ADVERTISEMENT

ಹೋಳಿ: ಬಣ್ಣದಲ್ಲಿ ಮಿಂದೆದ್ದ ಮಂದಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 9:25 IST
Last Updated 21 ಮಾರ್ಚ್ 2011, 9:25 IST
ಹೋಳಿ: ಬಣ್ಣದಲ್ಲಿ ಮಿಂದೆದ್ದ ಮಂದಿ
ಹೋಳಿ: ಬಣ್ಣದಲ್ಲಿ ಮಿಂದೆದ್ದ ಮಂದಿ   

ಶಿವಮೊಗ್ಗ: ಸಾಮರಸ್ಯದ ಸಂಕೇತ ಹೋಳಿ ಹಬ್ಬವನ್ನು ಭಾನುವಾರ ಜಿಲ್ಲೆಯಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.   ಹಬ್ಬದ ಅಂಗವಾಗಿ ನಗರದಲ್ಲಿ ಮಕ್ಕಳಿಂದ ಹಿಡಿದು ಯುವಕ-ಯುವತಿಯರು, ಹಿರಿಯ ನಾಗರಿಕರು ಸೇರಿದಂತೆ ಪ್ರತಿಯೊಬ್ಬರು ಬಣ್ಣದಲ್ಲಿ ಮಿಂದೆದ್ದರು. ರಂಗು-ರಂಗಿನ ಹಬ್ಬ ಅಕ್ಷರಶಃ ಬಣ್ಣದ ಲೋಕವನ್ನು ಸೃಷ್ಟಿಸಿತ್ತು.

ವಯಸ್ಸಿನ ಮಿತಿಯಿಲ್ಲದೇ ಎಲ್ಲರೂ ಬಣ್ಣಮಯವಾಗಿದ್ದು, ಕಂಡುಬಂತು. ದಾರಿಯಲ್ಲಿ ಹೋಗುವವರನ್ನು ತಡೆದು ಮಕ್ಕಳು, ಯುವಕ-ಯುವತಿಯರು ಬಣ್ಣ ಎರಚಿ ಸಂಭ್ರಮಿಸಿದರು.

ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಂಟು ಹಾಗೂ ಒಂಬತ್ತನೇ ತರಗತಿ ಮಕ್ಕಳಿಗೆ ಮಾರ್ಚ್ 21ರಿಂದ ಪರೀಕ್ಷೆ ಆರಂಭವಾಗುತ್ತವೆ. ಆದರೂ, ಮಕ್ಕಳ ಉತ್ಸಾಹಕ್ಕೆ ಇದು ಅಡೆತಡೆಯಾಗಲಿಲ್ಲ.

ಬೆಳಿಗ್ಗೆಯೇ ಬೈಕ್ ಏರಿ, ಕೈಯಲ್ಲಿ ವಿವಿಧ ಬಣ್ಣದ ಪ್ಯಾಕೆಟ್‌ಗಳನ್ನು ಹಿಡಿದುಕೊಂಡ ಪಡ್ಡೆ ಹುಡುಗರ ತಂಡಗಳು ತಮ್ಮ ಸ್ನೇಹಿತರು, ಪರಿಚಿತರಿಗೆ ಬಣ್ಣ ಎರಚಿದರು. ಅಲ್ಲಲ್ಲಿ ಯುವಕರು ತಲೆಗೆ ಮೊಟ್ಟೆಗಳನ್ನು ಒಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರಮುಖ ವೃತ್ತಗಳಲ್ಲಿ ಬಣ್ಣದಲ್ಲಿ ಮಿಂದೆದ್ದ ಯುವಕರು-ಯುವತಿಯರು ಚಿತ್ರಗೀತೆಗಳಿಗೆ ಕುಣಿದು ಕುಪ್ಪಳಿಸಿದರು. 

ನಗರದ ಗಾಂಧಿ ಬಜಾರ್, ನೆಹರು ರಸ್ತೆ, ಸವಾರ್‌ಲೈನ್ ರಸ್ತೆ, ದುರ್ಗಿಗುಡಿ ಸೇರಿದಂತೆ ವಿವಿಧೆಡೆ ಮಡಕೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಹುಡುಗರು ಒಬ್ಬರ ಮೇಲೊಬ್ಬರ ಹೆಗಲೇರಿ ಮಡಕೆ ಒಡೆದು ಸಂಭ್ರಮಿಸಿದರು. ಕೆಲ ರಸ್ತೆಗಳಲ್ಲಿ ಮನ್ಮಥನ ಪ್ರತಿಷ್ಠಾಪನೆ ಮಾಡಿ, ಮಧ್ಯಾಹ್ನದ ನಂತರ ದಹನ ಮಾಡಲಾಯಿತು. 

ಬೈಕ್‌ಗಳ ಕಿರಿಕಿರಿ: ಆದರೆ, ಯುವಕರು, ಗುಂಪು ಗುಂಪಾಗಿ ಬೈಕ್‌ಗಳಲ್ಲಿ ಓಡಾಡುತ್ತಾ, ‘ಕಿರ್’ ಎಂದು ಅರಚುತ್ತಾ ಅವು ಮಾಡಿದ ಸದ್ದು, ಇಡೀ ರಸ್ತೆಯನ್ನೆಲ್ಲಾ ಆಕ್ರಮಿಸಿಕೊಂಡುಅವು ಹೋಗುತ್ತಿದ್ದ ರೀತಿ ಮಾತ್ರ ಹಲವರಿಗೆ ಕಿರಿಕಿರಿ ಮಾಡಿದವು.

ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಹಬ್ಬದಲ್ಲಿ ಪಾಲ್ಗೊಂಡವರ ಸಂಖ್ಯೆ ಕಡಿಮೆ. ಹಾಗೆಯೇ, ಮಧ್ಯಾಹ್ನದ ಹೊತ್ತಿಗೆ ಹಬ್ಬದ ಸಂಭ್ರಮ ಬಹುತೇಕ ಮುಗಿದಿತ್ತು. ಶಾಂತಿ-ಸುವ್ಯವಸ್ಥೆ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.