ಶಿವಮೊಗ್ಗ: ‘ಕುಳಿತ ತಕ್ಷಣ ಸೀಟು ಹರಿಯುತ್ತಾರೆ; ಸಿನಿಮಾ ಆರಂಭವಾಗುತ್ತಿದ್ದಂತೆ ಗುಟ್ಕಾ ಜಗಿದು ಅಲ್ಲೇ ಉಗಿಯುತ್ತಾರೆ. ಟಾಕೀಸಿನಲ್ಲೇ ಹೊಗೆ ಬಿಡುತ್ತಾರೆ. ತಿಂಡಿ–ತಿನಿಸಿನ ಪ್ಯಾಕೇಟ್ ಕಾಲು ಬುಡದಲ್ಲೇ ಬಿಸಾಕುತ್ತಾರೆ. ಎಷ್ಟೂಂತ ಸ್ವಚ್ಛ ಮಾಡಬೇಕು? ಹೇಗೆ ನಿರ್ವಹಣೆ ಮಾಡಬೇಕು ?’
–ಇದು ಶಿವಮೊಗ್ಗ ನಗರದ ಚಿತ್ರಮಂದಿರದ ಪ್ರತಿ ಮಾಲೀಕರು ಹೇಳುವ ಮಾತು. ‘ಪ್ರತಿ ವರ್ಷ ಪರವಾನಗಿ ಶುಲ್ಕ, ಸಿನಿಮಾ ಖರ್ಚು, ನಿರ್ವಹಣೆ ವೆಚ್ಚ ಎಲ್ಲಾ ಸೇರಿ ಕೊನೆಗೆ ಐದು ಪೈಸೆ ಕೂಡ ಉಳಿಯುವುದಿಲ್ಲ. ಆದಾಯ–ಖರ್ಚು ಸಮವಾದರೆ ನೆಮ್ಮದಿ. ಬಹಳಷ್ಟು ಸಲ ಇದು ಕೈಸುಟ್ಟುಕೊಳ್ಳುವ ವ್ಯವಹಾರ. ಹಾಗಾಗಿ, ಇಂದು ಬಹಳಷ್ಟು ಚಿತ್ರಮಂದಿರಗಳು ಕಲ್ಯಾಣ ಮಂಟಪಗಳಾಗಿವೆ. ಮತ್ತಷ್ಟು ವಾಣಿಜ್ಯ ಸಂರ್ಕಿರ್ಣಗಳಾಗಿ ಮಾರ್ಪಟ್ಟಿವೆ’ ಎಂದು ಹೇಳುವ ಚಿತ್ರಮಂದಿರದ ಮಾಲೀಕರ ಮಾತಿನಲ್ಲಿ ಸುಳ್ಳಿಲ್ಲ.
ಮೊದಲಾದರೆ ರೀಲು ಇರುತ್ತಿತ್ತು, ಈಗ ಉಪಗ್ರಹದಿಂದ ನೇರವಾಗಿ ಚಿತ್ರ ಬರುತ್ತದೆ. ಮಧ್ಯೆ–ಮಧ್ಯೆ ಕಟ್ಟಾಗುವುದು ಇರುವುದಿಲ್ಲ. ಆದರೂ, ಪ್ರೇಕ್ಷಕರು ಯಾಕೆ ಸೀಟು ಹರಿಯುತ್ತಾರೆ, ಕುರ್ಚಿ ಮುರಿಯುತ್ತಾರೆ ಎಂಬುದು ತಿಳಿಯು ತ್ತಿಲ್ಲ. ಇದಕ್ಕಾಗಿ ಕಾಯಂ ಆಗಿ ಕಾರ್ಪೆಟರ್‌ವೊಬ್ಬರನ್ನು ಇಟ್ಟು ವಾರಕ್ಕೆ ನಾಲ್ಕೈದು ಕುರ್ಚಿ ರಿಪೇರಿ ಮಾಡಿಸುತ್ತೇವೆ ಎನ್ನುತ್ತಾರೆ ಚಿತ್ರಮಂದಿರದ ಮಾಲೀಕರೊಬ್ಬರು.
