ADVERTISEMENT

ಸಾಗರದಲ್ಲಿ ಜಾನಪದ ವಿವಿ ಸ್ಥಾಪಿಸಲಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 11:15 IST
Last Updated 20 ಫೆಬ್ರುವರಿ 2011, 11:15 IST

ಸಾಗರ: ಸಮೃದ್ಧವಾದ ಜಾನಪದ ಪರಂಪರೆ ಹೊಂದಿರುವ ಸಾಗರ ಜಾನಪದ ವಿವಿ ಸ್ಥಾಪಿಸಲು ಯೋಗ್ಯವಾದ ಸ್ಥಳವಾಗಿದೆ ಎಂದು ಸಾಹಿತಿ ಹಾಗೂ ಜಿಲ್ಲಾ ಹೋರಾಟ ಸಮಿತಿ ಗೌರವಾಧ್ಯಕ್ಷ ಡಾ.ನಾ. ಡಿಸೋಜ ಹೇಳಿದರು.ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಶಿಕಾರಿಪುರದಲ್ಲಿ ಜಾನಪದ ವಿವಿ ಸ್ಥಾಪನೆಗೆ ಮುಂದಾಗಿರುವ ವಿಷಯ ಪ್ರಸ್ತಾಪಿಸಿ ಇಲ್ಲಿನ ದೀವರು ಹಾಗೂ ಹವ್ಯಕರು ವಿಶಿಷ್ಟ ಜಾನಪದ ಸಂಸ್ಕೃತಿಯನ್ನು ಹೊಂದಿದ್ದು, ಈ ಪ್ರದೇಶವೇ ಜಾನಪದ ವಿವಿಗೆ ಸೂಕ್ತವಾಗಿದೆ ಎಂದರು.

ನಕ್ಸಲ್‌ನಿಗ್ರಹ ತರಬೇತಿ ಅಕಾಡೆಮಿಯನ್ನು ಶಿಕಾರಿಪುರದಲ್ಲಿ ಸ್ಥಾಪಿಸಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಈ ಕ್ರಮ ಹುಲಿಯೇ ಇಲ್ಲದ ಕಾಡಿನಲ್ಲಿ ಹುಲಿ ಹಿಡಿಯಲು ಬೋನು ಇಟ್ಟಂತಾಗಿದೆ ಎಂದು ಟೀಕಿಸಿದರು.ಸಾಗರ ತಾಲ್ಲೂಕಿಗೆ ಸಿಗಬೇಕಾದ ಅನೇಕ ಸವಲತ್ತುಗಳು ಶಿಕಾರಿಪುರಕ್ಕೆ ವರ್ಗವಾಗುತ್ತಿದ್ದು, ಈ ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಪಕ್ಕದಲ್ಲೇ  ಖಾಸಗಿ ಬಸ್‌ನಿಲ್ದಾಣ ನಿರ್ಮಿಸಬೇಕೆಂಬ ಸರಳ ವಿಚಾರಕ್ಕೂ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ವಿಷಾದದ ಸಂಗತಿ ಎಂದರು.

ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಯು.ಜೆ. ಮಲ್ಲಿಕಾರ್ಜುನ ಮಾತನಾಡಿ, ಸಾಗರ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಹೊಂದಿದೆ. ಒಂದು ವೇಳೆ ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ಮಾಡುವುದಾದರೆ ಸಾಗರಕ್ಕೆ ಮೊದಲ ಆದ್ಯತೆ ದೊರಕಬೇಕು. ಶೀಘ್ರದಲ್ಲೇ ಬ್ರಾಡ್‌ಗೇಜ್ ರೈಲಿನ ಸಂಚಾರ ಕೂಡ ಆರಂಭವಾಗಲಿರುವುದು ಜಿಲ್ಲಾ ಕೇಂದ್ರ ಸ್ಥಾಪನೆಗೆ ಪೂರಕ ವಾತಾವರಣ ಕಲ್ಪಿಸಿದಂತಾಗಿದೆ ಎಂದು ಹೇಳಿದರು.

ಶರಾವತಿ ಹಿನ್ನೀರಿನಿಂದ ನಗರಕ್ಕೆ ನೀರು ತರುವ ಯೋಜನೆ, ತುಮರಿ ಸೇತುವೆ ನಿರ್ಮಾಣ ಯೋಜನೆ ನೆನೆಗುದಿಗೆ ಬಿದ್ದಿದ್ದು ಈ ಸಂಬಂಧ ಸಮಿತಿ ಶೀಘ್ರದಲ್ಲೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ವಿಲಿಯಂ, ಡಿ. ದಿನೇಶ್, ನಟರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.