ADVERTISEMENT

ಹೊಸನಗರ: ಉಪಾಧ್ಯಕ್ಷೆಯಾಗಿ ಗೀತಾ ಆಯ್ಕೆ

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 6:03 IST
Last Updated 27 ಡಿಸೆಂಬರ್ 2012, 6:03 IST

ಹೊಸನಗರ: ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚುನಾವಣೆಯಲ್ಲಿ ಬಂಡಾಯ ಬಿಜೆಪಿ ಅಭ್ಯರ್ಥಿಗಳ ಬೆಂಬಲ ಪಡೆದ ಕಾಂಗ್ರೆಸ್‌ನ ಗೀತಾ ನಿಂಗಪ್ಪ 3 ಮತದ ಅಂತರದಿಂದ ಜಯಗಳಿಸಿದರು.

ಅಧ್ಯಕ್ಷ ಗಾದಿಯ ಚುನಾವಣೆಗೆ ಸದಸ್ಯ ವೀರೇಶ್ ಆಲುವಳ್ಳಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಬುಧವಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಉಪಾಧ್ಯಕ್ಷ ಚುನಾವಣೆಯನ್ನು ಉಪ ವಿಭಾಗಾಧಿಕಾರಿ ಡಾ.ಪ್ರವೀಣ್‌ಕುಮಾರ್ ನಡೆಸಿದರು.

ಒಟ್ಟು 11 ಸದಸ್ಯರಲ್ಲಿ  ಅಧಿಕೃತವಾಗಿ ಬಿಜೆಪಿ 8, ಕಾಂಗ್ರೆಸ್-3 ಇದ್ದಾರೆ. ಆದರೆ, ಕೆಜೆಪಿ-ಬಿಜೆಪಿ ಒಳಜಗಳದ ಸಂಪೂರ್ಣ ಲಾಭವನ್ನು ಅಲ್ಪಮತ ಇರುವ ಕಾಂಗ್ರೆಸ್ ಪಡೆಯುವಲ್ಲಿ ಯಶಸ್ವಿಯಾಯಿತು.

ಗೀತಾ ನಿಂಗಪ್ಪ ಅವರಿಗೆ ಕಾಂಗ್ರೆಸ್‌ನ 3 ಮತ ಹಾಗೂ ಬಂಡಾಯ ಬಿಜೆಪಿ 3 ಮತ ಸೇರಿ 6 ಮತ ಪಡೆದರೆ ಎದುರಾಳಿ ಬಿಜೆಪಿಯ ಈ ಹಿಂದಿನ ಅವಧಿಗೆ ಉಪಾಧ್ಯಕ್ಷರಾಗಿದ್ದ ಶಾಂತಾ ಶೇಖರಪ್ಪ ಇವರಿಗೆ 3 ಮತ ಮಾತ್ರ ಲಭಿಸಿತು.

ಕೆಜೆಪಿಯಲ್ಲಿ ಗುರುತಿಸಿಕೊಂಡಿರುವ ನಿಕಟಪೂರ್ವ ಅವಧಿಯ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಹಾಗೂ ಸದಸ್ಯೆ ಜಯಲಕ್ಷ್ಮೀ ವೆಂಕಟೇಶಾಚಾರ್ ಚುನಾವಣೆಗೆ ಗೈರು ಹಾಜರಾಗಿದ್ದರು.

ಫೈಲ್ ಹರಿದ ಪ್ರಕರಣ: ಈ ಹಿಂದೆ ನಡೆದ ಅಧ್ಯಕ್ಷ-ಉಪಾಧ್ಯಕ್ಷೆ ಚುನಾವಣೆ ಸಂದರ್ಭದಲ್ಲಿ  ವೀರೇಶ್ ಆಲುವಳ್ಳಿ ಅವರು ನಾಗರತ್ನಾ ದೇವರಾಜ್‌ರ ಜಾತಿ ಪ್ರಮಾಣಪತ್ರದ ಫೈಲ್ ಹರಿದಿರುವ ಬಗ್ಗೆ ಹಾಗೂ ನಾಗರತ್ನಾ ದೇವರಾಜ್ ಇವರು ಚುನಾವಣಾ ಅಧಿಕೃತ ಘೋಷಣೆಯ ಸಂಪೂರ್ಣ ಫೈಲನ್ನು ಹರಿದಿರುವ ಕುರಿತಂತೆ ದೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಾದ ಹಿನ್ನೆಲೆಯಲ್ಲಿ ಪುನಃ ಇಂದು ಚುನಾವಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.