ಗುಟ್ಕಾ ಮಾರಾಟ ಮಾಡಿದರೆ ಜೈಲು ಶಿಕ್ಷೆ ಇದೆ. ಆದರೆ, ತಿಂದರೆ ಯಾವ ಶಿಕ್ಷೆ ಇಲ್ಲವೇ? ಗುಟ್ಕಾ ಹಾವಳಿ ಯಿಂದಾಗಿ ಚಿತ್ರಮಂದಿರ ಗಳೆಲ್ಲವೂ ಇಂದು ಬಣ್ಣಗೆಟ್ಟು ಹೋಗಿವೆ. ಹಾಗೆಯೇ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಇದ್ದರೂ ಅದಕ್ಕೆ ದಂಡ ಹಾಕುವ ಅಧಿಕಾರ ನಮಗಿಲ್ಲ. ಗುಟ್ಕಾ ತಡೆಯುವ, ಧೂಮಪಾನ ನಿಷೇಧಿಸುವ ಅಧಿಕಾರ ಜಿಲ್ಲಾಧಿಕಾರಿ ಬಳಿ ಇದೆ. ಅವರು, ಯಾವ ತ್ತಾದರೂ ಟಾಕೀಸು ಕಡೆ ಮುಖ ಹಾಕಿದ್ದಾರಾ? ನಮಗೆ ಒಂದಿಷ್ಟು ಅಧಿಕಾರ ಕೊಟ್ಟರೆ ಸ್ವಲ್ಪ ಮಟ್ಟಿಗೆ ನಿಯಂತ್ರಣ ತರಬಹುದು ಎನ್ನುತ್ತಾರೆ ಮಾಲೀಕರೊಬ್ಬರು.
ಸಿನಿಮಾ ಟಾಕೀಸಿಗೆ ಬರುತ್ತಿದ್ದಂತೆ ಅದರ ಡಿ.ವಿ.ಡಿ.ಗಳು ಮಾರುಕಟ್ಟೆ ಯಲ್ಲಿ ಸಿಗುವ ವ್ಯವಸ್ಥೆ ಮತ್ತೇಕೆ ಬರುತ್ತಾರೆ? ಇದರ ನಿಯಂತ್ರಣಕ್ಕೆ ಸರ್ಕಾರ ಪ್ರಯತ್ನಿಸುತ್ತಿಲ್ಲ ಎಂಬ ದೂರು ಆ ಮಾಲೀಕರದ್ದು.
‘ಜಿಲ್ಲಾಡಳಿತದಿಂದ ನಾವು ಪ್ರತಿ ವರ್ಷ ಪರವಾನಗಿ ನವೀಕರಣ ಮಾಡಿಸಿಕೊಳ್ಳಬೇಕು. ಇದಕ್ಕಾಗಿ 8ರಿಂದ 10ಇಲಾಖೆಗಳನ್ನು ಸುತ್ತ ಬೇಕು. ಅಲ್ಲಿನ ಎಲ್ಲರಿಗೂ ‘ಮಾಮೂಲಿ’ ಕೊಡಬೇಕು. ಬೆಂಗಳೂರು–ಮೈಸೂರಿಗೆ ಒಂದೇ ರೇಟು, ಶಿವಮೊಗ್ಗಕ್ಕೂ ಅದೇ ರೇಟು. ಇದೇ ನಮಗೆ ವರ್ಷಕ್ಕೆ ₨1ಲಕ್ಷ ಹತ್ತಿರ ಖರ್ಚು ಬರುತ್ತದೆ. ಪ್ರತಿ ವರ್ಷದ ನವೀಕರಣದ ಬದಲು ಮೂರು ವರ್ಷಕ್ಕೊಮ್ಮೆ ಮಾಡಿದರೆ ನಾವು ಬದುಕಿಕೊಳ್ಳುತ್ತೇವೆ’ ಎಂಬ ಮಾತು ಮಾಲೀಕರದ್ದು.
