ADVERTISEMENT

ಸ್ಮಾರ್ಟ್‌ ಸಿಟಿ ಮಾಹಿತಿ ಪ್ರಕಟಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 6:00 IST
Last Updated 5 ಡಿಸೆಂಬರ್ 2017, 6:00 IST

ಶಿವಮೊಗ್ಗ : ಸ್ಮಾರ್ಟ್‌ ಸಿಟಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಸದಸ್ಯರು ಮಹಾನಗರ ಪಾಲಿಕೆ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.

ನಾಗರಿಕರು ಹಾಗೂ ವಿದ್ಯಾರ್ಥಿಗಳ ಸಲಹೆಗಳನ್ನು ಕ್ರೊಢೀಕರಿಸಿ ಪರಿಷ್ಕೃತ ವರದಿಯನ್ನು ತಯಾರಿಸಿದ ನಂತರ ಎರಡನೆಯ ಹಂತದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಶಿವಮೊಗ್ಗ ಆಯ್ಕೆಯಾಗಿದೆ. ಆದರೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯ ಅಂತಿಮ ರೂಪುರೇಷೆಗಳ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರಿದರು.

ಶಿವಮೊಗ್ಗದ ಅರ್ಧಕ್ಕಿಂತ ಹೆಚ್ಚು ವಾರ್ಡ್‌ಗಳು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸೇರ್ಪಡೆಯಾಗಿಲ್ಲ. ವಾರ್ಡ್‌ಗಳ ಆಯ್ಕೆ ಹಾಗೂ ಉದ್ಯಾನ, ಕೆರೆ, ಆಟದ ಮೈದಾನ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಕೇಳದೆ ಅಂತಿಮಗೊಳಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಪ್ರಥಮ ಹಂತದ ಅಭಿವೃದ್ಧಿಯಲ್ಲಿ ಪ್ರಭಾವಿ ಜನಪ್ರತಿನಿಧಿಗಳ ಕ್ಷೇತ್ರದ ಉದ್ಯಾನಗಳ ಆಯ್ಕೆಯ ಹಿಂದೆ ರಾಜಕೀಯ ಷಡ್ಯಂತ್ರವೇ ಅಡಗಿದೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ದೂರಿದರು.

ADVERTISEMENT

ಕೇವಲ ಕೆಲವು ವಾರ್ಡ್‌ಗಳಿಗೆ ಸೀಮಿತವಾಗಿರುವ ಈ ಯೋಜನೆಯನ್ನು ಶಿವಮೊಗ್ಗ ಸ್ಮಾರ್ಟ್‌ ಸಿಟಿ ಯೋಜನೆ ಎಂದು ನಾಮಕರಣ ಮಾಡಿ ನಾಗರಿಕರಿಗೆ ವಂಚಿಸುತ್ತಿರುವುದು ಖಂಡನೀಯ. ಶೀಘ್ರವೇ ಯೋಜನೆಗೆ ಸಂಬಂಧಿಸಿದಂತೆ ವಾರ್ಡ್‌ಗಳ ಆಯ್ಕೆಯ ವಿಧಾನ ಮತ್ತು ಸಂಪೂರ್ಣ ವರದಿಯನ್ನು ಬಹಿರಂಗಪಡಿಸಬೇಕು. ಕೈಬಿಟ್ಟಿರುವ ವಾರ್ಡ್‌ಗಳ ಅಭಿವೃದ್ಧಿ ಹೇಗೆ ಎಂಬುದನ್ನು ತಿಳಿಸಬೇಕು ಎಂದು ಮನವಿದಾರರು ಒತ್ತಾಯಿಸಿದರು. ಸಮಿತಿಯ ಪ್ರಮುಖರಾದ ಅಶೋಕ್ ಯಾದವ್, ಬಾಬುರಾವ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.