ADVERTISEMENT

ಸಾಗರ: ಕಾಗೋಡು ಸತ್ಯಾಗ್ರಹಕ್ಕೆ 70 ವರ್ಷ

ಭೂ ಸುಧಾರಣೆ ಕಾಯ್ದೆಗೆ ಕಾರಣವಾಗಿ ಬದಲಾವಣೆಯ ‘ಕಿಡಿ’ ಹೊತ್ತಿಸಿದ ಚಳವಳಿ

ಎಂ.ರಾಘವೇಂದ್ರ
Published 18 ಏಪ್ರಿಲ್ 2021, 4:30 IST
Last Updated 18 ಏಪ್ರಿಲ್ 2021, 4:30 IST
ಸಾಗರ ತಾಲ್ಲೂಕಿನ ಕಾಗೋಡು ಗ್ರಾಮಕ್ಕೆ 1951ರಲ್ಲಿ ಸಮಾಜವಾದಿ ಮುಖಂಡ ಡಾ.ರಾಮಮನೋಹರ ಲೋಹಿಯಾ ಅವರು ಭೇಟಿ ನೀಡಿದ್ದಾಗ ನೆಟ್ಟಿದ್ದ ಆಲದ ಸಸಿ ಬೃಹತ್ ಮರವಾಗಿದೆ.
ಸಾಗರ ತಾಲ್ಲೂಕಿನ ಕಾಗೋಡು ಗ್ರಾಮಕ್ಕೆ 1951ರಲ್ಲಿ ಸಮಾಜವಾದಿ ಮುಖಂಡ ಡಾ.ರಾಮಮನೋಹರ ಲೋಹಿಯಾ ಅವರು ಭೇಟಿ ನೀಡಿದ್ದಾಗ ನೆಟ್ಟಿದ್ದ ಆಲದ ಸಸಿ ಬೃಹತ್ ಮರವಾಗಿದೆ.   

ಸಾಗರ: ತಾಲ್ಲೂಕಿನ ಕಾಗೋಡು ಗ್ರಾಮದಲ್ಲಿ ಐತಿಹಾಸಿಕ ಕಾಗೋಡು ಸತ್ಯಾಗ್ರಹ ನಡೆದು ಇಂದಿಗೆ ಸರಿಯಾಗಿ 70 ವರ್ಷ ತುಂಬಿದೆ. 1951ರ ಏಪ್ರಿಲ್ 18ರಂದು ಗೇಣಿ ರೈತರು ಜಮೀನುದಾರರ ಶೋಷಣೆ ವಿರುದ್ಧ ಸೆಟೆದು ಭತ್ತದ ಗದ್ದೆಗೆ ನೇಗಿಲಿನೊಂದಿಗೆ ಇಳಿದು ಚಳವಳಿ ಆರಂಭಿಸಿದ ಮಹತ್ವದ ದಿನ ಇದು.

ಸ್ವಾತಂತ್ರ್ಯ ಬಂದ ನಂತರವೂ ಮಲೆನಾಡಿನ ಪ್ರದೇಶದಲ್ಲಿ ಬಹುತೇಕ ಭೂಮಿಯ ಒಡೆತನ ಮೇಲ್ವರ್ಗಕ್ಕೆ ಸೇರಿದ ಜಮೀನುದಾರರ ಕೈಯಲ್ಲಿತ್ತು. ಹಿಂದುಳಿದ ವರ್ಗಕ್ಕೆ ಸೇರಿದವರು ಭೂಮಿಯಲ್ಲಿ ಗೇಣಿದಾರರಾಗಿ ಕೃಷಿ ಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ
ಪ್ರತಿ ಬೆಳೆ ತೆಗೆದ ಸಂದರ್ಭದಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಎಂದು ಗೇಣಿದಾರರು ಜಮೀನುದಾರರಿಗೆ ಭತ್ತವನ್ನು ಗೇಣಿಯಾಗಿ ಕೊಡಬೇಕಿತ್ತು.

