ADVERTISEMENT

‘ಬದಲಾವಣೆಯ ಹರಿಕಾರ ನಾರಾಯಣ ಗುರು’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 5:50 IST
Last Updated 24 ಸೆಪ್ಟೆಂಬರ್ 2013, 5:50 IST

ಸಾಗರ: ಹಿಂದುಳಿದ ವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತಂದ ಮಹಾನುಭಾವರಲ್ಲಿ ನಾರಾಯಣ ಗುರುಗಳು ಕೂಡ ಒಬ್ಬರು ಎಂದು ಸೋಲೂರು ಆರ್ಯ ಈಡಿಗ ಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆನಂದಪುರಂನಲ್ಲಿ ಜಿಲ್ಲಾ ಆರ್ಯ ಈಡಿಗರ ಸಮಾಜ ನಾರಾಯಣ ಗುರುಗಳ ಜನ್ಮದಿನಾಚರಣೆ ಸಂಬಂಧ ಗುರುವಾರ ಏರ್ಪಡಿಸಿದ್ದ ಪೂರ್ವಭಾವಿಸಭೆಯಲ್ಲಿ ಮಾತನಾಡಿದ ಅವರು ನಾರಾಯಣ ಗುರುಗಳು ವೈಚಾರಿಕ ಚಿಂತನೆಯ ಮೂಲಕ ಸಾಮಾಜಿಕ ಬದಲಾವಣೆ ತಂದ ದಾರ್ಶನಿಕ ಎಂದರು.

ಒಂದು ವರ್ಗದ ಜನರನ್ನು ಕೀಳು ದೃಷ್ಟಿಕೋನದಿಂದ ಸಮಾಜವು ನೋಡುತ್ತಿದ್ದ ಕಾಲದಲ್ಲಿ ದೇವರು, ಧರ್ಮದ ವಿಷಯದಲ್ಲಿ ಬೇಧಭಾವ ಮಾಡುವುದು ಸರಿಯಲ್ಲ ಎಂಬುದನ್ನು ಪ್ರತಿಪಾದಿಸಿದ ನಾರಾಯಣ ಗುರುಗಳು ಜನರಲ್ಲಿ ಮೂಡಿಸಿದ ಸಾಮಾಜಿಕ ಅರಿವು ಅನನ್ಯವಾದದ್ದು ಎಂದು ಹೇಳಿದರು.

ಕನಕ ಜಯಂತಿ, ವಾಲ್ಮೀಕಿ ಜಯಂತಿ ಮೊದಲಾದ ಆಚರಣೆಗಳಿಗೆ ನೀಡುವಷ್ಟೆ ಮಹತ್ವವನ್ನು ನಾರಾಯಣ ಗುರುಗಳ ಜನ್ಮದಿನ ಆಚರಣೆಗೂ ನೀಡಬೇಕು. ಅ.20ರಂದು ನಾರಾಯಣ ಗುರುಗಳ ಜನ್ಮದಿನ ಆಚರಿಸಲಾಗುತ್ತಿದ್ದು ಅದರ ಅಂಗವಾಗಿ ಜಿಲ್ಲೆಯಾದ್ಯಂತ ರಥಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಬಿ.ಸ್ವಾಮಿರಾವ್, ಬಿ.ನಾಗರಾಜ್, ಅಣ್ಣಪ್ಪ ಶಿವಗಂಗೆ, ಅಶೋಕ್ ಕುಮಾರ್, ಗುಣಸೆ ರಾಮಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.