ADVERTISEMENT

‘ಕಾವ್ಯದ ಅಭಿವ್ಯಕ್ತಿಯಲ್ಲಿ ಪ್ರಾಮಾಣಿಕತೆ ಇರಲಿ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 6:29 IST
Last Updated 1 ಜನವರಿ 2014, 6:29 IST

ಸಾಗರ: ಕಾವ್ಯದ ಅಭಿವ್ಯಕ್ತಿಯಲ್ಲಿ ಎಲ್ಲಿ ಪ್ರಾಮಾಣಿಕತೆ ಇದೆಯೊ ಅದನ್ನೇ ಶ್ರೇಷ್ಠ ಕಾವ್ಯ ಎನ್ನಬಹುದು ಎಂದು ಕವಿ ಹಾಗೂ ಸಂಸ್ಕೃತಿ ಚಿಂತಕ ಲಕ್ಷ್ಮೀಪತಿ ಕೋಲಾರ ಹೇಳಿದರು.

ಪರಸ್ಪರ ಸಾಹಿತ್ಯ ವೇದಿಕೆ ಈಚೆಗೆ  ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ ಅವರ ‘ಅಕ್ಕ’ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾವ್ಯದ ಮಾಂತ್ರಿಕತೆ ಹಿಡಿಯುವುದು ಕಷ್ಟ, ಆದರೆ, ಅದನ್ನು ಅನುಭವಿಸಬಹುದಷ್ಟೇ ಎಂದರು.

ಕವಿ ಪೂರ್ತಿಯಾಗಿ ತನ್ನ ಅನುಭವಗಳಿಗೆ ತೆರೆದುಕೊಳ್ಳದ ಹೊರತು ಸಮರ್ಥ ಕಾವ್ಯದ ಅಭಿವ್ಯಕ್ತಿ ಸಾಧ್ಯವಿಲ್ಲ. ‘ಅಕ್ಕ’ ಕವನ ಸಂಕಲನದಲ್ಲಿ ಆಡಂಬರದ ಭಾಷೆ ಇಲ್ಲದೆ ಅಭಿವ್ಯಕ್ತಿಯಲ್ಲಿ ಪ್ರಾಮಾಣಿಕತೆ ಇರುವುದನ್ನು ಗುರುತಿಸಬಹುದು ಎಂದು ಹೇಳಿದರು.

‘ಅಕ್ಕ’ ಕೃತಿ ಕುರಿತು ವಿಮರ್ಶಕ ಡಾ.ಎಸ್.ನಟರಾಜ ಬೂದಾಳು ಮಾತನಾಡಿ ಅಕ್ಕಮಹಾದೇವಿ, ಅಲ್ಲಮಪ್ರಭು ಅವರ ವಚನಗಳು ಈ ಕಾಲದಲ್ಲೂ ಗಟ್ಟಿಯಾಗಿ ‘ಧ್ವನಿಸುವ’ ಗುಣವನ್ನು ಒಳಗೊಂಡಿವೆ. ವೈಯಕ್ತಿಕ ಸಂಕಟಗಳ ನೆಲೆಯಲ್ಲಿ ಲೋಕದ ಸಂಕಟಗಳಿಗೆ ಮುಖಾಮುಖಿಯಾದ ದರ್ಶನ ಮತ್ತು ತಾತ್ವಿಕತೆ ಅಕ್ಕಮಹಾದೇವಿಯಲ್ಲಿ ಕಾಣಬಹುದು. ಇವುಗಳಿಗೆ ಸಂವಾದಿಯಂತೆ ‘ಅಕ್ಕ’ ಕೃತಿಯ ಕವನಗಳು ಕಾಣುತ್ತವೆ ಎಂದರು.

ಲೋಕದ ಹಂಗನ್ನು ಕಳೆದುಕೊಂಡು ತಾನೇ ಒಂದು ಲೋಕವಾದ ಅಕ್ಕಮಹಾದೇವಿಗೆ ಭಾಷೆ, ಸಂಗೀತ, ಸಂಬಂಧ ಇವುಗಳೆಲ್ಲಾ ಒಂದು ಉಪಾಧಿಯಾಗಿವೆ. ಹೆಣ್ಣಿಗೆ ದೇಹ ಸಂಭ್ರಮಕ್ಕೆ ಕಾರಣವಾಗುವ ವಸ್ತುವಿನ ಜೊತೆಗೆ ಸಂಕಟಕ್ಕೆ ಕಾರಣವಾಗುವ ವಸ್ತು ಕೂಡ ಹೌದು ಎಂಬ ದರ್ಶನ ಅಕ್ಕಮಹಾದೇವಿಯಿಂದ ಆಗಿದೆ. ಅಕ್ಕನ ‘ಅವಸ್ಥೆ’ಯಲ್ಲಿ ಮಾತನಾಡುವುದು ಈ ಕಾಲದ ಕವಿಗಳಿಗೆ ಕಷ್ಟ. ಆಕೆಯ ಕುರಿತ ಕಾವ್ಯ ಅಕ್ಕನ ಮುಂದೆ ನಿಂತು ಕಾಣುವ ಬಿಂಬ ಕಾವ್ಯವಷ್ಟೆ ಆಗಬಲ್ಲದು ಎಂದು ಹೇಳಿದರು.

ಪರಸ್ಪರ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಸರ್ಫ್ರಾಜ್‌ ಚಂದ್ರಗುತ್ತಿ ಅಧ್ಯಕ್ಷತೆ ವಹಿಸಿದ್ದರು. ಬಿಡುಗಡೆಯಾದ ಕೃತಿಯ ಲೇಖಕ ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ, ನೇಕಾರ ಪ್ರಕಾಶನದ ರಾಮಕೃಷ್ಣ, ಡಾ.ಹಾ.ಉಮೇಶ್‌ ಸೊರಬ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.