ADVERTISEMENT

ರೈತನ ಮನೆ ಜಫ್ತಿ; ಬ್ಯಾಂಕ್‌ಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 14:39 IST
Last Updated 16 ಮಾರ್ಚ್ 2019, 14:39 IST
ಶಿವಮೊಗ್ಗ ತಾಲ್ಲೂಕು ಮಡಕೆ ಚೀಲೂರು ಗ್ರಾಮದ ರೈತ ಮಹೇಶ್ವರಪ್ಪ ಅವರ ಮನೆ ಜಫ್ತಿ ವಿರೋಧಿಸಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಮುಂದೆ ಶನಿವಾರ ರೈತರು ಪ್ರತಿಭಟನೆ ನಡೆಸಿದರು. 
ಶಿವಮೊಗ್ಗ ತಾಲ್ಲೂಕು ಮಡಕೆ ಚೀಲೂರು ಗ್ರಾಮದ ರೈತ ಮಹೇಶ್ವರಪ್ಪ ಅವರ ಮನೆ ಜಫ್ತಿ ವಿರೋಧಿಸಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಮುಂದೆ ಶನಿವಾರ ರೈತರು ಪ್ರತಿಭಟನೆ ನಡೆಸಿದರು.    

ಶಿವಮೊಗ್ಗ: ಗೃಹ ನಿರ್ಮಾಣಕ್ಕೆ ಪಡೆದಿದ್ದ ಸಾಲ ತೀರಿಸದ ರೈತನ ಮನೆಯನ್ನು ಹೊಳಲೂರು ಕೆನರಾ ಬ್ಯಾಂಕ್ ಜಫ್ತಿ ಮಾಡಿದೆ.

ಶಿವಮೊಗ್ಗ ತಾಲ್ಲೂಕು ಮಡಕೆ ಚೀಲೂರು ಗ್ರಾಮದ ರೈತ ಮಹೇಶ್ವರಪ್ಪ ₹ 1.68 ಲಕ್ಷ ಸಾಲ ಪಡೆದಿದ್ದರು. ಇದುವರೆಗೆ ₨ 38 ಸಾವಿರ ಜಮಾ ಮಾಡಿದ್ದಾರೆ. ಉಳಿದ ಹಣ ಸಕಾಲಕ್ಕೆ ಪಾವತಿಸಿಲ್ಲ. ಹಾಗಾಗಿ, ಬ್ಯಾಂಕ್‌ ಸಿಬ್ಬಂದಿ ಮಾರ್ಚ್‌ 15ರಂದು ಮನೆಗೆ ಬೀಗ ಜಡಿದಿದ್ದಾರೆ. ಸಂಜೆ ಮನೆಗೆ ಬಂದ ಕುಟುಂಬದವರು ಇಡೀ ರಾತ್ರಿ ಬೀದಿಯಲ್ಲೇ ಮಲಗಿದ್ದಾರೆ.

ಪ್ರಾದೇಶಿಕ ಕಚೇರಿಗೆ ಮುತ್ತಿಗೆ:

ADVERTISEMENT

ವಿಷಯ ತಿಳಿದ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಶಿವಮೂರ್ತಿ ವೃತ್ತದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಗೆ ಮುತ್ತಿಗೆ ಹಾಕಿಪ್ರತಿಭಟನೆ ನಡೆಸಿದರು.

ರೈತ ಮಹೇಶ್ವರಪ್ಪ ಅವರಿಗೆ ವಯಸ್ಸಾಗಿದೆ. ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಸಾಲ ಮಸೂಲಾತಿ ಮಾಡುವಾಗ ಮಾನವೀಯತೆ ತೋರಬೇಕು. 2002ರ ಕಾಯ್ದೆ ರದ್ದು ಮಾಡಬೇಕು. ಮೊದಲಿನಂತೆ ಸಾಲ ವಸೂಲಾತಿ ವಿಷಯ ಕೋರ್ಟ್‌ನಲ್ಲೇ ತೀರ್ಮಾನವಾಗಬೇಕು ಎಂದು ಆಗ್ರಹಿಸಿದರು.

ಸೂರು ಮಾಡಿಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಸಾಲ ವಸೂಲಾತಿ ನೆಪದಲ್ಲಿ ಇಂತಹ ಹಕ್ಕು ಕಸಿದುಕೊಳ್ಳಬಾರದು. ಮನೆಗೆ ಹಾಕಿರುವ ಬೀಗ ತೆರವು ಮಾಡಬೇಕು. ತಕ್ಷಣ ವಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್. ಆರ್.ಬಸವರಾಜಪ್ಪ, ಮುಖಂಡರಾದ ಕೆ.ರಾಘವೇಂದ್ರ, ಎಸ್. ಮಂಜಪ್, ಜಗದೀಶ್, ಶೇಖರಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.