ADVERTISEMENT

ಹಳ್ಳಿಯ ಚಿತ್ರಣ ಬದಲಿಸಿದ ಎನ್‌ಎಸ್‌ಎಸ್ ಶಿಬಿರ

ಅನಿಲ್ ಸಾಗರ್
Published 13 ಜನವರಿ 2018, 5:57 IST
Last Updated 13 ಜನವರಿ 2018, 5:57 IST

ಶಿವಮೊಗ್ಗ: ಶ್ರಮದಾನದ ಉದ್ದೇಶಕ್ಕಾಗಿ ಆಯೋಜಿಸಿದ ಎನ್‌ಎಸ್‌ಎಸ್‌ ಶಿಬಿರವೊಂದು ಮೂಲ ಸೌಕರ್ಯವಿಲ್ಲದ ಹಳ್ಳಿಯೊಂದರ ಚಿತ್ರಣವನ್ನೇ ಬದಲಿಸುವಲ್ಲಿ ಯಶಸ್ವಿಯಾಗಿದೆ. ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು (ಎಟಿಎನ್‌ಇಸಿ) ಇತ್ತೀಚೆಗೆ ಶಿವಮೊಗ್ಗ ತಾಲ್ಲೂಕಿನ ಮುದ್ದಿನಕೊಪ್ಪದಲ್ಲಿ ನಡೆಸಿದ 2017–18ನೇ ಸಾಲಿನ ಎನ್‌ಎಸ್‌ಎಸ್‌ ವಿಶೇಷ ವಾರ್ಷಿಕ ಶಿಬಿರವು ಗ್ರಾಮದ ಸ್ವಚ್ಛತೆಗೆ ಮಾತ್ರವೇ ಸೀಮಿತವಾಗದೆ, ಈ ಹಳ್ಳಿಯ ದಶಕದ ಬೇಡಿಕೆ ಈಡೇರಿಸಿ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ಹಳ್ಳಿಗೆ ಬಂತು ಸರ್ಕಾರಿ ಬಸ್‌: ದಲಿತರು, ಹಿಂದುಳಿದವರು, ಬಡವರೇ ಹೆಚ್ಚಿರುವ ಮುದ್ದಿನಕೊಪ್ಪಕ್ಕೆ ಸರ್ಕಾರಿ ಬಸ್‌ ಎಂಬುದು ಕನಸಾಗಿತ್ತು. ಇದ್ದ ಏಕೈಕ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಿತ್ತು. ಇದರಿಂದ ಇಲ್ಲಿನ ಮಹಿಳೆಯರು, ಹಿರಿಯರು, ಗರ್ಭಿಣಿಯರು, ಮಕ್ಕಳು ನಗರ ಪ್ರದೇಶಕ್ಕೆ ಬರಬೇಕಾದರೆ ಹರಸಾಹಸ ಪಡಬೇಕಿತ್ತು. ಬಸ್‌ ಸೌಲಭ್ಯಕ್ಕಾಗಿ ಮುದ್ದಿನಕೊಪ್ಪದಿಂದ 2ರಿಂದ 3 ಕಿ.ಮೀ ನಡೆದು ಸಿಂಹಧಾಮ ಬಳಿಯಿರುವ ಮುಖ್ಯ ರಸ್ತೆಗೆ ಬಂದು ಬಸ್‌ ಹಿಡಿಯಬೇಕಿತ್ತು.

ಇದನ್ನು ಮನಗಂಡ ಎಟಿಎನ್‌ಸಿಸಿ ಕಾಲೇಜು ಎನ್‌ಎಸ್‌ಎಸ್‌ ಶಿಬಿರಾಧಿಕಾರಿ ಹಾಗೂ ಕಾಲೇಜು ಆಡಳಿತ ವರ್ಗ ತಕ್ಷಣವೇ ಆರ್‌ಟಿಒ ಅಧಿಕಾರಿಗಳನ್ನು ಸಂಪರ್ಕಿಸಿ ಈ ಗ್ರಾಮಕ್ಕೆ ಸೂಕ್ತ ರೀತಿಯ ಸರ್ಕಾರಿ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂಬ ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ಅಧಿಕಾರಿ ತಕ್ಷಣವೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪೋನಾಯಿಸಿ ಮುದ್ದಿನಕೊಪ್ಪ ಗ್ರಾಮಕ್ಕೆ ಬಸ್‌ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಹ ಅಲ್ಪಾವಧಿಯಲ್ಲಿ ಬಸ್‌ ಸೌಲಭ್ಯ ಕಲ್ಪಿಸಿದ್ದಾರೆ. ಈಗಾಗಲೇ ಜಿಲ್ಲೆಯ ನ್ಯಾಯಾಧೀಶರಿಂದ ಬಸ್‌ ಸೇವೆಗೆ ಚಾಲನೆ ದೊರೆತಿದೆ. ಇದರಿಂದ ಈ ಭಾಗದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ADVERTISEMENT

ಶಾಲೆಗೆ ಸಿಕ್ಕ ಕ್ರೀಡಾಂಗಣ: ಇಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ರೀಡಾಂಗಣ ಇರಲಿಲ್ಲ. ಅಲ್ಲಿನ ಗ್ರಾಮ ಪಂಚಾಯ್ತಿಯನ್ನು ಭೇಟಿಯಾಗಿ ಪಂಚಾಯ್ತಿ ಮುಂಭಾಗದಲ್ಲೇ ಇರುವ 2 ಎಕರೆ ಗ್ರಾಮಠಾಣೆಯ ಜಾಗವನ್ನು ಶಾಲೆ ಕ್ರೀಡಾಂಗಣಕ್ಕೆ ಬಿಡಿಸುವಲ್ಲಿ ಕಾಲೇಜು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಕ್ರೀಡಾಂಗಣವೂ ನಿರ್ಮಾಣವಾಗಿದೆ. ಶಾಲೆ ಮಕ್ಕಳು ಖುಷಿಯಿಂದ ಆಟವಾಡುತ್ತಿದ್ದಾರೆ.

