ADVERTISEMENT

ಕಾನ್‌ಸ್ಟೆಬಲ್‌ಗೆ ಚಾಕುವಿನಿಂದ ಇರಿತ, ಆರೋಪಿ ಕಾಲಿಗೆ ಗುಂಡು

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 10:52 IST
Last Updated 21 ಜೂನ್ 2022, 10:52 IST
 ಆರೋಪಿ ಶಾಹಿದ್ ಖುರೇಷಿ
 ಆರೋಪಿ ಶಾಹಿದ್ ಖುರೇಷಿ   

ಶಿವಮೊಗ್ಗ: ಬಂಧಿಸಲು ತೆರಳಿದ್ದ ಕಾನ್‌ಸ್ಟೆಬಲ್‌ ಎದೆಗೆ ಚಾಕುವಿನಿಂದ ಇರಿದಿದ್ದ ಆರೋಪಿಯ ಕಾಲಿಗೆ ಮಂಗಳವಾರ ಪೊಲೀಸರು ಗುಂಡು ಹೊಡೆದಿದ್ದಾರೆ.

ಪೊಲೀಸರು ಗುಂಡೇಟಿನಿಂದ ಗಾಯಗೊಂಡಿರುವ ಲಷ್ಕರ್‌ ಮೊಹಲ್ಲಾ ನಿವಾಸಿ ಶಾಹಿದ್ ಖುರೇಷಿಯನ್ನು (22) ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ: ತಿಂಗಳ ಹಿಂದೆ ಆರ್‌ಎಂಎಲ್ ನಗರದಲ್ಲಿ ಬೈಕ್‌ನಲ್ಲಿ ಬಂದು ವ್ಯಕ್ತಿಯೊಬ್ಬರಿಂದ ಹಣ ಕಿತ್ತುಕೊಂಡು ಹೋದ ಘಟನೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ದೊಡ್ಡಪೇಟೆ ಪೊಲೀಸರು ಪ್ರಕರಣದ ಆರೋಪಿ ಶಾಹಿದ್ ಖುರೇಷಿಯನ್ನು ಬಂಧಿಸಲು ಬಲೆ ಬೀಸಿದ್ದರು.

ADVERTISEMENT

ಖುರೇಷಿಯ ತಂದೆ ಆಟೊ ಚಾಲಕ ಇದ್ದು, ಎಂ.ಕೆ.ಕೆ ರಸ್ತೆಯಲ್ಲಿ ಎರಡನೇ ಪತ್ನಿಯೊಂದಿಗೆ ವಾಸವಿದ್ದಾರೆ. ಅದೇ ಮನೆಯಲ್ಲಿ ಆರೋಪಿ ಇದ್ದಾನೆ ಎಂಬ ಮಾಹಿತಿ ತಿಳಿದು ಆತನನ್ನು ಬಂಧಿಸಲು ಬೆಳಿಗ್ಗೆ ಪೊಲೀಸರು ತೆರಳಿದ್ದರು. ಈ ವೇಳೆ ಶಾಹಿದ್ ಖುರೇಷಿ ದೊಡ್ಡಪೇಟೆ ಠಾಣೆ ಕಾನ್‌ಸ್ಟೆಬಲ್ ಗುರುನಾಯ್ಕ ಅವರ ಎದೆಗೆ ಚಾಕುವಿನಿಂದ ಇರಿದು ತಪ್ಪಿಸಿಕೊಂಡು ಪರಾರಿಯಾಗಿದ್ದನು. ಮತ್ತೊಬ್ಬ ಕಾನ್‌ಸ್ಟೆಬಲ್ ರಮೇಶ್ ಕೂಡ ಆಗ ಗಾಯಗೊಂಡಿದ್ದರು.

ಆರೋಪಿಯ ಪತ್ತೆಗೆ ದೊಡ್ಡಪೇಟೆ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿ ಇರುವ ಸ್ಥಳದ ಬಗ್ಗೆ ಮಾಹಿತಿ ತಿಳಿದು ಬಂಧಿಸಲು ತೆರಳಿದಾಗ ಮತ್ತೆ ಪೊಲೀಸರ ಮೇಲೆ ಲಾಂಗ್‌ನಿಂದ ದಾಳಿ ನಡೆಸಲು ಮುಂದಾಗಿದ್ದು, ಈ ವೇಳೆ ದೊಡ್ಡಪೇಟೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.