ADVERTISEMENT

ಸ್ಮಶಾನ ಜಾಗ ಸ್ಥಳಾಂತರಕ್ಕೆ ಸಂಘಟನೆಗಳ ವಿರೋಧ

ಸಾಗರ: ಕಂದಾಯ ಅಧಿಕಾರಿಗಳ ಕ್ರಮಕ್ಕೆ ಆಕ್ರೋಶ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 10:51 IST
Last Updated 25 ಜೂನ್ 2013, 10:51 IST

ಸಾಗರ: ವಿವಿಧ ಸಮುದಾಯಗಳಿಗೆ ಸ್ಮಶಾನ  ನಿರ್ಮಿಸುವ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಯಳವರಸಿ ಗ್ರಾಮದಲ್ಲಿರುವ ಪ್ರದೇಶದ ಬದಲಾಗಿ ಜಂಬಗಾರು ಗ್ರಾಮದಲ್ಲಿ ಸ್ಥಳ ಗುರುತಿಸಲು ಮುಂದಾಗಿರುವ ಕಂದಾಯ ಇಲಾಖೆಯ ಅಧಿಕಾರಿಗಳ ನಡೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳ ಪ್ರಮುಖರು ಸೋಮವಾರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ನಗರಸಭಾ ಸದಸ್ಯ ಜಂಬಗಾರು ರವಿ ಮಾತನಾಡಿ, 2008ನೇ ಸಾಲಿನಲ್ಲಿ ಯಳವರಸಿ ಗ್ರಾಮದಲ್ಲಿ 10ಎಕರೆ ಭೂಮಿಯನ್ನು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರಿಗೆ ಸ್ಮಶಾನ ನಿರ್ಮಿಸಲು ಮಂಜೂರು ಮಾಡಲಾಗಿದೆ. ಈಗ ಈ ಸ್ಥಳದ ಬದಲಾಗಿ ಜಂಬಗಾರು ಗ್ರಾಮದಲ್ಲಿ ಸ್ಮಶಾನ ನಿರ್ಮಿಸಲು ಅಧಿಕಾರಿಗಳು ಮುಂದಾಗಿರುವುದರ ಹಿಂದೆ ಭೂ ಮಾಫಿಯಾದ ಕೈವಾಡವಿದೆ ಎಂದು ಆರೋಪಿಸಿದರು.

ಈಗಾಗಲೇ ಜಂಬಗಾರು ಗ್ರಾಮದಲ್ಲಿ ವಿವಿಧ ಉದ್ದೇಶಗಳಿಗೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿದ್ದು, ಸ್ಮಶಾನ ನಿರ್ಮಿಸಲು ಯಳವರಸಿ ಗ್ರಾಮದ ಭೂಮಿಯನ್ನೇ ಬಳಸಿಕೊಳ್ಳಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಉಪ ವಿಭಾಗಾಧಿಕಾರಿ ಡಾ. ಬಿ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಯಾವುದೇ ಕಾರಣಕ್ಕೂ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದವರಿಗೆ ರಕ್ಷಣೆ ನೀಡುವುದಿಲ್ಲ. ಈ ಸಂಬಂಧ ಕಡತ ಪರಿಶೀಲಿಸಿ ಕಾನೂನಿನ ಪ್ರಕಾರ ಕ್ರಮ ಜರುಗಿಸುವುದಾಗಿ ಹೇಳಿದರು.

ನಗರಸಭಾ ಸದಸ್ಯೆ ಮರಿಯಾ ಲೀಮಾ, ಮಾಜಿ ಉಪಾಧ್ಯಕ್ಷೆ ವಂದನಾ ಶ್ರೀನಿವಾಸ್, ಮಾಜಿ ಸದಸ್ಯ ಡಿ.ಎಸ್. ಸುಧೀಂದ್ರ, ಸುಮನಾ ಗೋಮ್ಸ, ವಿಶ್ವಹಿಂದೂ ಪರಿಷತ್ತಿನ ಐ.ವಿ.ಹೆಗಡೆ, ಬಾಲಕೃಷ್ಣ ಗುಳೇದ್, ಬಿಜೆಪಿಯ ಕೆ.ವಿ. ಪ್ರವೀಣ್, ರವೀಶ್ ಕುಮಾರ್, ಕೆಜೆಪಿಯ ಪ್ರತಾಪ್, ರಾಮಣ್ಣ ಗಾಣಿಗ, ಕ್ರೈಸ್ತ ಸಮುದಾಯದ  ರೋನಾಲ್ಡೋ, ಮೈಕಲ್ ಡಿಸೋಜಾ, ಅವಿನಾಶ್ ಗೋಮ್ಸ, ಪ್ರಾಂಕಿ ಲೋಬೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.