ADVERTISEMENT

‘ಗುರು ಪರಂಪರೆ ಕುರುಡಾಗಿ ಅನುಸರಿಸದ ಜಿಎಸ್ಎಸ್’

ಜಿ.ಎಸ್‌ ಶಿವರುದ್ರಪ್ಪ ನೆನಪು ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2014, 9:26 IST
Last Updated 23 ಜನವರಿ 2014, 9:26 IST

ಭದ್ರಾವತಿ:  ಜಿ.ಎಸ್ ಶಿವರುದ್ರಪ್ಪ ಅವರು ಪರಂಪರೆಯಲ್ಲಿ ನಂಬಿಕೆ ಇಟ್ಟವರು. ಆದರೆ, ಗುರು ಪರಂಪರೆಯನ್ನು ಕುರುಡಾಗಿ ಅನುಕರಣೆ ಮಾಡಿದವರಲ್ಲ’ ಎಂದು ಹಿರಿಯ ಕವಿ ಸತ್ಯನಾರಾಯಣ ಅಣತಿ ಹೇಳಿದರು. ಇಲ್ಲಿನ ಸರ್‌ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಶಿವಮೊಗ್ಗ ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ಜಿಎಸ್‌ಎಸ್‌ ನೆನಪು ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಯಾವ ಪಂಥವನ್ನು ಅವಲಂಬಿಸದೆ ತಮ್ಮದೇ ದಾರಿಯಲ್ಲಿ ಮುನ್ನಡೆದ ಜಿಎಸ್‌ಎಸ್‌ ಸಾಹಿತ್ಯವನ್ನು ಪ್ರತಿಬಿಂಬ ಎಂದು ಪ್ರತಿಪಾದಿಸದೆ, ಅದನ್ನು ಗತಿಬಿಂಬ ಎಂದು ಕರೆದವರು. ಅವರ ವ್ಯಕ್ತಿತ್ವ ಸಹ ಒಟ್ಟು ಪರಂಪರೆ ಬೆಳೆಸುವಂಥದ್ದು ಎಂದು ಸ್ಮರಿಸಿದರು.

ಪ್ರಾಸ್ತಾವಿಕ ಮಾತನಾಡಿದ ಡಾ. ಸಬಿತಾ ಬನ್ನಾಡಿ ‘ಮಾನವೀಯ ಕಳಕಳಿಯ ಕಾವ್ಯವನ್ನು ಕನ್ನಡ ಬೌದ್ಧಿಕ ಲೋಕ ವಿಸ್ತರಿಸುವ ಸಂಸ್ಕೃತ, ಪಾಶ್ಚಾತ್ಯ ಮೀಮಾಂಸೆ ವಿಮರ್ಶೆಗಳನ್ನು ಕನ್ನಡಿಸಿ, ಕನ್ನಡದ್ದೇ ಹೆದ್ದಾರಿ ನಿರ್ಮಿಸುವ ಹೆಗ್ಗುರಿ ಜಿಎಸ್‌ಎಸ್‌ ಅವರದಾಗಿತ್ತು’ ಎಂದರು.
ಪ್ರಾಂಶುಪಾಲ ಎಚ್‌.ಆರ್‌. ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಿದ್ದರು. ಡಿ.ಎಸ್‌. ನಾಗಭೂಷಣ ಉಪಸ್ಥಿತರಿದ್ದರು. ಅನುಪಮಾ ಸ್ವಾಗತಿಸಿದರು, ಎಸ್‌.ಕೆ. ಸಾವಿತ್ರಿ ನಿರೂಪಿಸಿದರು, ಮಯೂಬ್ ವಂದಿಸಿದರು.

ಉದ್ಘಾಟನೆ ನಂತರ ನಡೆದ  ’ಆಧುನಿಕ ಕನ್ನಡ ಸಾಹಿತ್ಯ ಪರಂಪರೆ ಮತ್ತು ಜಿಎಸ್‌ಎಸ್‌’ ಕುರಿತಾಗಿ ಚಿಂತಕ ಡಿ.ಎಸ್‌. ನಾಗಭೂಷಣ, ‘ಕನ್ನಡ ಕಾವ್ಯ ಮೀಮಾಂಸೆಗೆ ಜಿಎಸ್‌ಎಸ್ ಕೊಡುಗೆ’ ವಿಷಯವಾಗಿ ತಾರಿಣಿ ಶುಭದಾಯಿನಿ ಮಾತನಾಡಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಸತ್ಯನಾರಾಯಣ ಅಣತಿ, ಸವಿತಾ ನಾಗಭೂಷಣ, ತಾರಿಣಿ ಶುಭದಾಯಿನಿ, ಸಬಿತಾ ಬನ್ನಾಡಿ, ದೀಪ್ತಿ ಭದ್ರಾವತಿ, ವಿದ್ಯಾರ್ಥಿಗಳಾದ ಸತೀಶ, ಅನುಪಮ, ರವಿಕುಮಾರ್, ಗಿರೀಶ್ ಕವನ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.