ಅಂಗನವಾಡಿಗೆ ನಿವೇಶನ: ಈ ಹಿಂದೆ ಮುದ್ದಿನಕೊಪ್ಪ ಗ್ರಾಮದ ಭೋವಿ ಕಾಲೊನಿಯಲ್ಲಿ ಅಂಗನವಾಡಿ ನಿರ್ಮಾಣಕ್ಕೆ ₹ 8 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆದರೆ, ಸೂಕ್ತ ನಿವೇಶನ ಇಲ್ಲದೇ ಆ ಹಣ ಮರಳಿ ಸರ್ಕಾರಕ್ಕೆ ಹೋಗುವ ಸಾಧ್ಯತೆಯಿತ್ತು. ಈ ವಿಷಯ ಕಾಲೇಜಿನ ಗಮನಕ್ಕೆ ಬಂದಾಗ ತಕ್ಷಣವೇ ಅಲ್ಲಿನ ಅರಣ್ಯ ಇಲಾಖೆಗೆ ಸೇರಿದ್ದ 80*60 ಅಡಿಯ ನಿವೇಶವನ ಬಳಕೆಗೆ ಇಲಾಖೆಯ ಅನುಮತಿ ದೊರಕಿಸಿಕೊಟ್ಟಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಅಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಇತರೆ ಕಾರ್ಯಗಳು: ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಇರುವ ಗ್ರಾಮದ ಬಹುತೇಕ ಜನರಿಗೆ ತಮ್ಮ ರಕ್ತದ ಗುಂಪು ತಿಳಿದಿರಲಿಲ್ಲ. ಇದರಿಂದ ತುರ್ತು ಸಮಯದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಶಿಬಿರದ ಮೂಲಕ ಸುಮಾರು 135 ಜನರ ರಕ್ತ ತಪಾಸಣೆ ನಡೆಸಿದೆ. ಅಲ್ಲದೆ 26 ಯೂನಿಟ್‌ ರಕ್ತ ಸಂಗ್ರಹಿಸಿ ಮೆಗ್ಗಾನ್‌ ಆಸ್ಪತ್ರೆಗೆ ನೀಡಿದೆ. 165 ಜನರಿಗೆ ದಂತ, ಕಣ್ಣು, ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ದೊರಕಿಸಿಕೊಟ್ಟಿದೆ. ಕೇವಲ ನಾಲ್ಕು ಜನರನ್ನು ಹೊರತುಪಡಿಸಿದರೆ ಉಳಿದವರಿಗೆ ಸೂಕ್ತ ದಾಖಲೆ ಇಲ್ಲ ಎಂಬ ಕಾರಣಕ್ಕೆ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವ ವೇತನದ ಸೌಲಭ್ಯ ಸಿಗುತ್ತಿರಲಿಲ್ಲ. ಸಮಸ್ಯೆ ಬಗೆಹರಿಯಲು ಮಾರ್ಗದರ್ಶನ ಮಾಡಲಾಗಿದೆ.

ಇಷ್ಟು ಮಾತ್ರವಲ್ಲದೇ ಜ.5 ರಿಂದ 11ರವರೆಗೆ ನಡೆದ ಶಿಬಿರದ ಮೂಲಕ ಗ್ರಾಮದವರಿಗೆ ಕಾನೂನು ಅರಿವು, ವಿಶೇಷ ಉಪನ್ಯಾಸ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಆರ್. ದಯಾನಂದ, ಶಿಭಿರಾಧಿಕಾರಿ ಪ್ರೊ.ಕೆ.ಎಂ. ನಾಗರಾಜ್, ಉಪನ್ಯಾಸಕರು ಸೇರಿದಂತೆ ಕಾಲೇಜಿನ 100 ಶಿಬಿರಾರ್ಥಿಗಳು ಕೈ ಜೋಡಿಸಿದ್ದಾರೆ.

* *

ನಾವು ಹಳ್ಳಿಯ ಸಮೀಕ್ಷೆ ನಡೆಸಿದಾಗ ಇಲ್ಲಿನ ಜನರು ಸಾಕಷ್ಟು ಸೌಲಭ್ಯಗಳಿಂದ ವಂಚಿತರಾಗಿದ್ದರು. ಈಗ ಊರಿನ ಜನರ ಮೊಗದಲ್ಲಿ ಖುಷಿ ಕಂಡಾಗ ನಮಗೂ ಸಂತೋಷವಾಗುತ್ತಿದೆ
ಪ್ರೊ.ಕೆ.ಎಂ.ನಾಗರಾಜ್, ಶಿಬಿರಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.