‘ಪ್ರೇಕ್ಷಕರ ಬೇಡಿಕೆಗೆ ಅನುಗುಣವಾಗಿಯೇ ₨30ಲಕ್ಷ ಖರ್ಚು ಮಾಡಿ ಡಿಟಿಎಸ್ ಹಾಕಿಸಿದ್ದೇವೆ. ಹೊಸ ಕುರ್ಚಿ ಹಾಕಿಸಲು ₨25ಲಕ್ಷ ಖರ್ಚಾಗಿದೆ. ಸಿನಿಮಾ ಪರದೆ ಹಿಂದಿನ ಬಲ್ಬ್‌ಗೆ ವರ್ಷಕ್ಕೆ ₨1.50ಲಕ್ಷ ಬಂಡವಾಳ ಸುರಿಯಬೇಕು. ವಿದ್ಯುತ್ ಬಿಲ್ ಲಕ್ಷ ರೂಪಾಯಿ ಮುಟ್ಟುತ್ತೆ. ಈ ಎಲ್ಲಾ ಸವಾಲುಗಳ ಮಧ್ಯೆ ಸಿನಿಮಾ ಮಂದಿರ ನಡೆಸುವುದೇ ಸಾಹಸದ ಮಾತು. ಕುಟುಂಬದ ಉದ್ಯಮ, ಪ್ರತಿಷ್ಠೆ ಪ್ರಶ್ನೆ ಮತ್ತಿತರ ಕಾರಣಗಳಿಗಾಗಿ ಈ ಚಿತ್ರಮಂದಿರ ಇಟ್ಟುಕೊಳ್ಳಬೇಕೇ ಹೊರತು ಬೇರೆ ಕಾರಣಗಳಿಗಲ್ಲ’ ಎಂದು ನೋವಿನಿಂದ ನುಡಿಯುತ್ತಾರೆ ಎಚ್‌ಪಿಸಿ ಟಾಕೀಸಿನ ವ್ಯವಸ್ಥಾಪಕ ಶಿವಪ್ರಸಾದ್.
‘ರಾಜ್ಯದಲ್ಲಿ ಸೇವಾ ತೆರಿಗೆಯಲ್ಲಿ ₨2ನ್ನು ಟಾಕೀಸಿನವರಿಗೆ ಸಿಗುತ್ತದೆ. ಮಹಾರಾಷ್ಟ್ರದಲ್ಲಿ ₨7ರಿಂದ8 ಇದೆ. ಇದೇ ರೀತಿ ನಮ್ಮ ರಾಜ್ಯದಲ್ಲೂ ಸೇವಾ ತೆರಿಗೆ ಹೆಚ್ಚು ಮಾಡಬೇಕು. ವಿದ್ಯುತ್ ದರ ಕಡಿಮೆ ಮಾಡಬೇಕು. ಈ ಕ್ರಮಕೈಗೊಂಡರೆ ಟಾಕೀಸು ಇಟ್ಟುಕೊಂಡವರು ಬದುಕಬಹುದು’ ಎನ್ನುತ್ತಾರೆ ಜಿಲ್ಲಾ ಚಿತ್ರಪ್ರದರ್ಶಕರ ಸಂಘದ ಅಧ್ಯಕ್ಷ ಪಂಚಾಕ್ಷರಿ.
ಈಗ ಒಳ್ಳೆಯ ಚಿತ್ರಗಳೇ ಬರುತ್ತಿಲ್ಲ; ಹಿಂದಿನಂತೆ ಇಡೀ ಕುಟುಂಬ ನೋಡುವ, ಉತ್ತಮ ಅಭಿರುಚಿ ಇರುವ ಚಿತ್ರ ನಿರ್ಮಾಣವನ್ನೇ ಚಿತ್ರ ರಂಗ ಕೈ ಬಿಟ್ಟಿದೆ. ಹಾಗಾಗಿ, ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರುವುದಿಲ್ಲ. ಮುಖ್ಯವಾಗಿ ಜನ ಚಿತ್ರಮಂದಿರ ಗಳತ್ತ ಬರುವ ಹಾಗೆ ನೋಡಿಕೊಳ್ಳಬೇಕು’ ಎನ್ನುತ್ತಾರೆ ಲಕ್ಷ್ಮೀ ಚಿತ್ರಮಂದಿರದ ವ್ಯವಸ್ಥಾಪಕ ವಿಶ್ವನಾಥ್. (ನಾಳೆ: ಮಿನಿ ಥಿಯೇಟರ್ ಎಂಬ ಮಾಯಾಂಗನೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.