ADVERTISEMENT

3 ವರ್ಷದ ನಂತರ ಮೌನ ಮುರಿಯುವ ಸ್ವಾಮೀಜಿ

ಭದ್ರಾವತಿ ಗೋಣಿಬೀಡು ಆಶ್ರಮದ ವಿಶೇಷ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 7:31 IST
Last Updated 17 ಏಪ್ರಿಲ್ 2013, 7:31 IST

ಭದ್ರಾವತಿ: ಹೊರ ಜಗತ್ತಿನ ಸಂಪರ್ಕವಿಲ್ಲದೆ, ಮೌನಕ್ಕೆ ಶರಣಾಗಿ, ನಿತ್ಯ ಪ್ರಸಾದಕ್ಕೆ ಹಾಲು, ಎಳನೀರು, ಹಣ್ಣಿನರಸ ಸೇವಿಸಿ ಮೂರು ವರ್ಷದ ಬಳಿಕ ಇದೇ ಏ. 22ಕ್ಕೆ ಹೊರಜಗತ್ತಿನ ಭಕ್ತ ಸಮೂಹಕ್ಕೆ ದರ್ಶನ ನೀಡಲಿರುವ ಭದ್ರಾವತಿ ಗೋಣಿಬೀಡು ಸ್ವಾಮೀಜಿ ಬದುಕು ಹಲವು ವಿಶೇಷಗಳ ಸರಮಾಲೆ.

19ನೇ ವಯಸ್ಸಿಗೆ ಆಧ್ಯಾತ್ಮಿಕ ಪ್ರಪಂಚದ ಅನುಭಾವ ಸವಿಯಲು ಬಂದ ಇಂದಿನ ಶೀಲ ಸಂಪಾದನಾ ಮಠದ ಸಿದ್ದಲಿಂಗ ಮಹಾ ಸ್ವಾಮೀಜಿ ಅವರು, ಹಿಂದಿನ ಸ್ವಾಮೀಜಿ ಚಂದ್ರಶೇಖರ ಮಹಾ ಸ್ವಾಮೀಜಿ ಅವರಿಂದ ದೀಕ್ಷೆ ಪಡೆದು ಮಠದ ಅಧಿಕಾರ ಪಡೆದವರು.

ಮಠ ಸೇರುವ ಮುನ್ನ ಜ್ಯೋತಿಷಶಾಸ್ತ್ರದಲ್ಲಿ ಒಂದಿಷ್ಟು ಪ್ರಾವೀಣ್ಯ ಪಡೆದಿದ್ದ ಇವರು, ದೀಕ್ಷೆ ಪಡೆದ ನಂತರ ನಿರಂತರ ಅಧ್ಯಯನ ಜತೆಗೇ ಮಠದ ಜಮೀನಿನ ಚಟುವಟಿಕೆಗೆ ಟೊಂಕಕಟ್ಟಿ ನಿಂತು ಪ್ರತಿನಿತ್ಯ ಕೃಷಿ ಬದುಕು ನಡೆಸಿದವರು.

ಬೆಳಿಗ್ಗೆ ಎದ್ದ ಕೂಡಲೇ ಜಮೀನು ಹಾದಿ ಹಿಡಿಯುತ್ತಿದ್ದ ಅವರು 10ರ ಸುಮಾರಿಗೆ ಪೂಜಾ ವಿಧಿ-ವಿಧಾನಕ್ಕೆ ಮುಂದಾಗುತ್ತಿದ್ದರು. `ಮಾತು ಬೆಳ್ಳಿ, ಮೌನ ಬಂಗಾರ' ಎಂಬ ಮಾತಿಗೆ ತಕ್ಕಂತೆ ಶ್ರಮ, ಅಧ್ಯಾತ್ಮ ಹಾಗೂ ಸಾಧನೆ ಅವರ ಕ್ಷೇತ್ರವಾಯಿತು ಎನ್ನುತ್ತಾರೆ ವ್ಯವಸ್ಥಾಪಕ ಜಿ.ಎಸ್. ಚಂದ್ರಶೇಖರಯ್ಯ.

ಮಠದ ಇತಿಹಾಸ: ಗೋಣಿಬೀಡು ಶೀಲ ಸಂಪಾದನಾ ಮಠ 64 ಅನುಷ್ಠಾನವನ್ನು ಜಾರಿ ಮಾಡಿದ ಸಿದ್ಧವೀರ ಶಿವಯೋಗಿ ಸ್ವಾಮೀಜಿ ಮೂಲಕ 12ನೇ ಶತಮಾನದಲ್ಲಿ ಸ್ಥಾಪನೆಯಾಗಿದೆ. ಇಲ್ಲಿಯ ತನಕ 18ಸ್ವಾಮಿಗಳು ಈ ಮಠದ ನೇತೃತ್ವ ವಹಿಸಿದ್ದಾರೆ.

