ADVERTISEMENT

ಓಂಶಕ್ತಿ ಯಾತ್ರೆ ಮುಗಿಸಿ ಬಂದವರಿಗೆ 7 ದಿನ ಕ್ವಾರಂಟೈನ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 4:31 IST
Last Updated 6 ಜನವರಿ 2022, 4:31 IST
ತಮಿಳುನಾಡಿನಿಂದ ಓಂ ಶಕ್ತಿಯಾತ್ರೆ ಮುಗಿಸಿ ಶಿವಮೊಗ್ಗಕ್ಕೆ ಮರಳಿದ ಮಹಿಳೆಯರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಒಳಪಡಿಸಿದರು.
ತಮಿಳುನಾಡಿನಿಂದ ಓಂ ಶಕ್ತಿಯಾತ್ರೆ ಮುಗಿಸಿ ಶಿವಮೊಗ್ಗಕ್ಕೆ ಮರಳಿದ ಮಹಿಳೆಯರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಒಳಪಡಿಸಿದರು.   

ಶಿವಮೊಗ್ಗ: ತಮಿಳುನಾಡಿನಲ್ಲಿ ಓಂಶಕ್ತಿ ಯಾತ್ರೆ ಮುಗಿಸಿ ಜಿಲ್ಲೆಗೆ ಮರಳಿದ ಮಹಿಳೆಯರಿಗೆ ಜಿಲ್ಲಾಡಳಿತ ಸ್ಕ್ರೀನಿಂಗ್ ಕಾರ್ಯ ನಡೆಸಿ, ಸ್ವ್ಯಾಬ್ ಸಂಗ್ರಹಿಸಿ ಪ್ರಯೋಗಾಲಯಕ್ಕೆಕಳುಹಿಸಿದೆ.

ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಮರಳುತ್ತಿರುವ ಬಸ್ಸುಗಳನ್ನು ಸಹ್ಯಾದ್ರಿ ಕಾಲೇಜು ಬಳಿ ತಡೆದು ತಪಾಸಣೆ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮಹಿಳೆಯರಿಗೆ ಸ್ಕ್ರೀನಿಂಗ್ ಮಾಡಿದರು.

ಈ ಬಾರಿ ಶಿವಮೊಗ್ಗದಿಂದ 5 ಸಾವಿರಕ್ಕೂ ಹೆಚ್ಚು ಮಹಿಳೆಯರು ಓಂ ಶಕ್ತಿ ದರ್ಶನಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ADVERTISEMENT

ಡಿ.31ರಂದು ಪ್ರವಾಸ ಆರಂಭಿಸಿದ್ದ ಮಹಿಳೆಯರು ಬುಧವಾರ ಹಿಂತಿರುಗಿದ್ದಾರೆ. ಓಂ ಶಕ್ತಿ ದರ್ಶನ ಪಡೆದು ಮಂಡ್ಯ ಜಿಲ್ಲೆಗೆ ಮರಳಿದ 30ಕ್ಕೂ ಅಧಿಕ ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಶಿವಮೊಗ್ಗ ಜಿಲ್ಲೆಯ ಜನರಲ್ಲಿ ಭೀತಿಗೆ ಕಾರಣವಾಗಿದೆ. ಹಾಗಾಗಿ ಈ ಮಹಿಳೆಯರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಕ್ವಾರಂಟೈನ್‌ಗೆ ಸೂಚನೆ: ತಮಿಳುನಾಡಿನಿಂದ ಬಂದ 25 ಬಸ್ಸುಗಳನ್ನು ತಡೆದು ಎಲ್ಲರನ್ನೂ ತಪಾಸಣೆ ಮಾಡಲಾಗಿದೆ. ಎಲ್ಲರಿಗೂ 7 ದಿನ ಹೋಂ ಕ್ವಾರಂಟೈನ್‌ಗೆ ಸೂಚನೆ ನೀಡಲಾಗಿದೆ ಎಂದು ಡಿಎಚ್‌ಒ ಡಾ. ರಾಜೇಶ್‌ ಸುರಗಿಹಳ್ಳಿ
ತಿಳಿಸಿದರು.

ಓಂ ಶಕ್ತಿ ತೀರ್ಥಯಾತ್ರೆಗೆ ತೆರಳಿರುವ ನೂರಕ್ಕೂ ಹೆಚ್ಚು ಬಸ್ಸುಗಳು ಡಿಪೊಗೆ ಮರಳುತ್ತಿದ್ದಂತೆ ಬಸ್ಸುಗಳಿಗೆ
ಸ್ಯಾನಿಟೈಸ್ ಮಾಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಡಿಪೊಗೆ ಬರುತ್ತಿದ್ದಂತೆ ಬಸ್ಸುಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿ, ನಂತರ ನಿಯಮಿತ ಮಾರ್ಗಗಳಿಗೆ ಬಸ್‌ಗಳನ್ನು ಕಳುಹಿಸಲಾಗುವುದು ಎಂದು ಡಿಪೊ ವ್ಯವಸ್ಥಾಪಕರು
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.