ಶಿವಮೊಗ್ಗ: ರಜೆಯ ದಿನ ಭಾನುವಾರ ಸೂರ್ಯ ಇನ್ನೂ ಕಣ್ಣು ಬಿಟ್ಟಿರಲಿಲ್ಲ, ಅಷ್ಟೊತ್ತಿಗಾಗಲೇ ಕೈಯಲ್ಲಿ ಸಲಿಕೆ, ಗುದ್ದಲಿ, ಬುಟ್ಟಿ ಹಾಗೂ ಖಾಲಿ ಚೀಲಗಳೊಂದಿಗೆ 100ಕ್ಕೂ ಹೆಚ್ಚು ಸ್ವಯಂ ಸೇವಕರ ತಂಡ ಸ್ವಚ್ಛತೆಗೆ ಮುಂದಾಯಿತು. ಗಿಡಗಂಟಿ, ಮದ್ಯದ ಖಾಲಿ ಬಾಟಲಿ ಹಾಗೂ ತ್ಯಾಜ್ಯದಿಂದಾಗಿ ಹಾಳು ಕೊಂಪೆಯಂತಿದ್ದ ಎಪಿಎಂಸಿ ಎದುರಿನ ಸರ್ಕಾರಿ ಅಂಗವಿಕಲರ ಸಹಾಯವಾಣಿ ಕೇಂದ್ರದ ಆವರಣ ಎರಡೇ ತಾಸಿನಲ್ಲಿ ಸ್ವಚ್ಛಗೊಳಿಸಿ ಹೊಸ ರೂಪ ನೀಡಲಾಯಿತು.
ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ನಗರದ ಬಿ.ಎಚ್. ರಸ್ತೆಯ ರೇಷ್ಮೆ ಇಲಾಖೆಗೆ ಕಟ್ಟಡದಲ್ಲಿ ಈ ಕಾಯಕಲ್ಪ ನಡೆಯಿತು. ನಗರದ ಸರ್ಜಿ ಫೌಂಡೇಷನ್, ಪರೋಪಕಾರಂ ಸಂಘ, ಶಿವಮೊಗ್ಗ ರೌಂಡ್ ಟೇಬಲ್ ಹಾಗೂ ಸಕ್ಷಮ ಸಂಘಟನೆಗಳ ಸದಸ್ಯರು ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಆವರಣದಲ್ಲಿ ರಾಶಿ ರಾಶಿ ಮದ್ಯದ ಬಾಟಲ್‌ಗಳು, ಆಟೋವರ್ಕ್ ಶಾಪ್‌ಗಳ ಘನ ತ್ಯಾಜ್ಯ, ಸುತ್ತಮುತ್ತಲ ಜನರು ತಂದು ಸುರಿಯುತ್ತಿದ್ದ ಪ್ಲಾಸ್ಟಿಕ್‌ನಿಂದಾಗಿ ಇಡೀ ವಾತಾವರಣ ಹದಗೆಟ್ಟಿತ್ತು. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇತ್ತು. ಅಲ್ಲದೇ ಕಟ್ಟಡದ ಮೇಲ್ಚಾವಣಿಯಲ್ಲಿ ಕಸ,
ಗಿಡ ಗಂಟಿಗಳು ಬೆಳೆದು ಇದು ಕಚೇರಿಯೋ, ಭೂತ ಬಂಗಲೆಯೋ ಎಂಬಂತಿತ್ತು. ಶೌಚಾಲಯಕ್ಕೆ ಹೋಗುವ ದಾರಿ ಗಿಡ ಗಂಟಿ ಬೆಳೆದು ತ್ಯಾಜ್ಯದಿಂದ ಮುಚ್ಚಿ ಹೋಗಿತ್ತು. ಅದನ್ನು ಸ್ವಚ್ಛಗೊಳಿಸಿ ಕಚೇರಿ ಕಳೆಗಟ್ಟುವಂತೆ ಮಾಡಲಾಯಿತು.
ಶ್ರಮಧಾನದ ಬಳಿಕ ಮಾತನಾಡಿದ ಡಾ.ಧನಂಜಯ ಸರ್ಜಿ, ಸ್ಮಾರ್ಟ್‌ಸಿಟಿ ಹಿನ್ನೆಲೆ ನಗರದಲ್ಲಿ ಒಂದಷ್ಟು ಕಾಮಗಾರಿ ಭರದಿಂದ ಸಾಗಿದೆ. ಇದಕ್ಕೆ ಪೂರಕವಾಗಿ ನಾವು ಸ್ವಚ್ಛತೆ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಸುರಿಯದೆ ಅಳವಡಿಸಿರುವ ಮೆಶ್‌ಗಳಲ್ಲಿ ಹಾಕುವಂತೆ ಮನವಿ ಮಾಡಿದರು.
ಪರೋಪಕಾರಂನ ತ್ಯಾಗರಾಜ್ ಮಿತ್ಯಾಂತ ಮಾತನಾಡಿ, ‘ಕಳೆದ ಐದು ವರ್ಷಗಳಲ್ಲಿ ನಮ್ಮ ತಂಡ
587 ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ’ ಎಂದು ಹೇಳಿದರು.
ಪರೋಪಕಾರಂ ಶ್ರೀಧರ್, ಸಕ್ಷಮ ಸಂಸ್ಥೆಯ ಶಿವಕುಮಾರ್, ಪಾಲಿಕೆ ಸಿಬ್ಬಂದಿ, ಆಯನೂರಿನ ಸ್ವಯಂ ಸೇವಕರು ಭಾಗವಹಿಸಿದ್ದರು. ತ್ಯಾಜ್ಯ ಹಾಕಲು ಎರಡು ಮೆಶ್ ಅಳವಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.