ಗೇಣಿ ಭತ್ತವನ್ನು ಗೇಣಿದಾರರು ಕೊಳಗದಲ್ಲಿ ಅಳೆದು ಕೊಡುತ್ತಿದ್ದರು. ಹೀಗೆ ಕೊಡುತ್ತಿದ್ದ ಗೇಣಿ ಭತ್ತದ ಕೊಳಗದ ಪ್ರಮಾಣದಲ್ಲಿ ಉಂಟಾದ ವಿವಾದ ಮುಂದೆ ಚಳವಳಿಯ ಬೃಹದಾಕಾರ ರೂಪ ತಾಳಿತು. ತಾಲ್ಲೂಕಿನ ತಡಗಳಲೆ ಗ್ರಾಮದಲ್ಲಿ ಗೇಣಿ ಕೊಡುವುದನ್ನು ವಿರೋಧಿಸಿ ಗೇಣಿ ರೈತರು ಗದ್ದೆ ಹೂಡಲು ಕಟ್ಟಿದ್ದ ಎರಡು ನೊಗಗಳನ್ನು ಜಮೀನುದಾರರು ಕಡಿದು ಚೂರು ಮಾಡಿದ್ದರು. ಇದನ್ನು ವಿರೋಧಿಸಿ 1951ರ ಏಪ್ರಿಲ್ 17ರಂದು ಸಾಗರದ ಗಾಂಧಿ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆದದ್ದು ಚಳವಳಿಗೆ ನಾಂದಿಯಾಯಿತು.

ADVERTISEMENT

ಏಪ್ರಿಲ್ 18ರಂದು ಎಚ್.ಗಣಪತಿಯಪ್ಪ ಅವರ ನೇತೃತ್ವದಲ್ಲಿ ಕಾಗೋಡು ಗ್ರಾಮದ ಭೂಮಿಗೆ ಇಳಿದ 51 ಗೇಣಿ ರೈತರನ್ನು ನೇಗಿಲು, ನೊಗಗಳ ಸಮೇತ ಬಂಧಿಸಿ ಕೋರ್ಟ್‌ಗೆ ತರಲಾಯಿತು. ಅಲ್ಲಿಂದ ನಿರಂತರವಾಗಿ ಗೇಣಿ ರೈತರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬಲಾಢ್ಯರಾಗಿದ್ದ ಜಮೀನುದಾರರ ವಿರುದ್ಧ ಪೊಲೀಸರ ಬಲ ಪ್ರಯೋಗದ ನಡುವೆಯೂ ಅಹಿಂಸಾತ್ಮಕವಾಗಿ ಚಳವಳಿ ಮುಂದುವರಿಸಿದ್ದರು.

ಕಾಗೋಡು ಚಳವಳಿ ವಿಷಯ ತಿಳಿದು 1951ರ ಜೂನ್ 13ರಂದು ಸಮಾಜವಾದಿ ಮುಖಂಡ ಡಾ.ರಾಮಮನೋಹರ ಲೋಹಿಯಾ ಅವರು ಸಾಗರಕ್ಕೆ ಬಂದು ಗಾಂಧಿ ಮೈದಾನಲ್ಲಿ ಬಹಿರಂಗ ಸಭೆ ಮಾಡಿ ಜಮೀನುದಾರರ ಶೋಷಣೆಯನ್ನು ಖಂಡಿಸಿದ್ದರು. ಮರುದಿನ ಕಾಗೋಡು ಗ್ರಾಮಕ್ಕೆ ಭೇಟಿ ನೀಡಿ ಚಳವಳಿಗೆ ಬಲ ತುಂಬಿದ್ದರು. ಅದೇ ದಿನ ಅವರನ್ನು ಸಾಗರದ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು.

