ADVERTISEMENT

21ರಿಂದ ಅದ್ದೂರಿ ದಸರಾ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 5:05 IST
Last Updated 18 ಅಕ್ಟೋಬರ್ 2012, 5:05 IST

ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಅ. 21ರಿಂದ 24ರ ತನಕ ಅದ್ದೂರಿ ದಸರಾ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಬಿ.ಕೆ. ಮೋಹನ್ ತಿಳಿಸಿದರು.

ಬುಧವಾರ  ನಡೆದ ದಸರಾ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ಪ್ರಮುಖ ರಸ್ತೆಗಳು, ಮುಖ್ಯ ವೃತ್ತಗಳು ಹಾಗೂ ಸರ್ಕಾರಿ ಕಟ್ಟಡಗಳಿಗೆ ತಳಿರು ತೋರಣ, ವಿದ್ಯುತ್ ದೀಪದ ಅಲಂಕಾರ ಮಾಡಲಾಗುವುದು ಎಂದರು.

ಅ. 20ರಂದು ಸಂಜೆ 7ಕ್ಕೆ ನಗರಸಭೆ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಾಸಕ ಬಿ.ಕೆ. ಸಂಗಮೇಶ್ವರ ನೆರವೇರಿಸುವರು. ಅದೇ ದಿನ ಗಂಗಾವತಿ ಪ್ರಾಣೇಶ್ ತಂಡದಿಂದ ನಗೆಹಬ್ಬ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

21ರಂದು ರಾತ್ರಿ 8ಕ್ಕೆ ಚಿಂತನಾ ಕಲಾವೃಂದದ ಹರೋನಹಳ್ಳಿ ಸ್ವಾಮಿ ತಂಡದಿಂದ ಕನ್ನಡ ಸುಮಧುರ ಗೀತೆಗಳ ಗಾಯನ ಏರ್ಪಡಿಸಿದ್ದು, 22ಕ್ಕೆ ತುಮಕೂರು ಸಂಗೀತ ಮ್ಯೂಸಿಕಲ್ ತಂಡದಿಂದ ಸಂಗೀತ ಏರ್ಪಡಿಸಲಾಗಿದೆ.

24ರಂದು ಮಧ್ಯಾಹ್ನ 2ಕ್ಕೆ ಹುತ್ತಾಕಾಲೊನಿ ತಿರುಮಲ ದೇವಾಲಯ ಆವರಣದಿಂದ ಗ್ರಾಮದೇವತೆಗಳ ಉತ್ಸವ ಆಯೋಜಿಸಲಾಗಿದೆ. ಅದೇ ದಿನ ಸಂಜೆ ಕನಕಮಂಟಪ ಮೈದಾನದಲ್ಲಿ ಬನ್ನಿ ಮುಡಿಯುವ ಧಾರ್ಮಿಕ ಕಾರ್ಯ ನಡೆಯಲಿದೆ ಎಂದು ವಿವರಿಸಿದರು.

ಸಭೆಯಲ್ಲಿ ಆಯುಕ್ತ ಬಿ.ಡಿ. ಬಸವರಾಜ್, ಉಪಾಧ್ಯಕ್ಷೆ ಲಕ್ಷ್ಮೀದೇವಿ,  ಸ್ವಾಗತ ಸಮಿತಿ ಅಧ್ಯಕ್ಷೆ ಶೋಭಾ ರವಿಕುಮಾರ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಪುಟ್ಟೇಗೌಡ, ಪ್ರಚಾರ ಮತ್ತು ಅಲಂಕಾರ ಸಮಿತಿ ಅಧ್ಯಕ್ಷ ವಿ. ಕದಿರೇಶ್, ಮನರಂಜನಾ ಸಮಿತಿ ಅಧ್ಯಕ್ಷ ನಟರಾಜ್, ಕ್ರೀಡಾ ಸಮಿತಿ ಅಧ್ಯಕ್ಷ ಮೋಹನ್ ರಾವ್  ಅವರು ಹಾಜರಿದ್ದರು.

 ಇಂದಿನಿಂದ ಕುವೆಂಪು ವಿವಿ ಅಥ್ಲೆಟಿಕ್ಸ್: ಭದ್ರಾವತಿ: ಕುವೆಂಪು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ಅ. 18ರಿಂದ ಮೂರು ದಿನಗಳ ಕಾಲ ಸರ್‌ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಆಶ್ರಯದಲ್ಲಿ ನಡೆಯಲಿದೆ.

ಸ್ಪರ್ಧೆಗಳು ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅ. 18ರ ಬೆಳಿಗ್ಗೆ 10ಕ್ಕೆ ಶಾಸಕ ಬಿ.ಕೆ. ಸಂಗಮೇಶ್ವರ ಇದರ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಸಿ. ಭಾರತಿ ತಿಳಿಸಿದ್ದಾರೆ.

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ಪದವಿ ಕಾಲೇಜುಗಳು ಸುಮಾರು 500ರಿಂದ 600 ಸ್ಪರ್ಧಿಗಳು, 12ರಿಂದ 13 ವಿಭಾಗದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದು, ವಿವಿ ರಿಜಿಸ್ಟಾರ್ ಟಿ.ಆರ್. ಮಂಜುನಾಥ್, ದೈಹಿಕ ಶಿಕ್ಷಣ ವಿಭಾಗದ ಡಾ.ಎಂ. ಪ್ರಕಾಶ್ ಉದ್ಘಾಟನಾ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.