ಕಲ್ಯಾಣಕ್ರಾಂತಿ ಸಂದರ್ಭದಲ್ಲಿ ಅಕ್ಕ ನಾಗಲಾಂಬಿಕೆ, ನುಲಿಯ ಚಂದಯ್ಯ ಸಿದ್ಧವೀರ ಸ್ವಾಮಿ ಅವರನ್ನು ಕ್ರಿಯಾಮೂರ್ತಿಗಳನ್ನಾಗಿ ಸ್ವೀಕರಿಸಿ ಇಲ್ಲಿ ಬಂದು ನೆಲೆಸಿದರು ಎಂದು ಇತಿಹಾಸ ಹೇಳುತ್ತದೆ. ಇದಕ್ಕೆ ಇಂಬು ಕೊಡುವಂತೆ ಅಕ್ಕ ನಾಗಲಾಂಬಿಕೆ ಗದ್ದುಗೆ ಶ್ರೀಮಠದ ಆವರಣದಲ್ಲಿದೆ.

ಸಿದ್ದವೀರ ಸ್ವಾಮೀಜಿ ಅವರು ರಚಿಸಿದ ತಾಳೆಗರಿ ಪತ್ರಗಳು ಕಾಲಜ್ಞಾನ ಚಿಂತನೆಯನ್ನು ಹೊರ ಸೂಸುತ್ತಿದೆ ಎಂಬುದು ಈ ಮಠದ ವಿಶೇಷ. ಇದರ ಸಾಧನೆ ಮಾಡಿರುವ ಈಗಿನ ಸಿದ್ದಲಿಂಗ ಸ್ವಾಮೀಜಿ ಅವರು, ಅದರ ಆಧಾರದ ಮೇಲೆ ಪ್ರಶ್ನೆ ಕೇಳುವ ಭಕ್ತರ ಪಾಲಿಗೆ ಉತ್ತರ ನೀಡುವ ಜ್ಯೋತಿಷಿಯಾಗಿ ಕಂಡರು.

ಸಾಧನೆಗೆ ಮೌನ: ಸದ್ಯ 37 ವರ್ಷದ ಸಿದ್ದಲಿಂಗ ಸ್ವಾಮಿ ಅಧ್ಯಾತ್ಮ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಜನರ ಒಳಿತಿಗೆ ಕೆಲಸ ಮಾಡುವ ಸಲುವಾಗಿ ಮೌನವ್ರತಕ್ಕೆ ಮನಸ್ಸು ಮಾಡಿದರು ಎನ್ನುತ್ತಾರೆ ಮಠದ ಹಿರಿಯರು.

ಈ ಸಂದರ್ಭದಲ್ಲಿ ಅವರ ಸಾಧನೆಯ ಕೊಠಡಿಗೆ ದಿನಕ್ಕೆ ಎರಡು ಬಾರಿ ಪ್ರವೇಶ ಮಾಡಲು ಶಿಷ್ಯ ಬಾಳಯ್ಯನಿಗೆ ಮಾತ್ರ ಅವಕಾಶವಿತ್ತು. ಈ ಮೂರು ವರ್ಷದಲ್ಲಿ ಅವರ ಸಾಧನೆಗೆ ಮಾರ್ಗದರ್ಶಕರಾದ ಆನಂದಪುರ ಮಠ ಮತ್ತು ಕಪ್ಪನಹಳ್ಳಿ ಶಿವಯೋಗಿ ಮಂದಿರದ ಸ್ವಾಮೀಜಿ ಅವರು ಮೌನ ಸ್ಥಳ ಪ್ರವೇಶಿಸಿ ಬಂದಿದ್ದಾರೆ.

ಈ ಕೊಠಡಿ ಪ್ರವೇಶ ಸಂದರ್ಭದಲ್ಲಿ 60 ಕೆಜಿ ಇದ್ದ ಸ್ವಾಮೀಜಿ ಈಗ ಬಹಳಷ್ಟು ಕುಗ್ಗಿದ್ದಾರೆ. ಅವರು 30 ಕೆಜಿಗೆ ಇಳಿದಿದ್ದಾರೆ. ಹಾಗಾಗಿ, ಅವರು ಮೌನದಿಂದ ಹೊರಬರುವ ಅಗತ್ಯವಿದೆ ಎಂಬ ಅಭಿಪ್ರಾಯ ಹಿರಿಯ ಸ್ವಾಮೀಜಿ ಅವರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೇ ಏ. 22ಕ್ಕೆ ವ್ರತದಿಂದ ಹೊರಬರಲಿದ್ದಾರೆ ಸ್ವಾಮೀಜಿ.

ಒಟ್ಟಿನಲ್ಲಿ ಮೂರು ವರ್ಷಗಳ ದಿವ್ಯ ತಪೋವನ ಮುಗಿಸಿ ಹೊರಬರುವ ಹಾದಿಯಲ್ಲಿ ಇರುವ ಸ್ವಾಮೀಜಿ ಅವರ ದರ್ಶನ ಭಾಗ್ಯ ಪಡೆಯಲು ಭಕ್ತರು ಉತ್ಸುಕರಾಗಿದ್ದಾರೆ. ಇದಕ್ಕಾಗಿ ಸಿದ್ಧತೆಯ ಮಹಾಪೂರ ಮಠದ ಆವರಣದಲ್ಲಿ ನಡೆದಿದೆ. ಈ ದಿವ್ಯಸದೃಶ ದೃಶ್ಯ ವೀಕ್ಷಿಸಲು 22ರಂದು ಬೆಳಿಗ್ಗೆ 10ಕ್ಕೆ ಮಠದ ಆವರಣಕ್ಕೆ ಬರುವಂತೆ ಭಕ್ತ ಸಮೂಹ ನಾಗರಿಕರಲ್ಲಿ ಮನವಿ ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.