ADVERTISEMENT

ಕಾಗೋಡು ದಾರಿಯಲ್ಲಿ ಯಡಿಯೂರಪ್ಪ ನಡೆಯಲಿ: ಸಚಿನ್ ಮೀಗಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 6:53 IST
Last Updated 23 ಜನವರಿ 2018, 6:53 IST

ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಜನರಿಗೆ ಸುಳ್ಳು ಭರವಸೆಗಳನ್ನು ನೀಡುವ ಬದಲು ಸಚಿವ ಕಾಗೋಡು ತಿಮ್ಮಪ್ಪ ಅವರ ದಾರಿಯಲ್ಲಿ ನಡೆದು ಜನರಿಗೆ ನ್ಯಾಯಯುತ ಬದುಕು ನೀಡುವತ್ತ ಶ್ರಮಿಸಲಿ ಎಂದು ರಾಜ್ಯ ಕಾಂಗ್ರೆಸ್‌ ಕೃಷಿ ಮತ್ತು ಕಾರ್ಮಿಕ ವಿಭಾಗದ ಅಧ್ಯಕ್ಷ ಸಚಿನ್‌ ಮೀಗಾ ಒತ್ತಾಯಿಸಿದರು.

ಅವರು ಕೇಂದ್ರದ ಮೇಲೆ ಒತ್ತಡ ಹಾಕಿ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಿಸಬೇಕು. ಕಳಸಾ ಬಂಡೂರಿ ಯೋಜನೆ ಜಾರಿಗೆ ಕೇಂದ್ರದ ಮಧ್ಯಸ್ಥಿಕೆ ವಹಿಸಲು ಒತ್ತಡ ಹೇರಬೇಕು. ಗೋರಖ್‌ಸಿಂಗ್‌ ವರದಿ ಜಾರಿಗೆ ಧ್ವನಿ ಎತ್ತಬೇಕು.

ನೀಡಿದ ಆಶ್ವಾಸನೆಯಂತೆ ರೈತರ ಉತ್ಪಾದನಾ ವೆಚ್ಚದ ಮೇಲೆ ಶೇ 50 ಹೆಚ್ಚಿಸಿ ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡಲು ಒತ್ತಡ ಹೇರಬೇಕು. ಉದ್ಯಮಿಗಳಿಗೆ ಲಾಭವಾಗಿರುವ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ರೈತರಿಗೆ ಪೂರಕವಾಗಿ ಬದಲಾಯಿಸಲು ಒತ್ತಾಯಿಸಬೇಕು.  ಈ 5 ಬೇಡಿಕೆ ಈಡೇರಿಸಿ ರಾಜ್ಯದಲ್ಲಿ ಪರಿವರ್ತನೆ ಯಾತ್ರೆ ಮಾಡಬೇಕು. ಇಲ್ಲವಾದರೆ ರಾಜ್ಯದ ರೈತರು, ಕೃಷಿ ಕಾರ್ಮಿಕರು, ಮತದಾರರು ತಮ್ಮ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದರು.

ADVERTISEMENT

ಶಿವಮೊಗ್ಗಕ್ಕೆ ರಾಹುಲ್‌ ಗಾಂಧಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆಬ್ರುವರಿ ಅಂತ್ಯದಲ್ಲಿ 2ನೇ ಹಂತದ ರಾಜ್ಯ ಪ್ರವಾಸದಲ್ಲಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಸಂವಾದದಲ್ಲಿ ಸಮಸ್ಯೆಗಳನ್ನು ಆಲಿಸಿ ಪರಿಹಾರದ ಮಾರ್ಗೋಪಾಯಗಳ ಕುರಿತಾಗಿ ರೈತರೊಂದಿಗೆ ಚರ್ಚೆ ನಡೆಸುವರು. ರಾಹುಲ್ ಗಾಂಧಿ ಭೇಟಿಯಿಂದಾಗಿ ಕಾರ್ಯಕರ್ತರಲ್ಲಿ ಇನ್ನಷ್ಟು ಚೈತನ್ಯ ಮೂಡಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನ.ಶ್ರೀನಿವಾಸ್, ಕಿಸಾನ್‌ ವಿಭಾಗ ಜಿಲ್ಲಾ ಘಟಕದ ಅಧ್ಯಕ್ಷ ನಗರದ ಮಹಾದೇವಪ್ಪ, ಪ್ರಮುಖರಾದ ಶಿವು ಸೂಡೂರು, ಶಿವಲಿಂಗಮೂರ್ತಿ, ಅಕ್ಮಲ್‌, ಹಬೀಬುಲ್ಲಾ, ಗಿರೀಶ್‌, ಗಣೇಶ್, ವಿನೋದ್‌, ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.