ADVERTISEMENT

‘5 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮೋದನೆ’

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 4:47 IST
Last Updated 26 ಅಕ್ಟೋಬರ್ 2021, 4:47 IST
ಹೊಸನಗರ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಶಿಕ್ಷಣ ಸಚಿವ ಬಿ.ಎಸ್. ನಾಗೇಶ್ ಮಾತನಾಡಿದರು.
ಹೊಸನಗರ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಶಿಕ್ಷಣ ಸಚಿವ ಬಿ.ಎಸ್. ನಾಗೇಶ್ ಮಾತನಾಡಿದರು.   

ಹೊಸನಗರ: ‘ಶಿಕ್ಷಕರ ಕೊರತೆ ನೀಗಿಸಲು 5 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

‘ಗಣಿತ ಮತ್ತು ವಿಜ್ಞಾನ ಶಿಕ್ಷಕರ ನೇಮಕಕ್ಕೆ ಕೊಂಚ ತಾಂತ್ರಿಕ ತೊಡಕು ಇದ್ದು, ಇದನ್ನು ಸರಿಪಡಿಸಿಕೊಂಡು ಹೊಸ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಮಾದರಿ ಶಾಲೆ ನಿರ್ಮಿಸಿ, ಸಣ್ಣಪುಟ್ಟ ಶಾಲೆಗಳನ್ನು ಅದರೊಂದಿಗೆ ವಿಲೀನ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಿದ್ದು, ಈಗಾಗಲೇ ಶಿಕ್ಷಣ ನೀತಿಯ ಕುರಿತು ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯುವುದಿಲ್ಲ. ಬದಲಾಗಿ ಅವರಿಗೂ ಹೊಸ ಜವಾಬ್ದಾರಿ ನೀಡಲಾಗುವುದು ಯಾವುದೇ ಆತಂಕ ಬೇಡ‘ ಎಂದರು.

ADVERTISEMENT

‘1ರಿಂದ 5ನೇ ತರಗತಿಗಳು ಆರಂಭಗೊಂಡಿದ್ದು, ಉತ್ತಮ ಹಾಜರಾತಿ ಕಂಡುಬಂದಿದೆ. ಹಲವು ಶಾಲೆಗಳಿಗೆ ನಾನು ಭೇಟಿ ನೀಡಿದ್ದು, ಇಲ್ಲಿನ ವ್ಯವಸ್ಥೆಗಳು ತೃಪ್ತಿದಾಯಕವಾಗಿದೆ. ಪೂರ್ಣಾವಧಿ ತರಗತಿಗಳನ್ನು ನಡೆಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ತರಗತಿಗಳು ನಡೆಯದೇ ಬಹಳ ಸಮಯ ಇರುವುದು ಶಾಲೆ ಮತ್ತು ವಿದ್ಯಾರ್ಥಿಗಳ ನಡುವೆ ಅಂತರಕ್ಕೆ ಕಾರಣವಾಗಿದೆ. ಇದನ್ನು ಸರಿಪಡಿಸಲು ವಿಶೇಷ ತರಗತಿ ನಡೆಸಲಾಗುವುದು’ ಎಂದು ಹೇಳಿದರು.

‘ಈ ಹಿಂದೆ ಶಾಲೆಗಳಿಗೆ ಹೊಸ ಕೊಠಡಿ, ನೂತನ ಕಟ್ಟಡ ನಿರ್ಮಾಣ ಮಾಡುವಾಗ ವೈಜ್ಞಾನಿಕವಾಗಿ ಚಿಂತನೆ ನಡೆಸಿಲ್ಲ. ಹಲವು ಕಡೆ ಸೌಕರ್ಯಗಳಿದ್ದರೂ, ಮಕ್ಕಳೇ ಇಲ್ಲ. ಮುಂದಿನ ದಿನಗಳಲ್ಲಿ ನೂತನ ಕಟ್ಟಡ, ಕೊಠಡಿ ನಿರ್ಮಾಣ ಮಾಡುವ ವೇಳೆ ಭವಿಷ್ಯದಲ್ಲಿ ಆಗಬಹುದಾದ ಮಕ್ಕಳ ಸಂಖ್ಯೆಯ ಕುರಿತು ಅಧ್ಯಯನ ನಡೆಸಿದ ಬಳಿಕವೇ ಅನುದಾನ ನೀಡಲಾಗುವುದು. ಹಲವು ಶಾಲೆಗಳಿಗೆ ಹೊಸ ಕಟ್ಟಡ ನಿರ್ಮಾಣ ಅಗತ್ಯವಿದ್ದು, ಕೊರೊನಾ ಕಾರಣದಿಂದ ಆರ್ಥಿಕ ಸ್ಥಿತಿಗತಿಗಳ ಕಡೆಗೂ ಗಮನ ಹರಿಸಬೇಕು. ಮುಂದಿನ ಬಜೆಟ್‌ನಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಮೀಸಲಿಡಲಾಗುವುದು’ ಎಂದು ಹೇಳಿದರು.

‘ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಕೆಲ ಪೋಷಕರು ನಗರ ಪ್ರದೇಶಗಳನ್ನು ಬಿಟ್ಟು ಹಳ್ಳಿಗಳಿಗೆ ಹೋಗಿ ನೆಲೆಸಿರುವುದು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಲು ಕಾರಣವಾಗಿದೆ. ಅಲ್ಲದೇ ಶಿಕ್ಷಕರ ನೇಮಕಾತಿ ಅರ್ಹತಾ ಮಾನದಂಡದ ಮೇಲೆಯೇ ಆಗಿರುವ ಕಾರಣಕ್ಕೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿರುವುದು ಪೋಷಕರ ಗಮನಕ್ಕೆ ಬರುತ್ತಿದೆ’ ಎಂದರು.

ಗೋಷ್ಠಿಯಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಆರ್. ದೇವಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.