ADVERTISEMENT

ಸಂಚಾರ ನಿಯಮ ಉಲ್ಲಂಘಿಸಿದರೆ ಕ್ರಮ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 20:24 IST
Last Updated 23 ಜೂನ್ 2019, 20:24 IST
ಸಾಗರದಲ್ಲಿ ಪೊಲೀಸ್ ಇಲಾಖೆ ಭಾನುವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ. ಅಶ್ವಿನಿ ಮಾತನಾಡಿದರು
ಸಾಗರದಲ್ಲಿ ಪೊಲೀಸ್ ಇಲಾಖೆ ಭಾನುವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ. ಅಶ್ವಿನಿ ಮಾತನಾಡಿದರು   

ಸಾಗರ: ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಸಂಚಾರ ನಿಯಮ ಉಲ್ಲಂಘಿಸಿದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ. ಅಶ್ವಿನಿ ಹೇಳಿದರು.

ಇಲ್ಲಿನ ಶಾರದಾಂಬಾ ಸಭಾಭವನದಲ್ಲಿ ಪೊಲೀಸ್ ಇಲಾಖೆ ಭಾನುವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ನೀವು ಯಾವ ಕ್ರಮ ಕೈಗೊಂಡಿದ್ದೀರಿ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸುಪ್ರೀಂ ಕೊರ್ಟ್ ತರಾಟೆಗೆ ತೆಗೆದುಕೊಂಡಿದೆ. ಸಂಚಾರ ನಿಯಮ ಉಲ್ಲಂಘಿಸಿದಾಗ ಯಾವ ಉದ್ದೇಶಕ್ಕೆ ಪ್ರಕರಣ ದಾಖಲಿಸಲಾಗುತ್ತದೆ ಎಂಬುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಅಪರಾಧ ಪ್ರಕರಣಗಳಿಗಿಂತ ಅಪಘಾತಗಳಲ್ಲಿ ಸಾವು-ನೋವು ಸಂಭವಿಸುತ್ತಿರುವುದು ಹೆಚ್ಚಾಗುತ್ತಿದೆ. ಅಂಕಿ ಅಂಶಗಳು ಇವುಗಳನ್ನು ದೃಢಪಡಿಸಿವೆ. ಹೀಗಾಗಿ ಹೆಲ್ಮೆಟ್ ಧರಿಸದೆ, ಚಾಲನಾ ಪರವಾನಗಿ ಇಲ್ಲದೆ, ದಾಖಲೆಗಳು ಇಲ್ಲದೆ ವಾಹನ ಚಲಾಯಿಸಿದರೆ ಇಲಾಖೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತದೆ ಎಂದು ತಿಳಿಸಿದರು.

ಸಾರಿಗೆ ಇಲಾಖೆ ಸಹಯೋಗದೊಂದಿಗೆ ಪೊಲೀಸ್ ಇಲಾಖೆ ಸೇರಿ ವಾಹನ ಚಾಲನಾ ಪರವಾನಗಿ ವಿತರಿಸುವ ಒಂದು ದಿನದ ಕಾರ್ಯಕ್ರಮವನ್ನು ಶೀಘ್ರ ಆಯೋಜಿಸುವುದಾಗಿ ಹೇಳಿದರು.

ತಾಲ್ಲೂಕಿನಲ್ಲಿ ಗಾಂಜಾ ಬೆಳೆಯುವ ಮತ್ತು ಮಾರಾಟ ಮಾಡುವ ದಂಧೆ ಹೆಚ್ಚುತ್ತಿರುವ ಬಗ್ಗೆ ದೂರುಗಳಿವೆ. ಈಗಾಗಲೇ ಇಲಾಖೆ ಈ ಬಗ್ಗೆ ಗಮನಹರಿಸಿದ್ದು, ಕೆಲವು ಪ್ರಕರಣಗಳನ್ನು ದಾಖಲಿಸಿದ ನಂತರ ದೂರುಗಳು ಕಡಿಮೆಯಾಗಿವೆ ಎಂದರು.

ಮರಳು ಸಾಗಾಣಿಕೆ ಸಂಬಂಧ ಸಮರ್ಪಕ ಕಾನೂನು ಜಾರಿಗೆ ಬರುವ ಅಗತ್ಯವಿದೆ. ಈಗಿರುವ ಕಾನೂನಿನಲ್ಲಿನ ಗೊಂದಲದಿಂದ ಪೊಲೀಸ್ ಇಲಾಖೆ ಒತ್ತಡ ಅನುಭವಿಸುವಂತಾಗಿದೆ. ಮರಳು ಸಾಗಾಟ ಸಮಸ್ಯೆ ನಿಭಾಯಿಸುವುದಲ್ಲದೆ ಇಲಾಖೆಗೆ ಇತರ ಮಹತ್ವದ ಜವಾಬ್ದಾರಿಗಳೂ ಇವೆ ಎಂದು ಹೇಳಿದರು.

ಊರಿನ ಶಾಂತಿ, ಸೌಹಾರ್ದವನ್ನು ಕಾಪಾಡಿಕೊಳ್ಳುವುದು ಇಲ್ಲಿನ ನಾಗರಿಕರ ಜವಾಬ್ದಾರಿಯಾಗಿದೆ. ಇಂತಹ ವಿಷಯದಲ್ಲಿ ಇಲಾಖೆಯ ಮಧ್ಯ ಪ್ರವೇಶದ ಅಗತ್ಯವಿಲ್ಲದಂತೆ ಜನರೇ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಗೆ ಒಂದೇ ಮಹಿಳಾ ಪೊಲೀಸ್ ಠಾಣೆ ಮಂಜೂರಾಗುವುದರಿಂದ ಶಿವಮೊಗ್ಗದಲ್ಲಿ ಈಗಾಗಲೇ ಒಂದು ಠಾಣೆ ಇದ್ದು, ಸಾಗರಕ್ಕೆ ಈ ಠಾಣೆ ಮಂಜೂರಾಗುವುದು ಕಷ್ಟಸಾಧ್ಯ. ಟ್ರಾಫಿಕ್ ಪೊಲೀಸ್ ಠಾಣೆಯನ್ನು ಇಲ್ಲಿ ಆರಂಭಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದರು.

ಪ್ರಮುಖರಾದ ಟಿ.ಡಿ.ಮೇಘರಾಜ್, ಲಕ್ಷ್ಮಣ್ ಸಾಗರ್, ಪರಮೇಶ್ವರ ದೂಗೂರು, ಗಣೇಶ್ ಪ್ರಸಾದ್, ತಾರಾಮೂರ್ತಿ, ಶಿವಾನಂದ ಕುಗ್ವೆ, ಸೈಯದ್ ಜಾಕೀರ್, ಚೇತನ್ ರಾಜ್ ಕಣ್ಣೂರು, ರಾಜಶೇಖರ್ ಗಾಳಿಪುರ, ತಾಹಿರ್ ಮಾತನಾಡಿದರು.

ಸಹಾಯಕ ಪೊಲೀಸ್ ಅಧೀಕ್ಷಕ ಯತೀಶ್ ಎನ್. ಸರ್ಕಲ್ ಇನ್‌ಸ್ಪೆಕ್ಟರ್ ಮಹಾಬಲೇಶ್ ನಾಯ್ಕ್, ಹೇಮಂತಕುಮಾರ್, ಪೌರಾಯುಕ್ತ ಎಸ್.ರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.