1951ರ ಜುಲೈ 5ರಂದು ಶಾಂತವೇರಿ ಗೋಪಾಲಗೌಡರು ಕೂಡ ಕಾಗೋಡು ಚಳವಳಿಯನ್ನು ಬೆಂಬಲಿಸಿದ್ದಕ್ಕೆ ಬಂಧನಕ್ಕೆ ಒಳಗಾಗಿದ್ದರು. ಅದೇ ವರ್ಷ ಸೆ.21ರಂದು ಜಯಪ್ರಕಾಶ್ ನಾರಾಯಣ್ ಬಂದು ಜೈಲು ಸೇರಿದ್ದ ಸತ್ಯಾಗ್ರಹಿಗಳನ್ನು ಭೇಟಿಯಾಗಿ ಧೈರ್ಯ ತುಂಬಿದ್ದರು. ಹೀಗೆ ಸಮಾಜ ವಾದಿಗಳ ಪ್ರವೇಶ ಕಾಗೋಡು ಚಳವಳಿಗೆ ತಾತ್ವಿಕ ಚೌಕಟ್ಟಿನ ಜೊತೆಗೆ ನೈತಿಕ ಬಲವನ್ನೂ ತಂದಿದ್ದು ಇತಿಹಾಸ.

ಅಂತಿಮವಾಗಿ 1974ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಭೂಸುಧಾರಣೆ ಕಾಯ್ದೆ ಜಾರಿಗೆ ಬಂದು ‘ಉಳುವವನೆ ಹೊಲದೊಡೆಯ’ ಎಂಬ ಘೋಷಣೆಯ ಆಶಯಕ್ಕೆ ಕಾನೂನಿನ ಮುದ್ರೆ ಬಿದ್ದಿದ್ದು ಒಂದು ಐತಿಹಾಸಿಕ ಸಾಧನೆ. ಈ ಮೂಲಕ ಕಾಗೋಡು ಸತ್ಯಾಗ್ರಹದ ಕಾರಣಕ್ಕೆ ಗೇಣಿ ಪದ್ಧತಿ ರದ್ದಾಗಿ ರಾಜ್ಯದ 5 ಲಕ್ಷಕ್ಕೂ ಹೆಚ್ಚು ಗೇಣಿ ರೈತರಿಗೆ ಭೂಮಿಯ ಹಕ್ಕು ದೊರಕಿದ್ದು ಇತಿಹಾಸದಲ್ಲಿ ಮರೆಯಲಾಗದ ಸಂಗತಿ.

1951ರ ‘ಪ್ರಜಾವಾಣಿ’ ಪತ್ರಿಕೆಯ ಸಂಪಾದಕೀಯದ ಸಾಲುಗಳು: 1951ರ ಮೇ 16ರ ಸಂಚಿಕೆಯಲ್ಲಿ ‘ಪ್ರಜಾವಾಣಿ’ ಕಾಗೋಡು ಸತ್ಯಾಗ್ರಹವನ್ನು ಬೆಂಬಲಿಸಿ ‘ಸಿಡಿದೀತು’ ಎಂಬ ಶೀರ್ಷಿಕೆಯಡಿ ಸಂಪಾದಕೀಯವನ್ನು ಪ್ರಕಟಿಸಿತ್ತು. ಇದರ ಆಯ್ದ ಸಾಲುಗಳು ಇಲ್ಲಿವೆ.

‘ಈ ಗ್ರಾಮಾಂತರಗಳ ರೈತರು ಕೇವಲ ರೈತರಲ್ಲ: ಮಲೆನಾಡ ರೈತರು ಹಬ್ಬಿದ ಮಲೆಗಳ ದಟ್ಟನಾದ ಕಾಡುಗಳ ಮಧ್ಯೆ ಬಾಹ್ಯ ಜಗತ್ತಿಗೆ ದೂರವಾಗಿಯೊ ಎಂಬಂತೆ ಪ್ರತ್ಯೇಕವಾಗಿ ಬಾಳುತ್ತಿರುವವರು: ಈ ಜನ ಪೊಲೀಸರ ಲಾಟಿ ಛಾರ್ಜ್‌ಗಳನ್ನು, ಬಂಧನಗಳನ್ನು ಸಹಿಸಿಕೊಂಡು ಸತ್ಯಾಗ್ರಹ ನಡೆಸುತ್ತಿರಬೇಕಾದರೆ ಬಹಳ ಬಲವತ್ತರವಾದ ಕಾರಣಗಳಿರಬೇಕೆಂಬುದರಲ್ಲಿ ಸಂಶಯವಿಲ್ಲ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.