೆ ಕಾರಣಗಳಿಗೆ ಸಿಕ್ಕ ಸೀಟನ್ನು ತೆಗೆದುಕೊಳ್ಳದವರು ಅದನ್ನು ಹಿಂದಕ್ಕೆ ನೀಡುವುದಕ್ಕೂ ಆನ್‌ಲೈನ್‌ನಲ್ಲಿ ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ ಸಿಇಟಿ ಸಹಾಯವಾಣಿ ಕೇಂದ್ರದ ಮುಖ್ಯ ನೋಡೆಲ್ ಅಧಿಕಾರಿ ಟಿ.ಆರ್. ಆಶಾ, ಮೊಬೈಲ್: 94483 29860, ಸಹಾಯಕ ನೋಡೆಲ್ ಅಧಿಕಾರಿ ಡಾ.ನಾಗಮಣಿ ಮೊಬೈಲ್:94490 55022 ಅವರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.